Advertisement

ಪ್ರಚಾರದ ವೈಖರಿ ಬದಲಾಯಿಸಿಕೊಂಡರೆ ಸಿನಿಮೋತ್ಸವ ಹೆಚ್ಚು ಜನರನ್ನು ತಲುಪುತ್ತೆ: ಪುರಾಣಿಕ್

06:01 PM Feb 25, 2020 | Nagendra Trasi |

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಫೆ.26ರಂದು ಚಲನಚಿತ್ರೋತ್ಸವ ಉದ್ಘಾಟನೆಯಾಗಲಿದ್ದು, 27ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. 48 ದಿನಗಳ ಅವಧಿಯಲ್ಲಿಯೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ನಟ, ನಿರ್ದೇಶಕ ಸುನೀಲ್ ಪುರಾಣಿಕ್ ಉದಯವಾಣಿ ಡಾಟ್ ಕಾಮ್ ನಡೆಸಿದ ಕಿರು ಮಾತುಕತೆ ಇಲ್ಲಿದೆ…

Advertisement

*ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆ ಹೇಗಿತ್ತು?

ನೂತನವಾಗಿ ಆಯ್ಕೆಯಾದ ನನಗೆ ಇದೊಂದು ಉತ್ತಮ ಅವಕಾಶ ಸಿಕ್ಕಿದಂತಾಗಿತ್ತು. ಯಾಕೆಂದರೆ ಕೇವಲ 48 ದಿನಗಳಲ್ಲಿಯೇ ಜ್ಯೂರಿಗಳ ಆಯ್ಕೆ, ಸ್ಕ್ರೀನಿಂಗ್, ಆಮಂತ್ರಣ ಪತ್ರಿಕೆ ಹೀಗೆ ಇಷ್ಟೊಂದು ದೊಡ್ಡ ಸಿದ್ಧತೆಯನ್ನು ಎಲ್ಲರ ಸಹಕಾರದೊಂದಿಗೆ ಪೂರ್ಣಗೊಳಿಸಿದ್ದೇವೆ. ಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾ, ಇಂಡೋನೇಶ್ಯಾ, ರಷ್ಯಾ, ಸಿಂಗಾಪೂರ್, ಪಿಲಿಪ್ಪೀನ್ಸ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಹೆಸರಾಂತ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಭಾಗವಹಿಸಲಿದ್ದಾರೆ.

* ಅಂತಾರಾಷ್ಟ್ರೀಯ ಸಿನಿಮೋತ್ಸವ ಬೆಂಗಳೂರಿಗೆ ಮಾತ್ರ ಸೀಮಿತ ಯಾಕೆ?

ಹೌದು…ಯಾಕೆಂದರೆ ಕಳೆದ 12 ವರ್ಷಗಳಿಂದ ಅಂತಾರಾಷ್ಟ್ರೀಯ ಸಿನಿಮೋತ್ಸವ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದು ಬೆಂಗಳೂರು ಸಿನಿಮೋತ್ಸವ. ಇದೇ ರೀತಿ ಪ್ರಾದೇಶಿಕ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆ ಪ್ರಾದೇಶಿಕ ಭಾಷಾ ಚಲನಚಿತ್ರ ಆಯೋಜಿಸುವ ಸಿದ್ಧತೆ ನಡೆಸುತ್ತಿದ್ದೇವೆ.

Advertisement

*ಈ ಬಾರಿಯ ಚಿತ್ರೋತ್ಸವದ ಪ್ರಮುಖ ವಿಶೇಷತೆ ಏನು?

12ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ “ಪ್ಲಾಸ್ಟಿಕ್ ಮುಕ್ತ ಚಿತ್ರೋತ್ಸವದ” ಥೀಮ್ ಇಟ್ಟುಕೊಂಡಿದ್ದೇವೆ. ಪರಿಸರದ ಕಡೆ ಗಮನಹರಿಸಿ “ಗೋ ಗ್ರೀನ್ ಫೆಸ್ಟಿವಲ್” ಮಾಡಲು ನಿರ್ಧರಿಸಿದ್ದೇವೆ. ಚಿತ್ರೋತ್ಸವದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಬಳಕೆ ಇರುವುದಿಲ್ಲ.

