Advertisement

ಆರೋಪಿಗಳ ಮನೆ ಮೇಲೆ ಸಿಐಡಿ ದಾಳಿ: ಬ್ಯಾಂಕ್‌ ದಾಖಲೆಗಳ ಜಪ್ತಿ

01:56 AM May 15, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಶಾಮೀಲಾಗಿ ಸಿಐಡಿ ಬಲೆಗೆ ಬಿದ್ದಿರುವ ಡಿವೈಎಸ್‌ಪಿ ಶಾಂತಕುಮಾರ್‌ ಸೇರಿ 6 ಆರೋಪಿಗಳ ಮನೆಯ ಮೇಲೆ ಸಿಐಡಿ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿದ್ದು, ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದೆ.

Advertisement

ಪಿಎಸ್‌ಐ ಅಕ್ರಮದಲ್ಲಿ ಕೋಟ್ಯಂತರ ರೂ. ಹಣದ ಹರಿವಿನ ಸುಳಿವು ಸಿಕ್ಕಿದ್ದು, ಇದರ ಬೆನ್ನಲ್ಲೇ ಆರೋಪಿಗಳ ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದ ಸಾಕ್ಷ್ಯ ಕಲೆ ಹಾಕಲು ಸಿಐಡಿ ಮುಂದಾಗಿದೆ.

ಡಿವೈಎಸ್‌ಪಿ ಶಾಂತಕುಮಾರ್‌, ನೇಮಕಾತಿ ವಿಭಾಗದ ಮಂಜುನಾಥ್‌, ಹರ್ಷ, ಲೋಕೇಶ್‌, ಶ್ರೀಧರ್‌ ಸೇರಿ 6 ಆರೋಪಿಗಳ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಸಿಐಡಿ ದಿಢೀರ್‌ ದಾಳಿ ನಡೆಸಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಆರೋಪಿಗಳಿಗೆ ಸೇರಿದ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.

ಆರೋಪಿಗಳ ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ ಪಾಸ್‌ ಪುಸ್ತಕ, ಮೊಬೈಲ್ ಸಿಮ್ ಕಾರ್ಡ್‌, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್‌, ಆಸ್ತಿ ಪತ್ರ ಸೇರಿ ಮತ್ತಿತರ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡ ಲಾಗಿದೆ. ಅಭ್ಯರ್ಥಿಗಳಿಂದ ವಸೂಲಿ ಮಾಡಿ ಕೋಟಿ-ಕೋಟಿ ಹಣದ ಪೈಕಿ ಬಹುಪಾಲು ಯಾರ ಖಜಾನೆ ಸೇರಿದೆ ಎನ್ನುವ ಆಯಾಮದಲ್ಲಿ ಸಿಐಡಿ ತನಿಖೆ ನಡೆಸುತ್ತಿದೆ.

ಡಿವೈಎಸ್‌ಪಿ ಮನೆ ಪರಿಶೀಲನೆ
ಆಡುಗೋಡಿಯ ಪೊಲೀಸ್‌ ಕ್ವಾರ್ಟಸ್‌ನಲ್ಲಿರುವ ಶಾಂತ ಕುಮಾರ್‌ ಮನೆಗೆ ಬೆಳಗ್ಗೆ ಬಂದಿದ್ದ ಸಿಐಡಿ ತಂಡ ಸಂಜೆಯವರೆಗೂ ಪರಿಶೀಲನೆ ನಡೆಸಿದೆ. ದಾಳಿಯ ವೇಳೆ ಪತ್ತೆಯಾದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಬ್ಯಾಂಕ್‌ ದಾಖಲೆ ಪರಿಶೀಲಿಸಲಾಗುತ್ತಿದೆ.

Advertisement

ಶ್ರೀಧರ್‌ ಮನೆಯಲ್ಲಿ 20 ಲಕ್ಷ ರೂ. ಪತ್ತೆ
ನೇಮಕಾತಿ ವಿಭಾಗದ ಪ್ರಥಮ ದರ್ಜೆ ನೌಕರನಾಗಿದ್ದ ಬಂಧಿತ ಆರೋಪಿ ಶ್ರೀಧರ್‌ ಮನೆಯಲ್ಲಿ 20 ಲಕ್ಷ ರೂ. ಪತ್ತೆಯಾಗಿದೆ. ಪತ್ತೆಯಾಗಿರುವ 20 ಲಕ್ಷ ರೂ. ಅನ್ನು ಮಧ್ಯವರ್ತಿಗಳಿಂದ ಪಡೆದಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಈತನನ್ನು ಮೇ 9ರಂದು ಪೊಲೀಸರು ಬಂಧಿಸಿದ್ದರು.

