ಬೆಂಗಳೂರು: ರಾಜ್ಯ ಸಿಐಡಿ ಘಟಕದ ಡಿವೈಎಸ್ ಪಿ ವಿ.ಲಕ್ಷ್ಮೀ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇಂದೂ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜ್ಯದ ಸಿಐಡಿ ಘಟಕದ ವಿಶೇಷ ವಿಚಾರಣಾ ತಂಡದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀ 33) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಪರಿಚಯಸ್ಥರ ಮನೆಯಲ್ಲಿ ಗುರುವಾರ ಪತ್ತೆಯಾಗಿತ್ತು.
ಲಕ್ಷ್ಮೀ ಅವರ ತಂದೆ ವೆಂಕಟೇಶ್ ಅವರು ತಮ್ಮಪುತ್ರಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವರಲ್ಲ. ಸಾವಿನ ಬಗ್ಗೆ ಬಹಳಷ್ಟು ಅನುಮಾನವಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಲಕ್ಷ್ಮೀ ಅವರ ಸ್ನೇಹಿತ ಹಾಗೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್‌ಗಳ ಗುತ್ತಿಗೆದಾರ ಮನೋಹರ್ ಅಲಿ ಯಾಸ್ ಮನು, ಆತನ ಸ್ನೇಹಿತ ರಾಹುಲ್, ಪ್ರಜ್ವಲ್, ರಂಜಿತ್ ಎಂಬ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಉಜಿರೆ ಮಗು ಕಿಡ್ನಾಪ್ ಫಾಲೋಅಪ್: 17 ಕೋಟಿ ಬದಲು 10 ಕೋಟಿ ರೂ. ಬೇಡಿಕೆಯಿಟ್ಟ ಅಪಹರಣಕಾರರು
ಇಂದು ಕೂಡಾ ಲಕ್ಷ್ಮೀ ಅವರ ಕೆಲವು ಸ್ನೇಹಿತರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತರಿಂದ ಹೇಳಿಕೆ ಪಡೆಯಲಾಗಿದೆ.
ಕೋಲಾರದ ಮಾಲೂರು ತಾಲೂಕಿನ ಲಕ್ಷ್ಮೀ ಅವರು ಪೋಷಕರು ಮತ್ತು ಪತಿ ನವೀನ್ ಜತೆ ಕೋಣನಕುಂಟೆಯಲ್ಲಿ ವಾಸವಾಗಿದ್ದರು. 2014ರ ಕೆಎಸ್‌ಪಿಎಸ್ ಬ್ಯಾಚ್‌ನ ಅಧಿಕಾರಿಯಾಗಿರುವ ಲಕ್ಷ್ಮೀ ಅವರು, ಕಾಲಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರಿಂದ ದೀರ್ಘಕಾಲ ರಜೆ ಪಡೆದುಕೊಂಡಿದ್ದರು. ಕೆಲ ದಿನಗಳಿಂದ ಕೆಲಸಕ್ಕೆ ಬರುತ್ತಿದ್ದರು. ಜತೆಗೆ ವೈಯಕ್ತಿಕ ಕಾರಣಕ್ಕೆ ಮದ್ಯವ್ಯಸನಿಯಾಗಿದ್ದರು ಎಂದು ಹೇಳಲಾಗಿದೆ.