Advertisement

ಕ್ರಿಸ್ಮಸ್; ಯೇಸು ಕ್ರಿಸ್ತರ ಜನನದ ಹಬ್ಬ-ಗೋದಲಿಯ ಕಿರಣಗಳು

03:10 PM Dec 24, 2022 | Team Udayavani |

ಕ್ರಿಸ್ಮಸ್‌ ಹಬ್ಬದ ಸೊಬಗು ಇರುವುದೇ ಗೋದಲಿಯಲ್ಲಿ. ಇಂದು ವಿವಿಧ ವಿನ್ಯಾಸದ ಆಧುನಿಕತೆಯಿಂದ ತುಂಬಿ ತುಳುಕುವ ಗೋದಲಿಗಳು ನೋಡಲು ತುಂಬಾ ಆಕರ್ಷಣೀಯ. ಯೇಶಾಯ ಪ್ರವಾದಿಯು ಯೇಸುಸ್ವಾಮಿ ಹುಟ್ಟುವ ಸುಮಾರು 700 ವರ್ಷಗಳ ಹಿಂದೆಯೇ ಪ್ರಭುವಿನ ಆಗಮನದ ಬಗ್ಗೆ ಈ ರೀತಿ ಪ್ರವಾದ ಮಾಡುತ್ತಾರೆ: ಕತ್ತಲೆಯಲ್ಲಿ ನಡೆಯುವ ಜನರು ಬೆಳಕನ್ನು ಕಂಡರು. ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿಸುತ್ತದೆ. (ಯೇಶಾಯ 9:2)

Advertisement

ಗೋದಲಿಯ ಮೊದಲ ಕಿರಣವೇ
ಬೆಳಕು. ಪ್ರಭು ಯೇಸುವೇ ಆ ಬೆಳಕು. ಆ ಗೋದಲಿಯಲ್ಲಿ ಆ ಬೆಳಕು ಪ್ರಜ್ವಲಿಸಿತು. ಆ ರಾತ್ರಿಯಲ್ಲಿ ಕುರಿಮಂದೆಯನ್ನು ಕಾಯುತ್ತಿದ್ದ ಕುರುಬರು ಆ ಬೆಳಕನ್ನು ಕಂಡು ಸಾರ್ಥಕರಾದರು. ನಕ್ಷತ್ರದ ಬೆಳಕಿನ ಹಾದಿಯಲ್ಲಿ ನಡೆದು ಬಂದ ಮೂಡಣದೇಶದ ಜೋಯಿಸರು ಗೋದಲಿಯಲ್ಲಿನ ಆ ಬೆಳಕನ್ನು ಕಂಡು ಪಾವನರಾದರು. ಆ ಕೂಸನ್ನು ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಧೂಪ, ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು. ಮುಂದೆ ಆ ಬೆಳಕು ಪಾಪದ ಅಂಧಕಾರದಲ್ಲಿ ದಾರಿಕಾಣದೆ ಕಂಗಾಲಾಗಿದ್ದ ಜನರಿಗೆ ಕ್ಷಮೆಯ ಆಸರೆಯಾಯಿತು. ಕುರುಡರಿಗೆ ದೃಷ್ಟಿ, ರೋಗಿಗಳಿಗೆ ಸ್ವಾಸ್ಥ್ಯ, ಶೋಷಿತರಿಗೆ ಆಶಾಕಿರಣ, ದುರ್ಬಲರ ಶಕ್ತಿಯಾಗಿ ಪ್ರಜ್ವಲಿಸಿತು.

