Advertisement

ಪಿಎಸ್‌ಐ ನೇಮಕ ಅಕ್ರಮ ಬಹುದೊಡ್ಡ ಪಿತೂರಿ: ಹೈಕೋರ್ಟ್‌ಗೆ ಸಿಐಡಿ ವಿವರಣೆ

08:36 PM Jul 14, 2022 | Team Udayavani |

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಅಕ್ರಮ ಸಾಧಾರಣ ಅಪರಾಧವಲ್ಲ. ಅದೊಂದು ಅತ್ಯಂತ ನೀಚ ಕೃತ್ಯವಾಗಿದ್ದು, ಇದರ ಹಿಂದೆ ಬಹುದೊಡ್ಡ ಪಿತೂರಿ  ಅಡಗಿದೆ. ತನಿಖೆ ಮೂಲಕ ಎಲ್ಲವನ್ನೂ ಬಯಲಿಗೆಳೆಯಬೇಕಿದೆ ಎಂದು ಸಿಐಡಿ ಹೈಕೋರ್ಟ್‌ಗೆ ವಿವರಿಸಿದೆ.

Advertisement

ಪ್ರಕರಣದ ಆರೋಪಿಗಳಾದ ಸಿ.ಎನ್‌. ಶಶಿಧರ್‌ ಹಾಗೂ ಇತರರು ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾ| ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಸಿಐಡಿ ಪರ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ವಿ.ಎಸ್‌. ಹೆಗ್ಡೆ ಅವರು, ಈವರೆಗಿನ ತನಿಖೆಯ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು. ಒಎಂಆರ್‌ ಶೀಟ್‌ಗಳನ್ನು ಬದಲಿಸಿದ್ದು, ಆರ್‌ಎಫ್ಎಸ್‌ಎಲ್‌ ವರದಿ, ಅಕ್ರಮಕ್ಕೆ ಅನುಸರಿಸಿದ ವಿಧಾನಗಳನ್ನು ಗಮನಿಸಿದರೆ ಇದರ ಆಳ-ಅಗಲ ತಿಳಿಯುತ್ತದೆ. ಪಿಎಸ್‌ಐ ಹುದ್ದೆ ಪಡೆದು ಕಾನೂನು ಮತ್ತು ಸಮಾಜದ ರಕ್ಷಣೆ ಮಾಡಬೇಕಿದ್ದವರೇ ಅಕ್ರಮ ಎಸಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಿದೆ. ಪಿಎಸ್‌ಐ ನೇಮಕಾತಿ ಸಮಾಜದ ಪಾಲಿಗೆ  ಭಯೋತ್ಪಾದಕ ಕೃತ್ಯ ಎಂದು ಹೈಕೋರ್ಟ್‌ ಹಿಂದಿನ ವಿಚಾರಣೆ ವೇಳೆ ಹೇಳಿರುವುದು ಸರಿಯಾಗಿಯೇ ಇದೆ ಎಂದರು.

ಜತೆಗೆ ಆರೋಪಿಗಳ ಜಾಮೀನು ಅರ್ಜಿಗಳನ್ನು ಬಲವಾಗಿ ಆಕ್ಷೇಪಿಸಿದ ಹೆಗ್ಡೆ, ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಸ್ವತಃ ಪೊಲೀಸ್‌ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ನಿರ್ಲಜ್ಜ ವ್ಯಕ್ತಿಗಳಿಂದ ಅಕ್ರಮ ನಡೆದಿದೆ. ಎಡಿಜಿಪಿ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ದೂರವಾಣಿ ಕರೆಗಳು, ಎಸ್‌ಎಂಎಸ್‌, ವಾಟ್ಸಪ್‌ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ. ಈವರೆಗೆ 2.5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಗಂಭೀರತೆ, ಇದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ನೋಡಬೇಕಿದೆ. ಮುಖ್ಯವಾಗಿ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಇದು ಒಳಗೊಂಡಿದೆ. ಸಿಐಡಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಸಿಐಡಿ ಡಿಜಿ ಮೇಲ್ವಿಚಾರಣೆಯಲ್ಲಿ ತನಿಖೆ :

Advertisement

ನ್ಯಾಯಾಲಯದ ಆದೇಶದಂತೆ ಆರ್‌ಎಫ್ಎಸ್‌ಎಲ್‌ ವರದಿ ಹಾಗೂ ಒಎಂಆರ್‌ ಶೀಟ್‌ಗಳನ್ನು ಬದಲಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಿಐಡಿ  ಅಧಿಕಾರಿಗಳು ಹೈಕೋರ್ಟ್‌ಗೆ ಸಲ್ಲಿಸಿದರು.

