ಸಿನ್ಸಿನಾಟಿ: ಭಾರತದ ಲಿಯಾಂಡರ್ ಪೇಸ್ ಮತ್ತು ಅಲೆಕ್ಸಾಂಡರ್ ಜ್ವೆರೇವ್ ಅವರು ಸಿನ್ಸಿನಾಟಿ ಮಾಸ್ಟರ್ ಟೆನಿಸ್ ಕೂಟದ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಕಠಿನ ಹೋರಾಟ ನೀಡಿ ಶರಣಾಗಿದ್ದಾರೆ.
ಜ್ವೆರೇವ್ ಮತ್ತು 44ರ ಹರೆಯದ ಪೇಸ್ ಅವರು ಸ್ಪೇನ್‌ನ ಫೆಲಿಸಿಯಾನೊ ಮತ್ತು ಮಾರ್ಕ್ ಲೊಪೆಜ್ ಅವರಿಗೆ 2-6, 7-6 (7-2), 10-6 ಸೆಟ್‌ಗಳಿಂದ ಶರಣಾಗಿ ಹೊರಬಿದ್ದರು.
ಇಂತಹ ಕೂಟಗಳಲ್ಲಿ ಆಡುವಾಗ ಉನ್ನತ ರ್‍ಯಾಂಕಿನ ಆಟಗಾರ ಬೇಕೆಂದು ಅವರು ಬಯಸಿದ್ದರು. ಅವರು ಜತೆಯಾಗಿ ಆಡಲು ನನ್ನಲ್ಲಿ ಕೇಳಿಕೊಂಡರು. ಅದಕ್ಕೆ ಸಂಕೋಚವಿಲ್ಲದೇ ಒಪ್ಪಿಕೊಂಡೆ. ಅವರ ಆಟವನ್ನು ಚೆನ್ನಾಗಿ ಬಲ್ಲೆ. ದುರದೃಷ್ಟವಶಾತ್ ನಾವು ಸೋತೆವು. ಆದರೆ ನಾವು ತೀವ್ರ ಹೋರಾಟ ನಡೆಸಿದ್ದೆವು ಎಂದು ಜ್ವೆರೇವ್ ತಿಳಿಸಿದರು. ಡಬಲ್ಸ್‌ನಲ್ಲಿ ಅಪರೂಪಕ್ಕೆ ನಾನು ಆಡುತ್ತೇನೆ ಎಂದವರು ಸ್ಪಷ್ಟಪಡಿಸಿದರು.
ವೀನಸ್ ಮುನ್ನಡೆ
ಸಿನ್ಸಿನಾಟಿ: ಅಮೆರಿಕದ 9ನೇ ಶ್ರೇಯಾಂಕದ ವೀನಸ್ ವಿಲಿಯಮ್ಸ್ ತನ್ನದೇ ದೇಶದ ಅಲಿಸನ್ ರಿಸ್ಕೆ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿ ಸಿನ್ಸಿನಾಟಿ ಮಾಸ್ಟರ್ ಟೆನಿಸ್ ಕೂಟದ ದ್ವಿತೀಯ ಸುತ್ತಿಗೇರಿದ್ದಾರೆ.
6-2, 6-0 ನೇರ ಸೆಟ್‌ಗಳ ಜಯಭೇರಿ ಬಾರಿಸಿದ ವೀನಸ್ ದ್ವಿತೀಯ ಸುತ್ತಿನಲ್ಲಿ ಆಸ್ಟ್ರೇಲಿಯದ ಆ್ಯಶ್ಲೇಗ್ ಬಾರ್ಟಿ ಅವರನ್ನು ಎದುರಿಸಲಿದ್ದಾರೆ. ಬಾರ್ಟಿ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ವಾರ್ವರಾ ಲೆಪ್‌ಚೆಂಕೊ ಅವರನ್ನು 6-4, 6-4 ಸೆಟ್‌ಗಳಿಂದ ಉರುಳಿಸಿದ್ದರು.
ಮೊದಲ ಸುತ್ತಿನ ಪಂದ್ಯದಲ್ಲಿ 12ನೇ ಶ್ರೇಯಾಂಕದ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ರಶ್ಯದ ಅಲೆಕ್ಸಾಂಡ್ರಾ ಕ್ರುನಿಕ್ ಕೈಯಲ್ಲಿ 4-6, 2-6 ಸೆಟ್‌ಗಳಿಂದ ಶರಣಾದರೆ ಅಗ್ನಿಸ್ಕಾ ರಾದ್ವಂಸ್ಕಾ ಅವರು ಜರ್ಮನಿಯ ಜೂಲಿಯಾ ಜಾರ್ಜಸ್ ಅವರಿಗೆ 4-6, 4-6 ಸೆಟ್‌ಗಳಿಂದ ಶರಣಾದರು.