ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ ಜಿಲ್ಲೆ ಗಮನಾರ್ಹ ಸಾಧನೆ ಮಾಡುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು, ಕೊರೊನಾ ವಾರಿಯಸ್ ಗಳು, ಆದ್ಯತಾ ವಲಯ ಸೇರಿದಂತೆ 45 ವರ್ಷ ಮೇಲ್ಪಟ್ಟವರು, 60 ವರ್ಷ ಮೇಲ್ಪಟ್ಟವರು ಹಾಗೂ 18 ವರ್ಷ ಮೇಲ್ಪಟ್ಟವರು ಸೇರಿದಂತೆ 12,80,196 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಇದರಲ್ಲಿ ಅರ್ಧದಷ್ಟು ಸಾಧನೆ ಮಾಡಲಾಗಿದೆ. ಜನವರಿ 16 ರಿಂದ ಲಸಿಕಾ ಅಭಿಯಾನ ಆರಂಭವಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 7,04,137 ಜನರಿಗೆ ಲಸಿಕೆ ನೀಡಿದ್ದು, ಶೇ. 68 ರಷ್ಟು ಸಾಧನೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳು ಹೇಳುತ್ತಿವೆ. ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದವರು 5,46,235 ಮಂದಿ, ಎರಡನೇ ಡೋಸ್ ಪಡೆದವರ ಸಂಖ್ಯೆ 1,57,902 ಮಂದಿ. ಇವರಲ್ಲಿ 18 ರಿಂದ 44 ವರ್ಷ ವಯೋಮಾನದವರು 2,25,466 ಮಂದಿ, 45 ರಿಂದ 59 ವಯೋಮಾನದವರು 2,76,755 ಹಾಗೂ 2,01,916 ಲಕ್ಷಕ್ಕೂ ಅ ಧಿಕ ಜನರು 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆ.
ನಿತ್ಯ ಸರಾಸರಿ 8 ರಿಂದ 9 ಸಾವಿರ ಮಂದಿ ಲಸಿಕೆ ನೀಡಲಾಗುತ್ತಿದೆ. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ ಜನ, ಈಗ ಲಸಿಕೆಗಾಗಿ ಮುಗಿ ಬೀಳುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಸ್ಪತ್ರೆ, ನಗರ ಆರೋಗ್ಯ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕ ಆಸ್ಪತ್ರೆ, ಹೋಬಳಿ ಮಟ್ಟದಲ್ಲಿ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು ಹಾಗೂ ವಿಶೇಷ ಲಸಿಕಾ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ ಸುಮಾರು 343 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.
ಇದರೊಟ್ಟಿಗೆ ವಿವಿಧ ಸಂಘ ಸಂಸ್ಥೆಗಳು, ಸಮುದಾಯಗಳು ಸ್ವಯಂಪ್ರೇರಿತವಾಗಿ ಲಸಿಕಾ ಅಭಿಯಾನ ನಡೆಸಿದ್ದು, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸಮುದಾಯ ಭವನಗಳಲ್ಲಿ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿವೆ. ವಿಕಲಚೇತನರ ಕಲ್ಯಾಣ ಇಲಾಖೆಯಿಂದ ಚಿತ್ತದುರ್ಗದಲ್ಲಿ 18 ವರ್ಷ ಮೇಲ್ಪಟ್ಟ ಜಿಲ್ಲೆಯ ಸುಮಾರು 18 ಸಾವಿರ ವಿಕಲಚೇತನರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.
ವಿಕಲಚೇತನರಿಗಾಗಿ ಆದ್ಯತೆ ಮೇರೆಗೆ ಜಿಲ್ಲಾ ಕೇಂದ್ರದಲ್ಲಿ 100 ಡೋಸ್, ತಾಲೂಕು ಕೇಂದ್ರದಲ್ಲಿ 50 ಡೋಸ್, ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ತಲಾ 20 ಡೋಸ್ ಕಾಯ್ದಿರಿಸಿ ನೀಡಲಾಗುತ್ತಿದೆ.