ಕಳೆದ ವರ್ಷ ಏಪ್ರಿಲ್‌ನಲ್ಲಿ “ಡಿಸೆಂಬರ್ 16′ ಚಿತ್ರದ ಆಡಿಯೋ ಬಿಡುಗಡೆಯಾಗಿತ್ತು. ಈಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಹಾರರ್ ಚಿತ್ರ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕೂಡ ಇಲ್ಲಿದೆ. ಮಧುಸೂದನ್ ಹವಾಲ್ದಾರ್ ನಿರ್ದೇಶನದ ಈ ಚಿತ್ರಕ್ಕೆ ಉಮೇಶ್ ಬಣಕಾರ್ ಅವರು ಒಂಥರಾ ಹೀರೋ ಇದ್ದಂಗೆ. ಅವರೊಬ್ಬರೇ ಅಲ್ಲ, ಇಲ್ಲಿ ಇತರೆ ಕಲಾವಿದರೂ ಇದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಶೀನಾ ರೈ, ಮತ್ತೂಬ್ಬರು ಸಂಹಿತಾ. ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಕೊಡಲೆಂದೇ ನಿರ್ದೇಶಕರು ತಂಡದೊಂದಿಗೆ ಪತ್ರಕರ್ತರ ಎದುರು ಬಂದಿದ್ದರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿರ್ದೇಶಕರು, ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ.
“ಅಂದಹಾಗೆ, ಇದು ಸಿನಿಮಾದೊಳಗಿನ ಸಿನಿಮಾ ಕಥೆ ಹೊಂದಿದೆ. ಚಿತ್ರದಲ್ಲಿ ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಒಂದು ತಂಡ ಚಿತ್ರೀಕರಣಕ್ಕೆ ಆಯ್ದ ತಾಣಗಳನ್ನು ಹುಡುಕಲು ಜರ್ನಿ ಶುರುಮಾಡುತ್ತೆ. ಒಂದು ಹಂತದಲ್ಲಿ ಒಂದು ಸ್ಥಳಕ್ಕೆ ಹೋದ ಆ ತಂಡಕ್ಕೆ, ಸಾಕಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ. ಅಲ್ಲಿ ಹೋದವರು, ಎದುರಾದ ಸಮಸ್ಯೆಯನ್ನು ಎದುರಿಸಿ ಹೇಗೆ ಹೊರ ಬರುತ್ತಾರೆ’ ಎಂಬುದು ಕಥೆ ಎನ್ನುತ್ತಾರೆ ನಿರ್ದೇಶಕರು.
ಉಮೇಶ್ ಬಣಕಾರ್ ಅವರಿಗೆ ಡಬ್ಬಿಂಗ್ ವೇಳೆ ಚಿತ್ರ ನೋಡಿದಾಗಲೇ, ಇದೊಂದು ಬೇರೆ ರೀತಿಯ ಸಿನಿಮಾ ಆಗಿ ನೋಡುಗರಿಗೆ ಇಷ್ಟವಾಗುತ್ತೆ ಅಂತಂದುಕೊಂಡರಂತೆ. ಅವರಿಲ್ಲಿ ಸುಪಾರಿ ಕಿಲ್ಲರ್ ಆಗಿ ನಟಿಸಿದ್ದಾರಂತೆ. “ಚಿತ್ರದಲ್ಲಿ ಸಿನಿಮಾ ಕಥೆ ಇದೆ. ಅದರ ಜರ್ನಿ ಶುರುವಾದಾಗ, ಒಂದು ಸಮಸ್ಯೆ ಎದುರಾಗುತ್ತೆ. ಅಲ್ಲಿ ಏನೆಲ್ಲಾ ಆಗಿಹೋಗುತ್ತೆ ಎಂಬುದನ್ನು ನಿರ್ದೇಶಕರು ರೋಚಕವಾಗಿ ತೋರಿಸಿದ್ದಾರೆ. ಒಂದು ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಹಾರರ್ ಅಂಶ ಹೊಂದಿರುವ ಈ ಚಿತ್ರಕ್ಕೆ ಎಲ್ಲರ ಸಹಕಾರ ಇರಲಿ’ ಅಂದರು ಉಮೇಶ್ ಬಣಕಾರ್.
ಮನ್‌ದೀಪ್ ರಾಯ್ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸಿದ್ದಾರಂತೆ. “ಇದು ಅಲ್ಫೆ†ಡ್ ಹಿಚ್‌ಕಾಕ್ ಶೈಲಿಯ ಸಿನಿಮಾ. ಇದೊಂದು ಥ್ರಿಲ್ಲರ್ ಅಂಶಗಳೊಂದಿಗೆ ಸಾಗುವ ಚಿತ್ರ. ನಾನು ಹವಾಲ್ದಾರ ಜತೆ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೆ. ಆಗೆಲ್ಲಾ ರೀಲ್‌ನಲ್ಲಿ ಶೂಟ್ ಆಗುತ್ತಿತ್ತು. ಈಗ ಡಿಜಿಟಲ್ ಬಂದಿದೆ. ಇದರಿಂದ ಯಾವ್ಯಾವುದೋ ಆ್ಯಂಗಲ್‌ನಲ್ಲಿ ಶೂಟ್ ಮಾಡಿದ್ದಾರೆ. ನನ್ನ ಅಭಿನಯದ ಭಾಗವನ್ನು ಜಾಸ್ತಿ ಶಾಟ್ಸ್ ತಗೊಂಡಿದ್ದು ವಿಶೇಷ’ ಅಂದರು ಮನ್‌ದೀಪ್‌ರಾಜ್.
ದೆಹಲಿ ಮೂಲದ ಶೀನಾ ರೈಗೆ ಇಲ್ಲಿ ಗಟ್ಟಿತನದ ಪಾತ್ರವಿದೆಯಂತೆ. ಸಂಹಿತಾಗೆ ಇಲ್ಲಿ ನಂದಿನಿ ಪಾತ್ರ ಸಿಕ್ಕಿದೆ. ಹಾರರ್ ಚಿತ್ರ ಇದಾಗಿದ್ದರೂ, ಹೊಸಬಗೆಯ ನಿರೂಪಣೆ ಇದೆ ಅಂದರು ಸಂಹಿತಾ. ಅಭಿಷೇಕ್ ಪಾಟೀಲ್, ಪದ್ಮನಾಭರೆಡ್ಡಿ ಮಾತನಾಡಿದರು. ಇನ್ನೊಂದು ವಿಶೇಷವೆಂದರೆ, ಇಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಕೂಡ ನಟಿಸಿದ್ದಾರೆ.