Advertisement

ನರ್ತನಾವರ್ತನದಲ್ಲಿ ಅನುರಣಿಸಿದ ಕ್ರಿಸ್ಟೋಫ‌ರ್‌ ನೃತ್ಯ

06:03 PM Mar 13, 2020 | mahesh |

ಶಿವನ ತಾಂಡವ ನೃತ್ಯದಲ್ಲಿ ಶಾಂತ ರಸವನ್ನು ಪ್ರತಿಪಾದಿಸುವುದು ಸವಾಲಿನ ಕೆಲಸ. ಕ್ರಿಸ್ಟೋಫ‌ರ್‌ರವರು ಶಾಂತಸ್ವರೂಪಿಯಾಗಿ ಆನಂದ ತಾಂಡವ ನೃತ್ಯವಾಡುವ ಚಿದಂಬರ ನಟರಾಜನ ವರ್ಣನೆಯನ್ನು ಬಹಳ ಘನವಾಗಿ ಮಾಡಿದರು.

Advertisement

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ವಾರ್ಷಿಕ ಅಂತಾರಾಷ್ಟ್ರೀಯ ನೃತ್ಯೋತ್ಸವ ನರ್ತನಾವರ್ತನ -2020ರಲ್ಲಿ ಆಸ್ಟ್ರೇಲಿಯದ ನೃತ್ಯ ಕಲಾವಿದ ಕ್ರಿಸ್ಟೋಫ‌ರ್‌ ಗುರುಸ್ವಾಮಿಯವರಿಂದ ಅದ್ಭುತವಾದ ಭರತನಾಟ್ಯ ಇತ್ತೀಚೆಗೆ ನಡೆಯಿತು. ಮುತ್ತುಸ್ವಾಮಿ ದೀಕ್ಷಿತರ ಪಂಚಭೂತಲಿಂಗ ಸ್ತುತಿಗಳಲ್ಲಿ ಒಂದಾದ ಆನಂದ ನಟನಪ್ರಕಾಶಂ ಕೀರ್ತನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಶಿವನ ತಾಂಡವ ನೃತ್ಯದಲ್ಲಿ ಶಾಂತ ರಸವನ್ನು ಪ್ರತಿಪಾದಿಸುವುದು ಸವಾಲಿನ ಕೆಲಸ. ಕ್ರಿಸ್ಟೋಫ‌ರ್‌ರವರು ಶಾಂತಸ್ವರೂಪಿಯಾಗಿ ಆನಂದ ತಾಂಡವ ನೃತ್ಯವಾಡುವ ಚಿದಂಬರ ನಟರಾಜನ ವರ್ಣನೆಯನ್ನು ಬಹಳ ಘನವಾಗಿ ಮಾಡಿದರು. ಎರಡನೆಯ ನೃತ್ಯ ಮುಖ್ಯ ಪ್ರಸ್ತುತಿಯಾದ ಪದವರ್ಣ. ಲಾಲ್ಗಡಿ ಜಿ.ಜಯರಾಮನ್‌ರವರ ಚಾರುಕೇಶಿ ರಾಗದ ಇನ್ನುಂ ಎನ್ಮನಂ ಅರಿಯಾದ ಪದವರ್ಣದಲ್ಲಿ ಕೃಷ್ಣನನ್ನು ಸಖನಾಗಿ ತನ್ನೆಲ್ಲ ಮನದ ದುಗುಡವನ್ನು ಅರುಹುವ ದೀನನಾಗಿ, ಭಕ್ತನಾಗಿ ಕಲಾವಿದರು ಬಹಳ ಮಾರ್ಮಿಕವಾಗಿ ಪ್ರಸ್ತುತಪಡಿಸಿದರು. ತನ್ನ ಜೀವನದ ಅನುಭವದಲ್ಲಿ ರೂಪುಗೊಂಡ ಈ ವರ್ಣದ ಸಾಹಿತ್ಯಾಭಿವ್ಯಕ್ತಿ ಇತರ ಕಲಾವಿದರು ಮಾಡುವ ರೀತಿಗಿಂತ ಬಹಳ ವಿಭಿನ್ನವಾಗಿತ್ತಲ್ಲದೆ ಜೀವಾತ್ಮ ಪರಮಾತ್ಮನಲ್ಲಿ ಮಾಡಿಕೊಳ್ಳುವ ನಿವೇದನೆ ಹಾಗೂ ಅವರೀರ್ವರ ಶ್ರೇಷ್ಠ ಸಮಾಗಮ ಒಂದು ಅಲೌಕಿಕ ಜಗತ್ತನ್ನು ತೆರೆದು ಓರ್ವ ಅನಿವಾಸಿ ಭಾರತೀಯನಲ್ಲಿ ಇಷ್ಟು ಮನೋಧರ್ಮ ಮೂಡಿಬರಲು ಸಾಧ್ಯವೇ ಎಂದು ಅಚ್ಚರಿ ಪಡುವಂತಾಯಿತು.