ನಾನೇ ಜಗಜ್ಯೋತಿ. ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ. ಯೇಸುವನ್ನು ಹಿಂಬಾಲಿಸುವುದೆಂದರೆ, ದೇವರ ಸಾಮ್ರಾಜ್ಯದ ಹಾದಿಯಲ್ಲಿ ನಡೆಯುವುದು ಎಂದರ್ಥ. ಇದು ನ್ಯಾಯ, ನೀತಿ, ಪ್ರೀತಿ, ಶಾಂತಿ, ಕರುಣೆಯ ಹಾದಿ. ಬಂಧುತ್ವದ ಹಾದಿ. ಇಲ್ಲಿ ಮೇಲು ಕೀಳೆಂಬ ಭಾವನೆಯಿಲ್ಲ. ಬಡವ ಶ್ರೀಮಂತನೆಂಬ ಬೇಧವಿಲ್ಲ. ಇಲ್ಲಿರುವುದು ಕೇವಲ ಮಾನವೀಯತೆ ಮಾತ್ರ. ಯಾರು ಈ ಹಾದಿಯಲ್ಲಿ ನಡೆಯುತ್ತಾರೊ
ಅವರಲ್ಲಿ ಜೀವದಾಯಕ ಜ್ಯೋತಿ ಪ್ರಜ್ವಲಿಸುವುದು. ತನ್ಮೂಲಕ ತಮ್ಮ ಸುತ್ತಮುತ್ತಲಿನ ಅಂಧಕಾರವನ್ನು ಅವರು ಹೋಗಲಾಡಿಸುವರು. ಕಷ್ಟ, ದುಖ, ದುಗುಡ, ದುಮ್ಮಾನ ಪ್ರತಿಯೊಬ್ಬರ ಜೀವನದ ಒಂದು ಅಂಗ. ಈ ಕಷ್ಟದ ಕತ್ತಲಲ್ಲಿ ತೊಳಲಾಡುವುದರ ಬದಲು ಪ್ರಭು ಯೇಸುವಿನೆಡೆಗೆ ತಿರುಗಿದರೆ ಅವರು ನಮ್ಮ ಬಾಳಿನ ಕತ್ತಲೆಯನ್ನು ಹೋಗಲಾಡಿಸಿ ಹೊಸಬೆಳಕನ್ನು ನೀಡುವರು.

ಗೋದಲಿಯ ಎರಡನೇ ಕಿರಣ
ಸಂತೋಷ. ಪ್ರಭು ಯೇಸು ಸಂತೋಷದ ಪ್ರತೀಕ. ಅವರ ಹುಟ್ಟು ಮಾನವಕುಲಕ್ಕೆ ಸಂತೋಷವನ್ನು ತಂದಿತು. ಅವರ ಬದುಕು ಹಲವರ ಜೀವನದ ಬರಗಾಲವನ್ನು ಹೋಗಲಾಡಿಸಿ ಸುಗ್ಗಿಯನ್ನು ತಂದಿತು. ಗೋದಲಿಯಿಂದ ಪಸರಿಸಿದ ಸಂತೋಷದ ಹೊನಲು ಶಿಲುಬೆಯ ಮೇಲಿಂದಲೂ ಕ್ಷಮೆಯ ಆಶೀರ್ವಾದದ ಮೂಲಕ ಜನರ ಹೃದಯಗಳಲ್ಲಿ ಹರಡಿತು. ಯೇಸು ಎಂದರೆ ಬೆಳಕು, ಯೇಸು ಎಂದರೆ ಸಂತೋಷ.

