Advertisement

ಸಿನ್ಸಿನಾಟಿ:ಪ್ರಶಸ್ತಿ ಎತ್ತಿದ ಮೆಡ್ವಡೇವ್‌,ಕೀಸ್‌

11:20 PM Aug 19, 2019 | Sriram |

ಸಿನ್ಸಿನಾಟಿ: ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯಲ್ಲಿ ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಮತ್ತು ಅಮೆರಿಕದ ಮ್ಯಾಡಿಸನ್‌ ಕೀಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ರವಿವಾರ ರಾತ್ರಿ ಭಾರೀ ಪೈಪೋಟಿಯಿಂದ ಕೂಡಿದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ ಮ್ಯಾಡಿಸನ್‌ ಕೀಸ್‌ ರಶ್ಯದ ಹಿರಿಯ ಆಟಗಾರ್ತಿ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು 7-5, 7-6 (7-5) ಅಂತರದಿಂದ ಪರಾಭವಗೊಳಿಸಿದರು. ಅನಂತರ ಸಾಗಿದ ಪುರುಷರ ಪ್ರಶಸ್ತಿ ಸೆಣಸಾಟದಲ್ಲಿ ಮೆಡ್ವಡೇವ್‌ ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧ 7-6 (7-3), 6-4 ಅಂತರದಿಂದ ಗೆದ್ದು ಬಂದರು.

ಹಿನ್ನಡೆ ಮೆಟ್ಟಿನಿಂತ ಕೀಸ್‌
2017ರ ಯುಎಸ್‌ ಓಪನ್‌ ಫೈನಲಿಸ್ಟ್‌ ಆಗಿರುವ ಮ್ಯಾಡಿಸನ್‌ ಕೀಸ್‌ ಎರಡೂ ಸೆಟ್‌ಗಳಲ್ಲಿ 3-5ರ ಹಿನ್ನಡೆಯಲ್ಲಿದ್ದರು. ಸತತ 4 ಗೇಮ್‌ ಗೆಲ್ಲುವ ಮೂಲಕ ಮೊದಲ ಸೆಟ್‌ ವಶಪಡಿಸಿಕೊಂಡರು. ದ್ವಿತೀಯ ಸೆಟ್‌ ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಇಲ್ಲಿ ಅಮೆರಿಕನ್‌ ಆಟಗಾರ್ತಿಯ ಕೈಯೇ ಮೇಲಾಯಿತು. ಇದು ಕೀಸ್‌ ಪಾಲಾದ 5ನೇ ಟೆನಿಸ್‌ ಪ್ರಶಸ್ತಿ.

34ರ ಹರೆಯದ ಕುಜ್ನೆತ್ಸೋವಾ ಎರಡೂ ಸೆಟ್‌ಗಳಲ್ಲಿ ದಿಟ್ಟ ಹೋರಾಟ ನಡೆಸಿದರೂ ಅಮೆರಿಕನ್ನಳ ಆಕ್ರಮಣಕಾರಿ ಆಟಕ್ಕೆ ಶರಣಾಗಲೇ ಬೇಕಾಯಿತು. ಮುಂಬರುವ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಗೆ ಈ ಪ್ರಶಸ್ತಿ ಹೊಸ ಸ್ಫೂರ್ತಿ ನೀಡಿದೆ ಎಂಬುದಾಗಿ ಕೀಸ್‌ ಹೇಳಿದರು.

ವರ್ಷದ 2ನೇ ಪ್ರಶಸ್ತಿ
ಡೇವಿಡ್‌ ಗೊಫಿನ್‌ ಸವಾಲಿಗೆ ಮೆಡ್ವಡೇವ್‌ ಬಹಳ ಚಾಕಚಕ್ಯತೆಯಿಂದ ಉತ್ತರಿಸಿದರು. ಅವರ ಆಟ ಅಷ್ಟೇ ಆಕ್ರಮಣಕಾರಿಯಾಗಿತ್ತು. ಅಂಕವೊಂದನ್ನು ಕಳೆದುಕೊಂಡಾಗ ತಮ್ಮ ಕೈಲಿದ್ದ ರ್ಯಾಕೆಟ್‌ ಎಸೆದು ಆಕ್ರೋಶವನ್ನೂ ವ್ಯಕ್ತಪಡಿಸಿದರು.

Advertisement

20 ದಿನಗಳ ಅವಧಿಯಲ್ಲಿ 16 ಪಂದ್ಯಗಳನ್ನಾಡಿದ ಕಾರಣದಿಂದಲೋ ಏನೋ, ದ್ವಿತೀಯ ಸೆಟ್‌ ವೇಳೆ ಮೆಡ್ವಡೇವ್‌ ಇದ್ದಕ್ಕಿದ್ದಂತೆ ಮಾಂಸಖಂಡದ ಸೆಳೆತದಿಂದ ತೊಂದರೆ ಅನುಭವಿಸಿದರು. ಆದರೆ ಗೊಫಿನ್‌ಗೆ ಇದರ ಲಾಭ ಎತ್ತಲಾಗಲಿಲ್ಲ.

ಇದು 2 ವರ್ಷಗಳ ಅವಧಿಯಲ್ಲಿ ಮೆಡ್ವಡೇವ್‌ ಗೆದ್ದ 5ನೇ ಟೆನಿಸ್‌ ಪ್ರಶಸ್ತಿಯಾದರೆ, ಈ ವರ್ಷ ಜಯಿಸಿದ 2ನೇ ಟ್ರೋಫಿ. ಕಳೆದೆರಡು ರವಿವಾರದ ಸ್ಪರ್ಧೆಗಳಲ್ಲಿ (ವಾಷಿಂಗ್ಟನ್‌, ಮಾಂಟ್ರಿಯಲ್‌) ಕ್ರಮವಾಗಿ ನಿಕ್‌ ಕಿರ್ಗಿಯೋಸ್‌ ಮತ್ತು ರಫೆಲ್‌ ನಡಾಲ್‌ಗೆ ಶರಣಾಗಿದ್ದ ಮೆಡ್ವಡೇವ್‌ಗೆ 3ನೇ ರವಿವಾರ ಶುಭ ತಂದಿತು.

ಜೊಕೋವಿಕ್‌ ಪರಾಭವ
ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಡ್ಯಾನಿಲ್‌ ಮೆಡ್ವಡೇವ್‌ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ವಿರುದ್ಧ 3-6, 6-3, 6-3 ಅಂತರದ ಜಯ ಸಾಧಿಸಿದ್ದರು. ಆದರೆ ಕಣ್ತಪ್ಪಿನಿಂದಾಗಿ ಈ ಪಂದ್ಯವನ್ನು ಜೊಕೋವಿಕ್‌ ಗೆದ್ದರು ಎಂಬ ರೀತಿಯಲ್ಲಿ ವರದಿ ಪ್ರಕಟಗೊಂಡಿತ್ತು. ಇದಕ್ಕೆ ವಿಷಾದವಿದೆ.

Advertisement

Udayavani is now on Telegram. Click here to join our channel and stay updated with the latest news.

Next