ಮೂರನೆಯ ನೃತ್ಯ ರಾಮ-ಸೀತೆಯರ ಮೊದಲ ಭೇಟಿಯನ್ನು ವರ್ಣಿಸುವ ಭೈರವಿ ರಾಗದ ರಚನೆಯಾದ ಯಾರೋ ಇವರ್ಯಾರೋ… ಎಂಬ ಪದಂ. ಇದರಲ್ಲಿ ರಾಮ-ಸೀತೆಯರ ನಡುವೆ ಹುಟ್ಟಿಕೊಳ್ಳುವ ನವಿರಾದ ಸಾತ್ವಿಕ ಶೃಂಗಾರ, ರಾಮನ ನಾಜೂಕಾದ ಚಲನೆಗಳು, ಅವನ ಮನದಲ್ಲಿ ಸೀತೆಯ ಬಗ್ಗೆ ಮೂಡಿದ ವಿಶೇಷ ಆಕರ್ಷಣೆ, ಇವೆಲ್ಲವನ್ನು ಕ್ರಿಸ್ಟೋಫ‌ರ್‌ ಪಾತ್ರದ ಘನತೆಯರಿತು ಕಲಾತ್ಮಕವಾಗಿ ನಿರೂಪಿಸಿದರು. ಅನಂತರದ ಪ್ರಸ್ತುತಿ ರಾಮನಾಟಕಂನಿಂದ ಆಯ್ದ ಭಾಗ. ರಾವಣನ ಅರಮನೆಯಲ್ಲಿ ಹನುಮಂತ ಹಾಗೂ ರಾವಣರ ವಾಗ್ಯುದ್ಧವನ್ನು ವೀರರಸಭರಿತವಾಗಿ ಕಲಾವಿದ ಪ್ರಸ್ತುತಪಡಿಸಿದರು. ಕೇವಲ ಮುಖಾಭಿನಯವಲ್ಲದೆ ಅದಕ್ಕೆ ತಕ್ಕದಾದ ಉತ್ಪವನಗಳು, ಆಕಾಶಚಾರಿಗಳು, ಭ್ರಮರಿಗಳು ಒಳ್ಳೆಯ ರಸೋತ್ಪತ್ತಿಗೆ ಕಾರಣವಾಯಿತು. ಅನಂತರ ಪ್ರಸಿದ್ಧವಾದ ದೇವರನಾಮ ಆಡಿಸಿದಳೆಶೋದದಲ್ಲಿ… ಯಶೋದೆಯ ವಾತ್ಸಲ್ಯದ ಸಂಪೂರ್ಣ ಅನುಭವ ಪ್ರೇಕ್ಷಕರಿಗಾಯಿತು. ಗುರು ಬೃಗಾ ಬೆಸೆಲ್‌ರವರ ಕಲ್ಪನೆಯ ನೃತ್ಯ ಸಂಯೋಜನೆ ಇಷ್ಟವಾಯಿತು. ಕೊನೆಯ ನೃತ್ಯ ತಿಲ್ಲಾನ ಕಲಾಕ್ಷೇತ್ರ ಶೈಲಿಯಲ್ಲಿದ್ದು ಕ್ಲಿಷ್ಟಕರವಾದ ಸಾಂಪ್ರದಾಯಿಕ ಅಡವುಗಳಿಂದ ಕೂಡಿದ್ದು ಚೇತೋಹಾರಿಯಾಗಿತ್ತು.

ಕ್ರಿಸ್ಟೋಫ‌ರ್‌ರವರಿಗೆ ಹಿಮ್ಮೇಳದಲ್ಲಿ ಸಹಕರಿಸಿದವರು ಹಾಡುಗಾರಿಕೆಯಲ್ಲಿ ಭಾವಪೂರ್ಣವಾಗಿ ಹಾಡಿದ ಅಶ್ವತ್ಥನಾರಾಯಣನ್‌, ನಟುವಾಂಗಗೈದ ಕು| ಸುದರ್ಶಿನಿ, ಮೃದಂಗದಲ್ಲಿ ಕಿರಣ್‌ ಪೈ ಹಾಗೂ ಪಿಟೀಲಿನಲ್ಲಿ ಗಣರಾಜ್‌ ಕಾರ್ಲೆ.

ವಿ| ಮಂಗಳ

Advertisement
Advertisement

Udayavani is now on Telegram. Click here to join our channel and stay updated with the latest news.

Next