ಗೋದಲಿಯ ಮೂರನೇ ಕಿರಣ
ಪ್ರೀತಿ. ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದರೆಂದರೆ, ಆತನು ತನ್ನ ಏಕೈಕ ಪುತ್ರನನ್ನೇ ಕೊಟ್ಟನು. ಇದು ದೇವರ ಪ್ರೀತಿಯ ಬಗ್ಗೆ ಬಲವಾದ ಪಾಠವನ್ನು ಪ್ರತಿನಿಧಿಸುತ್ತದೆ, ಮಗುವಿನ ಮೇಲಿನ ಮಹಾನ್‌ ಪ್ರೀತಿಯನ್ನು ತಂದೆ ಮಾತ್ರ ತಿಳಿದುಕೊಳ್ಳಬಹುದು, ಕೆಲವೊಮ್ಮೆ ಅವರು ತುಂಬಾ ಪ್ರೀತಿಸುತ್ತಾರೆ, ಕೆಲವು ರೀತಿಯಲ್ಲಿ ನಾವು ತಪ್ಪುಗಳನ್ನು ಮಾಡದಂತೆ, ಬೀಳದಂತೆ ಅಥವಾ ನೋಯಿಸದಂತೆ ತಡೆಯಲು ಪ್ರಯತ್ನಿಸುತ್ತೇವೆ. ಯೇಸು ಮನುಷ್ಯನಾದ ಕ್ಷಣದಲ್ಲಿ ದೇವರಿಗೆ ಅದೇ ಪ್ರೀತಿ. ಆದರೆ, ಯೇಸುವಿನ ಮೇಲೆ ಅವನು ಅನುಭವಿಸಬಹುದಾದ ಅಪಾರ ಪ್ರೀತಿಯ ಹೊರತಾಗಿಯೂ, ಮಾನವೀಯತೆಯ ಮೇಲಿನ ಪ್ರೀತಿಯು ಹೆಚ್ಚು ದೊಡ್ಡದಾಗಿತ್ತು ಮತ್ತು ಜಗತ್ತನ್ನು ಉಳಿಸಬಲ್ಲ ಏಕೈಕ ತ್ಯಾಗ ತನ್ನ ಏಕೈಕ ಪುತ್ರನದು ಎಂದು ಅವನಿಗೆ ತಿಳಿದಿತ್ತು. ಅದೇ ಪ್ರೀತಿಯ ಕಟ್ಟಳೆಯನ್ನು ಯೇಸು ನಮಗೆ ನೀಡುತ್ತಾರೆ: ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ: ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ; ನಾನು ನಿಮ್ಮನ್ನು ಪ್ರೀತಿಸಿರುವಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ. ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರು ಅರಿತುಕೊಳ್ಳುವರು. ಪ್ರೀತಿಯೇ ನಮ್ಮನ್ನು ಒಗ್ಗೂಡಿಸುವ ಅದ್ಭುತ ಮಂತ್ರ.

Advertisement

ಗೋದಲಿಯ ನಾಲ್ಕನೇ ಕಿರಣ
ಶಾಂತಿ. ಪ್ರಭು ಯೇಸು ಹುಟ್ಟುವ ಎಷ್ಟೋ ವರ್ಷಗಳ ಮೊದಲೇ ಈ ಪ್ರವಾದಿಯು ಆತನ ಬಗ್ಗೆ ಎಷ್ಟು ಚೆನ್ನಾಗಿ ನಮಗೆ ತಿಳಿಸುತ್ತಾರೆಂದರೆ ಆ ಗೋದಲಿಯಲ್ಲಿ ಹುಟ್ಟಿದ ಆ ಪುಟ್ಟ ಕಂದ ಮುಂದೆ ಜಗತ್ತಿಗೆ ಏನಾಗಬಲ್ಲ ಎಂಬುದು ನಮಗೆ ಸ್ವಷ್ಟವಾಗುತ್ತದೆ. ಪ್ರವಾದಿಯ ಈ ಭವಿಷ್ಯವಾಣಿ ಪ್ರಭು ಯೇಸುವಿನ ಜೀವನದಲ್ಲಿ ಸಾಕಾರಗೊಂಡಿತು. ಶಾಂತಿಯ ಕುವರನಾಗಿ ಜಗದೆಲ್ಲೆಡೆ ಶಾಂತಿಯ ಮಂತ್ರವನ್ನು ಬಿತ್ತಿದರು. ವಿವೇಚನೆಯಿಂದ ದೇವರ ಸಾಮ್ರಾಜ್ಯದ ಶುಭ ಸಂದೇಶವನ್ನು ಜಗದೆಲ್ಲೆಡೆ ಸಾರಿದರು.

ಗೋದಲಿಯ ಐದನೇ ಕಿರಣ ಸೇವೆ.
ದೇವರು ಮಾನವನ ಸೇವೆ ಮಾಡಲೆಂದೇ ಹಾಗೂ ಮಾನವಕುಲಕ್ಕೆ ಸೇವೆಯ ಪಾಠ ಕಲಿಸಲೆಂದೇ ಈ ಜಗತ್ತಿಗೆ ಬಂದರು. ಅದಕ್ಕಾಗಿಯೇ ಅವರು ಗೋದಲಿಯಲ್ಲಿ ಹುಟ್ಟಿದರು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ, ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಲಿ.ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕೂ ಬಂದಿದ್ದಾನೆ.

