ಬೆಂಗಳೂರು: “ಲಕ್ಕಿ ಡಿಪ್‌ನಲ್ಲಿ ಗೆದ್ದಿರುವ ದುಬಾರಿ ಮೌಲ್ಯದ ಉಡುಗೊರೆಗಳನ್ನು ಪಡೆದುಕೊಳ್ಳಿ’ ಎಂದು ಪಾರ್ಸೆಲ್ ಬಾಕ್ಸ್‌ನಲ್ಲಿ ತರಕಾರಿ ಕಟರ್, ಜ್ಯೂಸ್ ಮೇಕರ್ ಮುಂತಾದ ಅಡುಗೆ ಮನೆ ಸಾಮಗ್ರಿ ಕಳುಹಿಸಿ ವಂಚಿಸುತ್ತಿದ್ದ ಜಾಲವನ್ನು ಭೇದಿಸಿರುವ ಸಿಐಡಿ ಸೈಬರ್ ಪೊಲೀಸರು, ವಂಚನೆ ಜಾಲದ ಸೂತ್ರದಾರ ಸುಹೇಲ್ ಖಾನ್ (60) ಎಂಬಾತನನ್ನು ಬಂಧಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ವಿವಿಧ ಮೂಲಗಳಿಂದ ಸಾರ್ವಜನಿಕರ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪಿ ಸುಹೈಲ್ ಖಾನ್ ತಾನು ನೇಮಿಸಿಟ್ಟುಕೊಂಡಿದ್ದ ಟೆಲಿಕಾಲರ್‌ಗಳ ಮೂಲಕ ಕರೆ ಮಾಡಿಸುತ್ತಿದ್ದ. ಅವರು ಲಕ್ಕಿ ಡಿಪ್‌ನಲ್ಲಿ ನೀವು ವಿವಿಧ ಬ್ರಾಂಡ್‌ಗಳ ಮೊಬೈಲ್ ಫೋನ್ ಹಾಗೂ ಉಡುಗೊರೆಗಳನ್ನು ಗೆದ್ದಿದ್ದೀರ.
ನಿಮ್ಮ ವಿಳಾಸ ಮತ್ತು ಅಂಚೆ ಶುಲ್ಕವನ್ನು ಕಟ್ಟಿದರೆ ಅದನ್ನು ಪೋಸ್ಟ್ ಮೂಲಕ ಕಳುಹಿಸುತ್ತೇವೆ ಎಂದು ಟೆಲಿಕಾಲರ್‌ಗಳು ಹೇಳುತ್ತಿದ್ದರು. ಲಕ್ಕಿ ಡಿಪ್ ಬಹುಮಾನದ ಬಲೆಗೆ ಬಿದ್ದವರಿಂದ ಪಾರ್ಸೆಲ್ ಶುಲ್ಕವಾಗಿ 1400 ರೂ. ಮತ್ತು 2300 ರೂ. ಸಂಗ್ರಹಿಸುತ್ತಿದ್ದ ಜಾಲದ ಸದಸ್ಯರು, ಉಡುಗೊರೆಗಳ ಬದಲಿಗೆ ತರಕಾರಿ ಕತ್ತರಿಸುವ ಕಟರ್, ಜ್ಯೂಸ್ ಮೇಕರ್ ಸೇರಿ ಇತರೆ ಕಳಪೆ ವಸ್ತುಗಳನ್ನು ಅಂಚೆ ವ್ಯಾಲ್ಯು ಪೇಯಬಲ್ ಪೋಸ್ಟ್ (ವಿಪಿಪಿ) ಮೂಲಕ ಕಳುಹಿಸುತ್ತಿದ್ದರು.
ಈ ಬಗ್ಗೆ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಸಿಐಡಿ ಡಿವೈಎಸ್ಪಿ ರಾಘವೇಂದ್ರ ಮತ್ತು ಇನ್ಸ್‌ಪೆಕ್ಟರ್ ಯಶವಂತ ಕುಮಾರ್ ಅವರ ತಂಡ ಜಾಲದ ಗೋದಾಮಿನ ಮೇಲೆ ದಾಳಿ ನಡೆಸಿ 26 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದೆ. ಜತೆಗೆ ಪ್ರಮುಖ ಆರೋಪಿ ಸುಹೈಲ್ ಖಾನ್‌ನನ್ನು ಬಂಧಿಸಿದೆ.
ಆರೋಪಿಯು ಕಳೆದ ನಾಲ್ಕು ವರ್ಷಗಳಿಂದ ಆರ್.ಕೆ. ಮಾರ್ಕೆಟಿಂಗ್, ಎಸ್.ಕೆ. ವರ್ಲ್ಡ್ ಮತ್ತು ಎ-ಒನ್ ಮಾರ್ಕೆಟಿಂಗ್ ಹೆಸರಿನಲ್ಲಿ ಮೋಸ ಮಾಡುತ್ತಿದ್ದ. ಜಾಲದ ಕುರಿತು ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಸಿಐಡಿ ಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.