ದಕ್ಷಿಣ ಸಿನಿರಂಗಕ್ಕೆ ವರ್ಷದ ಆರಂಭ ಭರ್ಜರಿ ಯಶಸ್ಸು ತಂದುಕೊಟ್ಟಿದೆ. ಈ ವಾರ ಬಹುನಿರೀಕ್ಷಿತ ʼಆಡುಜೀವಿತಂʼ , ʼಟಿಲ್ಲು ಸ್ಕ್ವೇರ್ʼ ಸಿನಿಮಾಗಳು ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಏಪ್ರಿಲ್ ತಿಂಗಳಿನಲ್ಲಿ ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ತೆರೆ ಕಾಣಲಿವೆ. ಇದರೊಂದಿಗೆ ಸ್ಯಾಂಡಲ್ ವುಡ್ ನಲ್ಲೂ ಪ್ರೇಕ್ಷಕರ ಮನಗೆಲ್ಲಲು ಸಿನಿಮಾಗಳು ರಿಲೀಸ್ ಆಗಲಿವೆ.
ಏಪ್ರಿಲ್‌ನಲ್ಲಿ ತೆರೆ ಕಾಣಲಿರುವ ಸೌತ್ ಸಿನಿಮಾಗಳು:
ʼಫ್ಯಾಮಿಲಿ ಸ್ಟಾರ್ʼ (ತೆಲುಗು): ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ʼ ಫ್ಯಾಮಿಲಿ ಸ್ಟಾರ್ʼ ಈಗಾಗಲೇ ಟಾಲಿವುಡ್ ವಲಯದಲ್ಲಿ ಹೈಪ್ ಹೆಚ್ಚಿಸಿರುವ ಸಿನಿಮಾಗಳಲ್ಲಿ ಒಂದಾಗಿದೆ. ದೇವರಕೊಂಡ ಮಿಡಲ್ ಕ್ಲಾಸ್ ಫ್ಯಾಮಿಲಿ ಮ್ಯಾನ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರೊಮ್ಯಾಂಟಿಕ್ – ಫ್ಯಾಮಿಲಿ ಡ್ರಾಮಾ ಕಥೆವುಳ್ಳ ಈ ಸಿನಿಮಾ ಏ.5 ರಂದು ರಿಲೀಸ್ ಆಗಲಿದೆ. ಈ ಮೊದಲು ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗುವ ಪ್ಲ್ಯಾನ್ ಇತ್ತು.
ಕಲ್ವನ್ (ತಮಿಳು): ಇಬ್ಬರು ಕಳ್ಳರ ಕಥೆಯನ್ನೊಳಗೊಂಡಿರುವ ʼಕಲ್ವನ್ʼ ಅಡ್ವೆಂಚರ್ ಅನುಭವ ನೀಡಲಿದೆ. ಆನೆಗಳ ಹಿಂಡು ಪಣಮಕಾಡು ಅರಣ್ಯಕ್ಕೆ ಬರುತ್ತಿರುವುದನ್ನು ತಿಳಿದುಕೊಂಡ ಇಬ್ಬರು ಕಳ್ಳರ ಆಕ್ಷನ್-ಡ್ರಾಮಾ ಕಥೆಯನ್ನು ಚಿತ್ರ ಒಳಗೊಂಡಿದೆ.
ಜಿವಿ ಪ್ರಕಾಶ್ ಕುಮಾರ್ ಪ್ರಮುಖ ಪಾತ್ರದಲ್ಲಿ ಭಾರತಿ ರಾಜ, ಇವಾನಾ, ಧೀನಾ, ಜಿ. ಜ್ಞಾನಸಂಬಂಧಂ ಮತ್ತು ವಿನೋತ್ ಮುನ್ನಾ ಮುಂತಾದವರು ನಟಿಸಿದ್ದಾರೆ. ಪಿವಿ ಶಂಕರ್ ನಿರ್ದೇಶನದ ಈ ಚಿತ್ರವು ಏಪ್ರಿಲ್ 4 ರಂದು ತೆರೆ ಕಾಣಲಿದೆ.
