Advertisement

ಲಾಠಿ ಬಳಕೆ, ನಾಲಿಗೆ ಮತ್ತು ಶಬ್ದ ಪ್ರಯೋಗದಲ್ಲಿ ಹಿಡಿತ ಮುಖ್ಯ: ಸಿಐ ಪ್ರಕಾಶ್

06:34 PM Dec 25, 2020 | Mithun PG |

ಕಾಪು: ಕರಾವಳಿ ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆಯಾಗಿದ್ದು, ಇಲ್ಲಿಯ ಜನರು ಕೂಡಾ ಅತ್ಯಂತ ಶಾಂತಿಪ್ರಿಯರಾಗಿದ್ದಾರೆ. ಕಾಪು ತಾಲೂಕಿನಲ್ಲಿ ರವಿವಾರ ನಡೆಯಲಿರುವ ಮತದಾನವು ಶಾಂತಿಯುತವಾಗಿ ನಡೆಯುವಲ್ಲಿ ಪೊಲೀಸ್ ಇಲಾಖೆಯು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತದ ಜೊತೆಗೆ ಪೂರ್ಣ ರೀತಿಯಲ್ಲಿ ಸಹಕಾರ ನೀಡಲಿದೆ. ಅದಕ್ಕಾಗಿ ನಮ್ಮ ಲಾಠಿ, ನಾಲಿಗೆ ಮತ್ತು ಶಬ್ದ ಪ್ರಯೋಗದಲ್ಲಿ ಹಿಡಿತ ಮುಖ್ಯವಾಗಿದೆ ಎಂದು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಹೇಳಿದರು.

Advertisement

ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಉದ್ದೇಶದಿಂದ ಶುಕ್ರವಾರ ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಂಗಣದಲ್ಲಿ ನಡೆಸಲಾದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿಗಳ ನಡುವಿನ ಮಾಹಿತಿ ವಿನಿಮಯ ಮತ್ತು ಜವಾಬ್ದಾರಿ ಹಂಚುವಿಕೆಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ವಿವಿಧ ತುಕುಡಿಗಳಲ್ಲಿ ಯುವಕರ ಬಲವೇ ಹೆಚ್ಚಾಗಿದೆ. ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ಯಾವುದೇ ಸಂದರ್ಭ ದಲ್ಲೂ ಪೊಲೀಸರ ಕೈಯ್ಯಲ್ಲಿರುವ ಲಾಠಿ ಮತ್ತು ಪೊಲೀಸರ ನಾಲಿಗೆಗೆ ಹೆಚ್ಚು ಕೆಲಸ ಕೊಡದೇ ನಮ್ಮ ಸೇವಾ ಕಾರ್ಯದ ಮೂಲಕ ಜನರು ಮತ್ತು ಚುನಾವಣಾ ಬೂತ್‌ ಗಳಲ್ಲಿ ಇರುವ ಅಭ್ಯರ್ಥಿಗಳು ಮತ್ತವರ ಪರವಾಗಿ ಇರುವವರ ಮನಗೆಲ್ಲುವ ಪ್ರಯತ್ನವನ್ನು ನಾವು ನಡೆಸೋಣ ಎಂದರು.

ಇದನ್ನೂ ಓದಿ: ಜನವರಿಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮನ; ಅಷ್ಟರಲ್ಲಿ ಸಾಕಷ್ಟು ಬದಲಾವಣೆ ಖಂಡಿತಾ: ಯತ್ನಾಳ್

ಬಂದೋಬಸ್ತ್ ಗೆ 250 ಪೊಲೀಸರ ನಿಯೋಜನೆ:

Advertisement

ಕಾಪು ತಾಲೂಕಿನ 16 ಗ್ರಾಮ ಪಂಚಾಯತ್‌ ಗಳಿಗೆ ನಡೆಯಲಿರುವ ಚುನಾವಣೆಗೆ 1 ಡಿವೈಎಸ್ಪಿ, 2 ಇನ್ಸ್‌ಪೆಕ್ಟರ್, 5 ಸಬ್ ಇನ್ಸ್‌ಪೆಕ್ಟರ್, 19 ಎಎಸ್‌ಐ ಸೇರಿದಂತೆ 175 ಪೊಲೀಸ್ ಸಿಬ್ಬಂದಿಗಳು, 25 ಹೋಂ ಗಾರ್ಡ್‌ಗಳು ಹಾಗೂ 1 ಡಿಎಆರ್, 1 ಕೆಎಸ್‌ಆರ್‌ಪಿ ತುಕುಡಿಯನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ ಎಂದು ಕಾಪು ಎಸ್ ಐ ರಾಘವೇಂದ್ರ ಸಿ. ಹೇಳಿದರು.

ಉಡುಪಿ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿ. ಕಿರಣ್, ಕಾಪು ಎಸ್‌ಐ ರಾಘವೇಂದ್ರ ಸಿ. ಶಿರ್ವ ಎಸ್ ಐ ಶ್ರೀಶೈಲ ಮುರಗೋಡ, ಪಡುಬಿದ್ರಿ ಎಸ್ ಐ ದಿಲೀಪ್ ಕುಮಾರ್, ಕ್ರೈಂ ಎಸ್ ಐ ಐ.ಆರ್. ಗಡ್ಡೇಕರ್ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ಪಿಎಸ್ಐ ವಿರುದ್ಧ ಹಲ್ಲೆ ಆರೋಪ; ಸ್ಥಳೀಯರಿಂದ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next