ಕಾಶೀನಾಥ್‌ ಮನೆ ಶೋಧ
ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಶನಿವಾರ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌ ಮನೆ ಮತ್ತು ಶಾಲೆಯಲ್ಲಿ ಶೋಧ ಮಾಡಿದರು. ಸ್ಥಳ ಮಹಜರು ಮಾಡಿಸಿ ಅಕ್ರಮದಲ್ಲಿ ಪಾಲ್ಗೊಂಡ ರೀತಿ ಕುರಿತು ಮಾಹಿತಿ ಪಡೆದರು.

ಶಾಲೆ ಮತ್ತು ತಾಜ್‌ ಸುಲ್ತಾನಪುರದಲ್ಲಿರುವ ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಕೆಲವು ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮಾಲಕತ್ವದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸಿಸಿ ಕೆಮರಾದ ಫ‌ುಟೇಜ್‌ಗಳನ್ನು ಪಡೆಯಲು ಸಿಐಡಿ ಅಧಿಕಾರಿಗಳು ಹರಸಾಹಸ ಮಾಡಿದ್ದಾರೆ. ಆದರೆ ಅವು ಸಿಕ್ಕಿಲ್ಲ. ಹಾಗಾದರೆ ಏನಾದವು ಎಂದು ಕಾಶೀನಾಥನಿಗೆ ಪ್ರಶ್ನಿಸಿದ್ದು, ಉತ್ತರ ಸಿಕ್ಕಿಲ್ಲ ಎಂದು ಗೊತ್ತಾಗಿದೆ.

ದಾಳಿಯ ಕಾಲಕ್ಕೆ ಹಲವು ಕಾಗದ ಪತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಕಾಶೀನಾಥ ಕೇವಲ ತಾನು ಪ್ರಾಚಾರ್ಯನಾಗಿದ್ದ ಜ್ಞಾನಜ್ಯೋತಿ ಶಾಲೆಯಲ್ಲಿ ಅಷ್ಟೇ ಅಲ್ಲ ಎಂಎಸ್‌ಐ ಕಾಲೇಜಿನಲ್ಲಿ ನಡೆದ ಪರೀಕ್ಷೆ ಅಕ್ರಮದಲ್ಲೂ ಭಾಗಿಯಾಗಿದ್ದಾನೆ. ಅದಕ್ಕಾಗಿ ಆ ಕಾಲೇಜಿನ ಪ್ರಭು ಎನ್ನುವಾತನೊಂದಿಗೆ ಸಂಪರ್ಕ ಸಾಧಿಸಿ, ಅಭ್ಯರ್ಥಿಗಳನ್ನು ಗುರುತಿಸುವುದು, ಹಣದ ಕುರಿತು ಡೀಲ್‌ ಮಾಡುವುದು ಮತ್ತು ಒಎಂಆರ್‌ ತಿದ್ದಲು ಬೇಕಾದ ಮೂಲ ಉತ್ತರಗಳನ್ನು ತರಿಸಿಕೊಡುವಲ್ಲಿ ಕಾಶೀನಾಥ ಪ್ರಮುಖ ಪಾತ್ರ ವಹಿಸಿರುವುದು ವಿಚಾರಣೆಯಲ್ಲಿ ಬಯಲಾಗಿದೆ ಎಂದು ಗೊತ್ತಾಗಿದೆ. ಇದರಿಂದಾಗಿ ಕಾಶೀನಾಥ ಇನ್ನೆರಡು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲೇ ಇರಬಹುದು ಎನ್ನಲಾಗುತ್ತಿದೆ.

ಮಂತ್ರಿ-ಅಧಿಕಾರಿಗಳೇ ಕಿಂಗ್‌ಪಿನ್‌: ಪ್ರಿಯಾಂಕ್‌
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಈಗ ಬಂಧಿತರು ಖಂಡಿತಾ ಕಿಂಗ್‌ಪಿನ್‌ಗಳಲ್ಲ. ಅಧಿಕಾರಿಗಳು, ಮಂತ್ರಿಗಳೇ ಕಿಂಗ್‌ಪಿನ್‌ಗಳು. ಮೊದಲು ಅವರನ್ನು ತನಿಖೆ ವ್ಯಾಪ್ತಿಗೆ ತನ್ನಿ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next