ವರ್ಷಂಗಲ್ಕು ಶೇಷಮ್ (ಮಲಯಾಳಂ): ಪ್ರಣವ್ ಮೋಹನ್ ಲಾಲ್ ಮತ್ತು ಧ್ಯಾನ್ ಶ್ರೀನಿವಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ 1970-80ರ ದಶಕದಲ್ಲಿ ಮದ್ರಾಸ್‌ನ (ಇಂದಿನ ಚೆನ್ನೈ) ಸಿನಿಮಾ ಜಗತ್ತಿನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ ಇಬ್ಬರು ಸ್ನೇಹಿತರ ಜೀವನದ ಸುತ್ತ ಸುತ್ತುತ್ತದೆ.
ವಿನೀತ್ ಶ್ರೀನಿವಾಸನ್ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಬೇಸಿಲ್ ಜೋಸೆಫ್, ಅಜು ವರ್ಗೀಸ್, ನೀರಜ್ ಮಾಧವ್, ಕಲ್ಯಾಣಿ ಪ್ರಿಯದರ್ಶನ್, ನೀತಾ ಪಿಳ್ಳೈ, ಅರ್ಜುನ್ ಲಾಲ್, ನಿಖಿಲ್ ನಾಯರ್, ಶಾನ್ ರೆಹಮಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಿವಿನ್ ಪೌಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಏ.11 ರಂದು ಸಿನಿಮಾ ರಿಲೀಸ್ ಆಗಲಿದೆ.
ಗೀತಾಂಜಲಿ ಮಲ್ಲಿ ವಚಿಂದಿ(ತೆಲುಗು) : ಇದು ನಟಿ ಅಂಜಲಿ ಅವರ 50ನೇ ಸಿನಿಮಾವಾಗಿದ್ದು,ಹಾರರ್-ಕಾಮಿಡಿ ಕಥೆಯನ್ನೊಳಗೊಂಡಿದೆ. ಶಿವ ತುರ್ಲಪಾಟಿ ನಿರ್ದೇಶನದ ಈ ಚಿತ್ರಕ್ಕೆ ಕೋನ ವೆಂಕಟ್ ಮತ್ತು ಭಾನು ಭೋಗವರಪು ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಿವಾಸ್ ರೆಡ್ಡಿ, ಸತ್ಯಂ ರಾಜೇಶ್, ಸತ್ಯ, ಶಕಲಕ ಶಂಕರ್, ಸುನೀಲ್ ಮತ್ತು ಅಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 11 ರಂದು ಸಿನಿಮಾ ತೆರೆ ಕಾಣಲಿದೆ.
ಆವೇಶಂ (ಮಲಯಾಳಂ): ಮಾಲಿವುಡ್ ಸಿನಿರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಈ ಸಿನಿಮಾದಲ್ಲಿ ಫಾಹದ್ ಫಾಸಿಲ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʼಡಾನ್ʼ ಅವತಾರದಲ್ಲಿ ಫಾಫಾ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಇದರ ಟೀಸರ್ ಸಖತ್ ಸದ್ದು ಮಾಡಿದೆ.
ಜಿತು ಮಾಧವನ್ ನಿರ್ದೇಶನ ಮಾಡಿದ್ದು, ಈ ಸಿನಿಮಾದಲ್ಲಿ ಸಜಿನ್ ಗೋಪು, ಮನ್ಸೂರ್ ಅಲಿ ಖಾನ್, ಆಶಿಶ್ ವಿದ್ಯಾರ್ಥಿ, ಹಿಪ್ಜ್‌ಸ್ಟರ್, ಮಿಥುನ್ ಜೈ ಶಂಕರ್, ರೋಷನ್ ಶಾನವಾಸ್, ಮಿಧುಟ್ಟಿ ನಟಿಸಿದ್ದಾರೆ. ಇದೇ ಏಪ್ರಿಲ್ 11 ರಂದು ಸಿನಿಮಾ ರಿಲೀಸ್ ಆಗಲಿದೆ.