ಈ ಸಂದರ್ಭ, ಕೆಳಹಂತದ ಅಧಿಕಾರಿಗಳಿಂದ ಎಡಿಜಿಪಿ ಅಮೃತ್‌ ಪಾಲ್‌ ತನಿಖೆ ಪ್ರಯೋಜನವಿಲ್ಲ ಎಂದು ನ್ಯಾ| ಎಚ್‌.ಪಿ. ಸಂದೇಶ್‌ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಐಡಿ ಪರ ವಕೀಲರು, ಸಿಐಡಿ ಡಿಜಿ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ ಎಂದರು. ಅರ್ಜಿದಾರರು ಹಾಗೂ ಸಿಐಡಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜು. 20ಕ್ಕೆ ಮುಂದೂಡಿತು.

ಕೊಲೆಗಿಂತ ಗಂಭೀರ ಅಪರಾಧ:

ನಿರ್ಲಜ್ಜ ವ್ಯಕ್ತಿಗಳಿಂದ ಅಕ್ರಮ ನಡೆದಿದೆ ಎಂದು ಎಸ್‌ಪಿಪಿ ಹೇಳಿದ ಮಾತಿಗೆ, ಅಂತಹ ನಿರ್ಲಜ್ಜ ವ್ಯಕ್ತಿಗಳಿಗೆ ಕದ ತೆರದವರು ಯಾರು ಎಂದು ನ್ಯಾ| ಸಂದೇಶ್‌ ಪ್ರಶ್ನಿಸಿದರು. ಅದಕ್ಕೆ, ತನಿಖೆಯಿಂದ ಎಲ್ಲವೂ ಗೊತ್ತಾಗಲಿದೆ ಎಂದು ಎಸ್‌ಪಿಪಿ ಹೇಳಿದರು. ಪಿಎಸ್‌ಐ ನೇಮಕಾತಿ ಅಕ್ರಮವು ಕೊಲೆಗಿಂತಲೂ ಗಂಭೀರ ಅಪರಾಧ. ಕೊಲೆ ನಡೆದರೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಾನೆ. ಇಲ್ಲಿ 50 ಸಾವಿರ ಅಭ್ಯರ್ಥಿಗಳು ತೊಂದರೆಗೀಡಾಗಿದ್ದಾರೆ. ಪ್ರತಿ ನೇಮಕದಲ್ಲೂ ಹೀಗೆಯೇ ಆದರೆ ನ್ಯಾಯಾಲಯ ಕಣ್ಣುಮುಚ್ಚಿ  ಕುಳಿತುಕೊಳ್ಳಬೇಕೇ ಎಂದು ನ್ಯಾ| ಸಂದೇಶ್‌ ಹೇಳಿದರು.

ವೀಡಿಯೋ ಕಾನ್ಫರೆನ್ಸ್‌ನಲ್ಲಿ ದಿಢೀರ್‌ ಮನವಿ:

ವಿಚಾರಣೆಯ ಕೊನೆ ಹಂತದಲ್ಲಿ ಕೇಶವ ಮೂರ್ತಿ ಎಂಬ ಹೆಸರಲ್ಲಿ  ವೀಡಿಯೋ ಕಾನ್ಫರೆನ್ಸ್‌ಗೆ ಹಾಜರಾಗಿದ್ದ ವ್ಯಕ್ತಿಯೊಬ್ಬರು,  “ಮೈ ಲಾರ್ಡ್‌ ನಾನು ಪಿಎಸ್‌ಐ ಅಭ್ಯರ್ಥಿ, ನನ್ನ ಮನವಿ ಕೇಳಿ’ ಎಂದು ಕೋರಿದರು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಈ ರೀತಿ ಏಕಾಏಕಾಕಿ ಮಧ್ಯಪ್ರವೇಶಿಸುವುದು ಸರಿಯಲ್ಲ. ನಿಮಗೆ ತೊಂದರೆ ಆಗಿದ್ದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಗಣಿಸಲಾಗುವುದು. ಪ್ರಕರಣದ ವಿಚಾರಣೆ ನಡೆದಿದೆ ಅಂದ ಮಾತ್ರಕ್ಕೆ ಎಲ್ಲ 50 ಸಾವಿರ ಅಭ್ಯರ್ಥಿಗಳನ್ನು ನಾನು ಕೇಳಲಿಕ್ಕಾಗುವುದಿಲ್ಲ ಎಂದು ನ್ಯಾ| ಸಂದೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next