Advertisement

ಕ್ರಿಸ್ಮಸ್‌ ಸಂಭ್ರಮಕ್ಕೆ ಸಂಗೀತದ ಇಂಪು ನೀಡುವ –ಕ್ಯಾರೊಲ್

11:37 AM Dec 26, 2019 | Team Udayavani |

ಕ್ರೈಸ್ತರ ಎರಡು ಪ್ರಮುಖ ಹಬ್ಬಗಳಾದ ಕ್ರಿಸ್ಮಸ್‌ ಮತ್ತು ಈಸ್ಟರ್‌ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ವಿಶಿಷ್ಟವಾಗಿರುತ್ತವೆ. ಧಾರ್ಮಿಕ ವಿಧಿ ವಿಧಾನಗಳು ಮತ್ತು ಬಲಿ ಪೂಜೆಗಳ ಪಾವಿತ್ರ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಯಾ ಸಂದರ್ಭಕ್ಕನುಗುಣವಾದ ಭಕ್ತಿ ಗೀತೆಗಳಿವೆ. ಕ್ರಿಸ್ಮಸ್‌ ಸಂದರ್ಭದಲ್ಲಿ ಕೇಳಿ ಬರುವ ಅಥವಾ ಹಾಡುವ ಗೀತೆಗಳನ್ನು ಕ್ಯಾರೊಲ್ಸ್‌ ಎಂಬುದಾಗಿ ಹೆಸರಿಸಲಾಗಿದೆ.

Advertisement

ಕ್ಯಾರೊಲ್ಸ್‌ ಹಿನ್ನೆಲೆ ‘ಕ್ಯಾರೊಲ್‌’ ಎಂದರೆ ನರ್ತನ ಅಥವಾ ಸಂತಸದ ಮತ್ತು ಉಲ್ಲಾಸದ ಹಾಡು ಎಂದರ್ಥ. ಕ್ಯಾರೊಲ್‌ಗಳನ್ನು ಸಾವಿರಾರು ವರ್ಷಗಳ ಹಿಂದೆ ಯುರೋಪ್‌ನಲ್ಲಿ ಮೊದಲ ಬಾರಿ ಹಾಡಲಾಯಿತು ಎಂದು ಹೇಳಲಾಗುತ್ತಿದೆ. ಆದರೆ, ಅವುಗಳು ಕ್ರಿಸ್ಮಸ್‌ ಕ್ಯಾರೊಲ್‌ಗ‌ಳಾಗಿರಲಿಲ್ಲ. ಏಕೆಂದರೆ ಆಗ ಕ್ರೈಸ್ತ ಧರ್ಮ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಯಾವುದೇ ಧರ್ಮಕ್ಕೆ ಸೇರದವರು ಈ ಹಾಡುಗಳನ್ನು ಹಾಡುತ್ತಿದ್ದರು.

ಚಳಿಗಾಲದ ಸಂದರ್ಭದಲ್ಲಿ ಉತ್ತರಾರ್ಧ ಗೋಳದಲ್ಲಿ (ಜರ್ಮನಿ, ರಶ್ಯಾ ಮತ್ತಿತರ ದೇಶಗಳಲ್ಲಿ) ಹಗಲು ವೇಳೆ ಅತ್ಯಂತ ಕಡಿಮೆ ಇರುವ ದಿನ (ಸಾಮಾನ್ಯವಾಗಿ ಡಿ. 22) ಕಲ್ಲಿನ ಕೋಟೆಯ ಸುತ್ತ ಜನರು ಸಂಗೀತವನ್ನು ಹಾಕಿ ಹಾಡುತ್ತ ಕುಣಿಯುತ್ತ ಸಂಭ್ರಮಿಸುತ್ತಿದ್ದರು. ಕ್ರೈಸ್ತ ಧರ್ಮದ ಪ್ರಾರಂಭಿಕ ಹಂತದಲ್ಲಿ ಈ ಆಚರಣೆಯನ್ನು ತಮ್ಮ ಆಚರಣೆಯನ್ನಾಗಿ ಮಾಡಿಕೊಂಡು ಕ್ರೈಸ್ತ ಧರ್ಮದ ಹಾಡುಗಳನ್ನು ಹಾಡಲಾರಂಭಿಸಿದರು. ಹಾಗಾಗಿ ಕ್ಯಾರೊಲ್‌ಗ‌ಳನ್ನು ಎಲ್ಲಾ ಋತುಮಾನಗಳಿಗೆ ಅನುಗುಣವಾಗಿ ರಚಿಸಿ ಹಾಡುತ್ತಿದ್ದರೂ, ಕ್ರಿಸ್ಮಸ್‌ ಸಂದರ್ಭದಲ್ಲಿ ಹಾಡುವ ಕ್ಯಾರೊಲ್‌ಗ‌ಳು ಮಾತ್ರ ಅಳಿಯದೆ ಉಳಿದುಕೊಂಡು ಬಂದವು.