ಜೈ ಗಣೇಶ್ (ಮಲಯಾಳಂ): ಪಾರ್ಶ್ವವಾಯು ಗ್ರಾಫಿಕ್ ಡಿಸೈನರ್ ನೊಬ್ಬ ತಮ್ಮ ಸುತ್ತಲಿನ ಜನರೊಂದಿಗೆ ಹೋರಾಡುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾದಲ್ಲಿ ಉನ್ನಿ ಮುಕುಂದನ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಮಹಿಮಾ ನಂಬಿಯಾರ್, ರವೀಂದ್ರ ವಿಜಯ್, ಜೋಮೋಲ್, ಹರೀಶ್ ಪೆರಾಡಿ ಮತ್ತು ಅಶೋಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ., ಏಪ್ರಿಲ್ 11 ರಂದು ಸಿನಿಮಾ ಬಿಡುಗಡೆ ಆಗಲಿದೆ.
ರತ್ನಂ (ತಮಿಳು): ಕಾಲಿವುಡ್ ನಟ ವಿಶಾಲ್ ಅಭಿನಯದ ಈ ಸಿನಿಮಾ, ಮಾಸ್ ಕಥೆಯನ್ನೊಳಗೊಂಡಿದ್ದು, ರಗಡ್ ಆಗಿ ವಿಶಾಲ್ ಕಾಣಿಸಿಕೊಂಡಿದ್ದಾರೆ. ಹರಿ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್, ರಾಮಚಂದ್ರರಾಜು, ಸಮುದ್ರಕನಿ, ಗೌತಮ್ ವಾಸುದೇವ್ ಮೆನನ್, ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ಏಪ್ರಿಲ್ 26 ರಂದು ಸಿನಿಮಾ ತೆರೆಕಾಣಲಿದೆ.
ಅವತಾರ ಪುರುಷ -2: ಸುನಿ – ಶರಣ್ ಕಾಂಬಿನೇಷನ್ ನಲ್ಲಿ ಬಂದ ʼಅವತಾರ ಪುರುಷʼ ಸಿನಿಮಾ ನೋಡುಗರ ಗಮನ ಸೆಳೆದಿತ್ತು. ಇದೀಗ ಸಿನಿಮಾ ಸೀಕ್ವೆಲ್ ತೆರೆಗೆ ಸಿದ್ದವಾಗಿದೆ. ಶರಣ್ ಹಾಸ್ಯಗಾರನಾಗಿಯೂ, ಗಂಭೀರ ಲುಕ್ ನಲ್ಲೂ ವಿಭಿನ್ನ ಕಥೆಯಲ್ಲಿ ಶರಣ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಮನರಂಜನೆಯ ಕಿಕ್ ಕೊಟ್ಟಿದೆ. ಏಪ್ರಿಲ್ 5 ರಂದು ಸಿನಿಮಾ ರಿಲೀಸ್ ಆಗಲಿದೆ.
ಭರ್ಜರಿ ಗಂಡು: ಕಿರುತೆರೆ ನಟ ಕಿರಣ್ ರಾಜ್ ಅಭಿನಯದ ʼಭರ್ಜರಿ ಗಂಡುʼ ರಿಲೀಸ್ ಗೆ ಸಿದ್ದವಾಗಿದೆ.
ಭರ್ಜರಿ ಗಂಡು ಗ್ರಾಮೀಣ ಸೊಗಡಿನ ಕಥೆ. ಬರೀ ಪ್ರೀತಿಗಷ್ಟೇ ಸೀಮಿತವಾಗದ ನಾಯಕ, ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುದೆ ಕಥಾಹಂದರ. ಏಪ್ರಿಲ್ 5 ರಂದು ಚಿತ್ರ ಬಿಡುಗಡೆಯಾಗುತ್ತಿದೆ.
ಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ಇದ್ದಾರೆ. ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ನಾಗೇಶ್ ರೋಹಿತ್, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.