*ಬೇರೆ, ಬೇರೆ ಭಾಷೆಯ ಕಲಾತ್ಮಕ ಚಿತ್ರಗಳ ಬಗ್ಗೆ ಪ್ರೇಕ್ಷಕರ ಅಭಿರುಚಿ ಕಡಿಮೆಯಾಗುತ್ತಿದೆ ಅನ್ನಿಸುತ್ತಿದೆಯಾ?

ಹಾಗೇನಿಲ್ಲ…ಯಾವುದೇ ಉತ್ಸವ, ಕಾರ್ಯಕ್ರಮ ಇರಲಿ ಅದಕ್ಕೆ ಪ್ರಚಾರ ಮುಖ್ಯ. ಅದಕ್ಕೆ ಕೆಲವೊಮ್ಮೆ ಹಣಕಾಸಿನ ಕೊರತೆಯು ಕಾರಣವಾಗಿರುತ್ತದೆ. ಪ್ರಚಾರದ ವೈಖರಿಯನ್ನು ಬದಲಾಯಿಸಿಕೊಂಡರೆ ನಾವು ಇನ್ನಷ್ಟು ಜನರನ್ನು ತಲುಪಲು ಸಹಾಯಕವಾಗುತ್ತದೆ. ಬೆಲ್ ಬಾಟಂ, ಕಥಾಸಂಗಮ ಇರಬಹುದು ತೀರಾ ಕಲಾತ್ಮಕ ಅಲ್ಲದಿದ್ದರೂ ಪ್ರೇಕ್ಷಕರನ್ನು ತಲುಪಿದೆ. ನಾವು ಹೆಚ್ಚು ಪ್ರಚಾರ ಕೊಟ್ಟಷ್ಟು ಒಂದು ಕಾರ್ಯಕ್ರಮ ಹೆಚ್ಚು ಜನರನ್ನು ತಲುಪಲು ಕೊಂಡಿಯಾಗಿ ಕೆಲಸ ಮಾಡುತ್ತದೆ.

*ಈ ಬಾರಿ ಚಲನಚಿತ್ರೋತ್ಸವ ಎಲ್ಲೆಲ್ಲಾ ಪ್ರದರ್ಶನಗೊಳ್ಳಲಿದೆ?

ಈ ಬಾರಿ ನಾಲ್ಕು ಕಡೆಗಳಲ್ಲಿ ಸಿನಿಮೋತ್ಸವ ವೀಕ್ಷಿಸಬಹುದಾಗಿದೆ. ಒರಾಯನ್ ಮಾಲ್ ನ ಪಿವಿಆರ್ ಸಿನಿಮಾಸ್ ನ 11 ಪರದೆಗಳು, ರಾಜಾಜಿನಗರದ ನವರಂಗ್, ಚಾಮರಾಜಪೇಟೆಯ ಕಲಾವಿದರ ಸಂಘದ ಡಾ.ರಾಜ್ ಭವನ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿ ಪರದೆಗಳಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಒಟ್ಟು 60 ದೇಶಗಳ 225 ಸಿನಿಮಾ ಪ್ರದರ್ಶನವಾಗಲಿದೆ.

ಈವರೆಗೆ ಎಷ್ಟು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ?

ಚಲನಚಿತ್ರೋತ್ಸವಕ್ಕೆ ಬಹುತೇಕ ಜನರು ಆನ್ ಲೈನ್ ನಲ್ಲಿಯೇ ಟಿಕೆಟ್ ಕಾಯ್ದಿರಿಸಿಕೊಂಡಿದ್ದಾರೆ. ಈವರೆಗೆ ಸುಮಾರು 4 ಸಾವಿರಕ್ಕೂ ಅಧಿಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಿನಿಮೋತ್ಸವ ಉದ್ಘಾಟನೆ ನಂತರ ತಮ್ಮ ಇಷ್ಟದ ಸಿನಿಮಾ ಕೌಂಟರ್ ನಲ್ಲಿಯೇ ಟಿಕೆಟ್ ಪಡೆದು ಸಿನಿಮಾ ವೀಕ್ಷಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next