Advertisement

ಸಿನ್ಸಿನಾಟಿ ಟೆನಿಸ್‌ ಫೈನಲ್‌: ಜೊಕೋವಿಕ್‌ ವಿರುದ್ಧ ಗೊಫಿನ್‌

01:33 AM Aug 19, 2019 | Sriram |

ಸಿನ್ಸಿನಾಟಿ: ತೀವ್ರ ಪೈಪೋಟಿಯೊಡ್ಡಿದ ರಶ್ಯದ ಪ್ರತಿಭಾನ್ವಿತ ಆಟಗಾರ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು 3-6, 6-3, 6-3 ಅಂತರದಿಂದ ಕೆಡವಿದ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ “ಸಿನ್ಸಿನಾಟಿ ಮಾಸ್ಟರ್’ ಟೆನಿಸ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತು ತಲಪುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಅವರ ಎದುರಾಳಿ ಬೆಲ್ಜಿಯಂನ ಡೇವಿಡ್‌ ಗೊಫಿನ್‌.

Advertisement

16ನೇ ಶ್ರೇಯಾಂಕದ ಡೇವಿಡ್‌ ಗೊಫಿನ್‌ ಫ್ರಾನ್ಸ್‌ನ ರಿಚರ್ಡ್‌ ಗಾಸ್ಕ್ವೆಟ್‌ ವಿರುದ್ಧ 6-3, 6-4 ಅಂತರದಿಂದ ಗೆದ್ದು ಬಂದರು. ಜೊಕೋವಿಕ್‌-ಗೊಫಿನ್‌ ಈ ವರೆಗೆ 2 ಸಲ ಎದುರಾಗಿದ್ದು 1-1 ಸಮಬಲದ ದಾಖಲೆ ಹೊಂದಿದ್ದಾರೆ. ಈ ಎರಡೂ ಪಂದ್ಯಗಳು ಪ್ರಸಕ್ತ ಋತುವಿನಲ್ಲೇ ನಡೆದಿದ್ದವು. ಒಂದು ಆಸ್ಟ್ರೇಲಿಯನ್‌ ಓಪನ್‌, ಇನ್ನೊಂದು ವಿಂಬಲ್ಡನ್‌.
“ಇದೊಂದು ಅವಿಸ್ಮರಣೀಯ ಪಂದ್ಯ. ನನಗೆ ಬಹಳ ಸಂತೋಷವಾಗಿದೆ. ಆದರೆ ವಿಶ್ವದ ನಂಬರ್‌ ವನ್‌ ಟೆನಿಸಿಗನನ್ನು ಮಣಿಸಿದರೆ ಇನ್ನಷ್ಟು ಖುಷಿಯಾಗುತ್ತಿತ್ತು’ ಎಂಬುದು ಮೆಡ್ವಡೇವ್‌ ಪ್ರತಿಕ್ರಿಯೆ.

ಬಾರ್ಟಿಗೆ ತಪ್ಪಿದ ನಂ.1 ಅವಕಾಶ
ವನಿತಾ ಸೆಮಿಫೈನಲ್‌ನಲ್ಲಿ ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ಅವರಿಗೆ ಶರಣಾದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ, ಮರಳಿ ನಂಬರ್‌ ವನ್‌ ಆಗುವ ಅವಕಾಶವನ್ನು ಕಳೆದುಕೊಂಡರು. ಶನಿವಾರ ರಾತ್ರಿಯ ಸೆಮಿಫೈನಲ್‌ ಹಣಾಹಣಿಯನ್ನು ಕುಜ್ನೆತ್ಸೋವಾ 6-2, 6-4ರಿಂದ ಗೆದ್ದರು. ಫೈನಲ್‌ ತಲುಪಿದ್ದರೆ ಬಾರ್ಟಿ ಮರಳಿ ಅಗ್ರ ರ್‍ಯಾಂಕಿಂಗ್‌ ಕಿರೀಟವನ್ನು ಏರಿಸಿಕೊಳ್ಳಬಹುದಿತ್ತು.

ಕುಜ್ನೆತ್ಸೋವಾ ಅವರ ಫೈನಲ್‌ ಎದುರಾಳಿ ಅಮೆರಿಕದ ಮ್ಯಾಡಿಸನ್‌ ಕೀಸ್‌. ಆಲ್‌ ಅಮೆರಿಕನ್‌ ಸೆಮಿ ಕಾಳಗದಲ್ಲಿ ಕೀಸ್‌ 7-5, 6-4 ಅಂತರದ ಕಠಿನ ಹೋರಾಟದ ಬಳಿಕ ಸೋಫಿಯಾ ಕೆನಿನ್‌ಗೆ ಸೋಲುಣಿಸಿದರು.

34 ಹರೆಯದ, ಅವಳಿ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಕುಜ್ನೆತ್ಸೋವಾ 19ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದು, ಸಿನ್ಸಿನಾಟಿಯಲ್ಲಿ 15-8 ಗೆಲುವಿನ ದಾಖಲೆ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next