ಕ್ರಿ. ಶ. 129 ರಲ್ಲಿ ರೋಮ್‌ನಲ್ಲಿ ಕ್ರಿಸ್ಮಸ್‌ ಆಚರಣೆ ವೇಳೆ ‘ಆ್ಯಂಜೆಲ್ಸ್‌ ಹಿಮ್‌ನ್‌’ (ದೇವ ದೂತರ ಸ್ತೋತ್ರ ಗೀತೆ) ಹಾಡ ಬೇಕೆಂದು ಓರ್ವ ಬಿಷಪ್‌ ಹೇಳುತ್ತಿದ್ದರು. ಕ್ರಿ.ಶ. 760 ರಲ್ಲಿ ಜೆರುಸಲೆಮಿನ ಕೋಮಾಸ್‌ ಅವರು ಗ್ರೀಕ್‌ ಆರ್ಥೊಡಾಕ್ಸ್‌ ಚರ್ಚ್ ಗಾಗಿ ಪ್ರಸಿದ್ಧ ಕ್ರಿಸ್ಮಸ್‌ ಗೀತೆಯನ್ನು ರಚಿಸಿದ್ದರು.

ಆ ಬಳಿಕ ಯೊರೋಪಿನಾದ್ಯಂತ ಹಲವಾರು ಮಂದಿ ಸಂಗೀತ ಸಂಯೋಜಕರು ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಬರೆಯಲು ಆರಂಭಿಸಿದರು. ಆದರೆ ಅವೆಲ್ಲವುಗಳುಲ್ಯಾಟಿನ್‌ ಭಾಷೆಯಲ್ಲಿ ಇದ್ದ ಕಾರಣ ಜನಸಾಮಾನ್ಯರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಮಧ್ಯ ಯುಗದಲ್ಲಿ (ಕ್ರಿ.ಶ. 1200) ಜನರಿಗೆ ಸಾಮೂಹಿಕ ಕ್ರಿಸ್ಮಸ್‌ ಆಚರಣೆ ಬಗೆ ಆಸಕ್ತಿ ಕಡಿಮೆಯಾಗುತ್ತಾ ಬಂದಿತ್ತು.

Advertisement

ಆದರೆ 1223 ರಲ್ಲಿ ಅಸಿಸ್ಸಿಯ ಸಂತ ಫ್ರಾನ್ಸಿಸ್‌ ಅವರು ಇಟೆಲಿಯಲ್ಲಿ ಸ್ಥಳೀಯ ನಾಟಕಗಳನ್ನು ಆರಂಭಿಸಿದ ಬಳಿಕ ಚಿತ್ರಣ ಬದಲಾಯಿತು. ಈ ನಾಟಕಗಳಲ್ಲಿ ಜನರು ಕಥೆಯನ್ನು ಹಾಡಿನ ಮೂಲಕ ತಿಳಿ ಹೇಳುತ್ತಿದ್ದರು. ಸ್ಥಳೀಯ ಭಾಷೆಗಳಲ್ಲಿಯೇ ಗೀತೆಗಳನ್ನು ರಚಿಸಿ ಹಾಡುವ ಸಂಪ್ರದಾಯ ಆರಂಭವಾಯಿತು.

ಹಾಗೆ ಹೊಸ ಕ್ಯಾರೊಲ್‌ಗ‌ಳು ಫ್ರಾನ್ಸ್‌, ಜರ್ಮನಿ, ಸ್ಪೈನ್‌ ಮತ್ತಿತರ ಐರೋಪ್ಯ ದೇಶಗಳಿಗೆ ವ್ಯಾಪಿಸಿ ಜನಪ್ರಿಯವಾದವು. ಹೀಗೆ ಆರಂಭವಾದ ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಹಾಡುವ ಪರಂಪರೆ ಇವತ್ತಿಗೂ ಮುಂದುವರಿದುಕೊಂಡು ಬಂದಿದೆ. ಈ ಕ್ರಿಸ್ಮಸ್‌ ಗೀತೆಗಳು ಸಾಮಾನ್ಯವಾಗಿ ಯೇಸು ಕ್ರಿಸ್ತರ ಜನನದ ಸಂದರ್ಭದ ಘಟನಾವಳಿಯನ್ನು ಆಧರಿಸಿ ಇರುತ್ತವೆ.

ಪ್ರಸ್ತುತ ಸಂದರ್ಭದಲ್ಲಿ ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಸಾಮಾನ್ಯವಾಗಿ ಕ್ರಿಸ್ಮಸ್‌ ಹಬ್ಬದ ಮುಂಚಿನ ದಿನ ಅಂದರೆ ಡಿ.24ರಂದು ರಾತ್ರಿ ಚರ್ಚ್‌ಗಳಲ್ಲಿ ನಡೆಯುವ ಸಂಭ್ರಮದ ಬಲಿ ಪೂಜೆಗೆ ಮುಂಚಿತವಾಗಿ ಒಂದು ತಾಸು ಕಾಲ ಹಾಡಲಾಗುತ್ತಿದೆ. ಈ ಕ್ರಿಸ್ಮಸ್‌ ಗೀತೆಗಳ ಗಾಯನಕ್ಕೆ ಸಂಬಂಧಿಸಿ ಗಾಯನ ತಂಡಕ್ಕೆ ಹಲವು ದಿನಗಳ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ. ಸುಮಧುರ ಸಂಗೀತ ಮತ್ತು ಗಾಯನದ ಮೂಲಕ ಕ್ರಿಸ್ಮಸ್‌ ಆಚರಣೆಗೆ ಮತ್ತಷ್ಟು ಮೆರುಗನ್ನು ನೀಡುತ್ತವೆ ಈ ಕ್ಯಾರೊಲ್‌ಗ‌ಳು.

Advertisement

Udayavani is now on Telegram. Click here to join our channel and stay updated with the latest news.

Next