Advertisement

ಬದುಕಿಗೆ ಭರವಸೆಯ ಹೊಸ ಹುರುಪನ್ನು ತುಂಬುವ ಕ್ರಿಸ್ ಮಸ್ ಹಬ್ಬ !

11:11 AM Dec 26, 2019 | Mithun PG |

ಕಣ್ಣು ಮುಚ್ಚಿ ಬಿಡುವುದರೊಳಗೆ ವರ್ಷದ ಕೊನೆಯ ತಿಂಗಳ ಜೊತೆಗೆ ಕ್ರಿಸ್ ಮಸ್ ಹಬ್ಬವು ಬಂದೇ ಬಿಟ್ಟಿತು. ಕ್ರಿಸ್ ಮಸ್ ಎಂದ ಕೂಡಲೇ ಬಗೆಯ ಬಗೆಯ ಅಲಂಕಾರಗಳು, ಕೇಕ್, ಸಿಹಿ ತಿನಿಸುಗಳು, ವೈನ್, ಉಡುಗೊರೆಯನ್ನು ತರುವ ಸಾಂತಾ ಕ್ಲಾಸ್ ಹೀಗೆ ಹಲವು ಚಿತ್ರಣಗಳು ನೆನಪಾಗುವುದು ಸಹಜ. ಇನ್ನು ಮಕ್ಕಳಂತೂ ಈ ಹಬ್ಬದಲ್ಲಿ ಬಹಳ ಸಂಭ್ರಮಿಸುತ್ತಾರೆ. ಗಿಡ್ಡನೆಯ, ಬಿಳಿ ಗಡ್ಡದ, ಮುಖದ ತುಂಬಾ ನಗು ತುಂಬಿದ, ದೊಡ್ಡ ಹೊಟ್ಟೆಯ, ಕೆಂಪು ಟೋಪಿ ಧರಿಸಿದ ಸಾಂತಾಕ್ಲಾಸ್  ಉಡುಗೊರೆಯನ್ನು ತರುತ್ತಾನೆ ಎಂದು ಕಾಯುತ್ತಾ ಕುಳಿತಿರುತ್ತಾರೆ.

Advertisement

ಈ ಹಬ್ಬ ಎಂದರೆ ಕಣ್ಮುಂದೆ ಬರುವುದು ಸಾಲು ಸಾಲು ಕ್ರಿಸ್‌ ಮಸ್ ಟ್ರೀಗಳ ಝಲಕ್, ಬೆಳಕಿನ ಚಿತ್ತಾರ, ಹೊಸ ಬಟ್ಟೆಯನ್ನು ಧರಿಸಿದ ಮಕ್ಕಳು ಮತ್ತು ಯುವಕ-ಯುವತಿಯರು. ಚರ್ಚ್ ಗಳಲ್ಲಿನ ಪ್ರಾರ್ಥನೆ, ಗಂಟೆಗಳ ಸದ್ದು, ಶುಭಾಶಯಗಳ ವಿನಿಮಯ, ಗ್ರೀಟಿಂಗ್ ಕಾರ್ಡ್ ಗಳು, ಮತ್ತು ಕೇಕ್‌ಗಳು. ಇವು  ಹಬ್ಬದ ಮೆರುಗನ್ನು ಬಹಳ  ಹೆಚ್ಚಿಸುತ್ತದೆ.  ಹೇಳಿ ಕೇಳಿ ವರ್ಷದ ಕೊನೆಯ ವಾರದಲ್ಲಿ ಬರುವ ಈ ಹಬ್ಬದ  ಸೊಬಗನ್ನು ಸವಿಯಲು ಕ್ರೈಸ್ತ ಬಾಂಧವರು ವರ್ಷ ಪೂರ್ತಿಯಾಗಿ ಕಾಯುವುನ್ನು ಕಾಣಬಹುದು.  ಕ್ರಿಸ್ ಮಸ್ ಹಬ್ಬದ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ಅರ್ಥವಿದೆ. ಕ್ರಿಸ್‌ಮಸ್ ಟ್ರೀ ಯನ್ನು ಸುಂದರವಾಗಿ ಅಲಂಕರಿಸುವುದರ ಹಿಂದೆ ಬದುಕಿಗೆ  ಸಂದೇಶವನ್ನು ಸಾರುವ ವಿಷಯವು ಅಡಗಿದೆ. ಚಳಿಗಾಲದಲ್ಲಿ ಕ್ರಿಸ್‌ಮಸ್ ಟ್ರೀಗಳು  ಹಸಿರಿನಿಂದ ಕಂಗೊಳಿಸುವ ಕಾರಣ ಹೊಸ ಜೀವನಕ್ಕೆ ಹೊಸ ಭರವಸೆಯನ್ನು ನೀಡುವಂತಾಗಲಿ ಎಂಬ ಅಂಶವನ್ನು ಒಳಗೊಂಡಿದೆ.