ಕೊನೆಯ ಭೋಜನದ ಸಂದರ್ಭದಲ್ಲಿ ಶಿಷ್ಯರ ಪಾದ ತೊಳೆದು ಸೇವೆಯ ಪಾಠವನ್ನು ಅವರು ಕಲಿಸಿದರು. ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ. ಜನರ ಸೇವೆಯೇ ಜನಾರ್ಧನನ ಸೇವೆ ಎಂಬುದನ್ನು ನಾವು ಅರಿತುಕೊಂಡಾಗ
ಬದುಕು ಸಾರ್ಥಕವಾಗುವುದು.

ಗೋದಲಿಯ ಆರನೇ ಕಿರಣ ಕ್ಷಮೆ.
ಮಾನವನ ಪಾಪಗಳನ್ನು ಕ್ಷಮಿಸಿ ಅವರನ್ನು ಮತ್ತೆ ತನ್ನಲ್ಲಿಗೆ ಸೆಳೆಯಲು ದೇವರು ಮಾನವರಾದರು, ಬಡಗೋದಲಿಯಲ್ಲಿ ಹುಟ್ಟಿದರು. ತಮ್ಮ ಬೋಧನೆಯಲ್ಲಿ ಅವರು ಕ್ಷಮಾಗುಣಕ್ಕೆ ಹೆಚ್ಚು ಮಹತ್ವವನ್ನು ನೀಡಿದರು. ಬೈಬಲ್‌ನಲ್ಲಿ ಕ್ಷಮೆಯ ಬಗ್ಗೆ ಅದೆಷ್ಟೋ ಉಲ್ಲೇಖಗಳು ನಮಗೆ ಸಿಗುತ್ತವೆ. ಆದ ಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.

ನಿಮ್ಮ ವೈರಿಗಳನ್ನು ಪ್ರೀತಿಸಿರಿ. ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ. ಕೊನೆಗೆ ಶಿಲುಬೆಯ ಮೇಲೆ ಪ್ರಾಣ ಅರ್ಪಿಸುವಾಗ ಅದೇ ಕ್ಷಮೆಯ ಕಿರಣವನ್ನು ಜನರ ಮೇಲೆ ಸೂಸಿದರು. “”ಪಿತನೇ, ಇವರನ್ನು ಕ್ಷಮಿಸಿ; ತಾವೇನು ಮಾಡುತ್ತಿರುವರೆಂದು ಇವರು ಅರಿಯರು,’’ ಕ್ಷಮಾಗುಣವು ಸರ್ವ ಗುಣಗಳಲ್ಲಿ ಶ್ರೇಷ್ಠವಾದುದು. ಇದು ನೊಂದ ಮನಸ್ಸುಗಳನ್ನು ಬೆಸೆಯುವ ಕೊಂಡಿಯಾಗಿದೆ.

ಬೆಳಕು, ಸಂತೋಷ, ಪ್ರೀತಿ, ಶಾಂತಿ, ಸೇವೆ ಮತ್ತು ಕ್ಷಮೆ ಇವು ಗೋದಲಿಯ ಕಿರಣಗಳು. ಈ ಕಿರಣಗಳು ನಮ್ಮ ಹೃಣ್ಮನಗಳಲ್ಲಿ ಹರಿದು ನಮ್ಮ ಸುತ್ತಮುತ್ತಲು ಪಸರಿಸಿ ಈ ಜಗತ್ತು ಸುಂದರ ಬದುಕಿನ ತಾಣವಾಗಿ ಪರಿವರ್ತನೆಗೊಂಡಾಗ ಕ್ರಿಸ್ಮಸ್‌ ಹಬ್ಬದ ಆಚರಣೆಗೆ ಸೂಕ್ತ ಅರ್ಥ ಬರುವುದು. ಶಾಂತಿಯ ಕುವರ, ಪ್ರೀತಿಯ ಸಾಗರ, ಬಾಲಯೇಸು ನಮ್ಮ ಜೀವನದಲ್ಲಿ ಹೊಸಬೆಳಕಾಗಲಿ.
ಎಲ್ಲರಿಗೂ ಕ್ರಿಸ್ಮಸ್‌ ಹಬ್ಬದ
ಶುಭಾಶಯಗಳು

ರಿಚರ್ಡ್‌ ಅಲ್ವಾರಿಸ್‌,
ಕುಲಶೇಖರ

Advertisement

Udayavani is now on Telegram. Click here to join our channel and stay updated with the latest news.

Next