ಕ್ರಿಸ್‌ ಮಸ್ ಹಬ್ಬದ ಮತ್ತೊಂದು ವಿಶೇಷತೆ ನಂಬಿಕೆ ವಿಶ್ವಾಸದಿಂದ ಕೂಡಿದ ಮೇಣದ ಬತ್ತಿ. ವಿಶ್ವದ ಬೆಳಕು ಎಂದು ಕರೆಯುವ ಕ್ರಿಸ್ತನ ನೆನಪನ್ನು ಈ ಮೇಣದ ಬತ್ತಿಗಳು ಮೇಳೈಸುತ್ತವೆ ಎಂಬುದು  ಪ್ರತೀತಿ. ಹಿಂದಿನಿಂದಲೂ ಮೇಣದ ಬತ್ತಿಯನ್ನು ಉಪಯೋಗಿಸಿ ಅಲಂಕಾರವನ್ನು ಮಾಡುತ್ತಿದ್ದರು. ಆದರೆ ಈಗ ಆಧುನಿಕತೆಯೆಂಬುದು ಹಬ್ಬಗಳನ್ನು ಪ್ರವೇಶಿಸಿ, ಮೇಣದ ಬತ್ತಿಯ ಬದಲಾಗಿ ದೀಪಗಳ ಬಳಕೆಯನ್ನು ಕಾಣಬಹುದು.

ಈ ಹಬ್ಬದ ಹಿನ್ನಲೆಯನ್ನು ಗಮನಿಸಿದಾಗ ದೇವ  ಪುತ್ರ ಏಸು ಹುಟ್ಟಿದ ದಿನವನ್ನೇ ಕ್ರಿಸ್ ಮಸ್ ಆಗಿ  ಆಚರಿಸುವ  ಪದ್ದತಿ ಜನ್ಮ ತಾಳಿದೆ. ಮಧ್ಯರಾತ್ರಿಯಿಂದಲೇ  ಚರ್ಚ್ ನಲ್ಲಿ ಆಚರಣೆಗಳು ಪ್ರಾರಂಭವಾಗುತ್ತದೆ. ಕ್ರೈಸ್ತ  ಬಾಂಧವರೆಲ್ಲರೂ ಒಟ್ಟುಗೂಡಿ ಪ್ರಾರ್ಥನೆಯನ್ನು ಸಲ್ಲಿಸಿ, ಸಿಹಿತಿಂಡಿಯನ್ನು ಹಂಚುವುದರ ಮುಖೇನ, ಶುಭಾಯಶಗಳ ವಿನಿಮಯವನ್ನು ಮಾಡುತ್ತಾರೆ.

ಈ ಹಬ್ಬದಲ್ಲಿ ಹೆಚ್ಚು ಗಮನ ಸೆಳೆಯುವುದು ಗೋದಲಿ. ಇದು ಮುಖ್ಯವಾಗಿ ಏಸು ಜನನವನ್ನು ಸಾರುತ್ತದೆ. ಮನೆಯಲ್ಲಿ ವಿವಿಧ ಗೊಂಬೆಗಳನ್ನು ಬಳಸಿ, ಇನ್ನು ಕೆಲವರು ಜೀವಂತ ಅಂಶಗಳನ್ನು ಬಳಸಿ,  ಏಸುವಿನ ಜನನವನ್ನು ಸಂಭ್ರಮಿಸುತ್ತಾರೆ.  ಮೇರಿ, ಜೋಸೆಫ್, ಬಾಲ ಏಸು, ಮೇಕೆ, ಜನರು ,ಪ್ರಾಣಿಗಳು ಸೇರಿದಂತೆ ವಿವಿಧ ಬಗೆಯ ಗೋದಲಿಗಳನ್ನು ಸಿದ್ದ ಪಡಿಸುವುದು ವಿಶೇಷವೆನ್ನಬಹುದು.

Advertisement

ಹೀಗೆ ಎಲ್ಲರೂ ಜೊತೆ ಸೇರಿ ಆಚರಿಸುವ ಈ ಹಬ್ಬಕ್ಕೆ ಧರ್ಮಗಳ ಭೇದ ಭಾವವಿಲ್ಲ. ಕೈಸ್ತ ಬಾಂಧವರು ತಮ್ಮ ಹಬ್ಬದ ಕಳೆಯನ್ನು ಹೆಚ್ಚಿಸುವ ಸಲುವಾಗಿ ಇತರ ಧರ್ಮದವರಿಗೆ ಸಿಹಿ ಹಂಚುವುದರ ಮೂಲಕ ಏಸುವಿನ ಜನನದ ದಿನವನ್ನು ಆನಂದಿಸುತ್ತಾರೆ. ವರ್ಷದ ಕೊನೆಯ ವಾರದಲ್ಲಿ ಬರುವ ಈ ಹಬ್ಬವೂ ವಿಶ್ವದೆಡೆಲ್ಲೆ ಹೊಸದೊಂದು ಭಾಷ್ಯಕ್ಕೆ ಸಾಕ್ಷಿಯಾಗುತ್ತದೆ. ಹಬ್ಬದ ಸಡಗರ ಮುಗಿಯುತ್ತಿದ್ದಂತೆ ಅನೇಕ ದೇಶಗಳು ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಕಾಯುತ್ತಿರುತ್ತದೆ. ಒಟ್ಟಿನಲ್ಲಿ ಹೊಸವರ್ಷದ ಮುನ್ನವೇ ಬರುವ ಈ ಹಬ್ಬವೂ ಎಲ್ಲರ ಬದುಕಿಗೆ ಭರವಸೆಯೊಂದಿಗೆ ಹೊಸ ಹುರುಪನ್ನು ತುಂಬುವಂತಾಗಲಿ.

ಸಾಯಿನಂದಾ ಚಿಟ್ಪಾಡಿ

ದ್ವಿತೀಯ ಎಂ.ಸಿ.ಜೆ

ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next