ಕಲಬುರಗಿ: ಮಹಾನಗರದ ಚರ್ಚ್ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ಕ್ರಿಸ್‌ಮಸ್ ಹಬ್ಬವನ್ನು ಭಕ್ತಿ, ಶ್ರದ್ಧೆಯೊಂದಿಗೆ ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಏಸು ದೇವನನ್ನು ಸ್ಮರಿಸಿ ಭಕ್ತಿಯಲ್ಲಿ ಮಿಂದೆದ್ದರಲ್ಲದೇ ತಮ್ಮಿಂದ ಕೈಲಾದಷ್ಟು ಧಾನಗಳನ್ನು ಶಕ್ತಿಹೀನರಿಗೆ ಮಾಡುವ ಮೂಲಕ ಭಕ್ತಭಾವ ಹಾಗೂ ಧಾರ್ಮಿಕತೆ ಮೆರೆದರು. ಕ್ರೈಸ್ತರು ತಮ್ಮ ಮನೆಗಳಲ್ಲಿ ಅತ್ಯಂತ ಭಕ್ತಿಯಿಂದ ಹಬ್ಬ ಆಚರಿಸಿದರು. ತಮ್ಮ ಆಪ್ತರಿಗೆ, ಬಂಧು, ಸ್ನೇಹಿತರಿಗೆ ಮನೆಗಳಿಗೆ ಆಹ್ವಾನಿಸಿ ಆತಿಥ್ಯ ನೀಡಿದರು. ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಂಭ್ರಮಿಸಿದರು.
ನಗರದ ಶರಣಬಸವೇಶ್ವರ ದೇವಸ್ಥಾನ ಮಾರ್ಗದಲ್ಲಿರುವ ಸೇಂಟ್ ಮೇರಿ ಚರ್ಚ್‌ನಲ್ಲಿ ರವಿವಾರ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಧರ್ಮ ಗುರುಗಳು ಧರ್ಮ ಸಂದೇಶ ನೀಡಿ, ಜಾಗತಿಕ ಮಟ್ಟದ ಎಲ್ಲ ಸಮಸ್ಯೆಗಳಿಗೆ ಹಾಗೂ ಎಲ್ಲೆಡೆ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲು ಕ್ರಿಸ್ತನ ತತ್ವಗಳ ಪರಿಪಾಲನೆಯೇ ಸರಳ ಮಾರ್ಗವಾಗಿವೆ ಎಂದು ಹೇಳಿದರು.
ಬಳಿಕ ಧರ್ಮಗುರು ನೀಡಿದ ಪ್ರಸಾದವನ್ನು ಧನ್ಯತೆಯಿಂದ ಸ್ವೀಕರಿಸಿದರು. ಎಲ್ಲ ಚರ್ಚ್‌ಗಳಲ್ಲಿ ಏಸುಕ್ರಿಸ್ತನಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮೇಣದ ಬತ್ತಿಗಳನ್ನು ಪ್ರಜ್ವಲಿಸಿ ನಮಿಸಲಾಯಿತು. ಧರ್ಮ ಗುರುಗಳಿಂದ ಬೈಬಲ್ ಪಠಣದ ಜತೆಗೆ ಕ್ರಿಸ್ತನ ಬಾಲ್ಯ, ಜೀವನದ ಕುರಿತು ದೈವ ಸಂದೇಶ ನೀಡಲಾಯಿತು. ಭಜನೆ, ವಿಶೇಷ ಆರಾಧನೆಗಳು ನಡೆದವು. ಅಲ್ಲಲ್ಲಿ ಏಸುಕ್ರಿಸ್ತನ ಜೀವನ, ಸಾಧನೆ ಮತ್ತು ತತ್ವಗಳನ್ನು ಬಿಂಬಿಸುವ ನಾಟಕ ಪ್ರದರ್ಶನವಾಯಿತು. ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಕಲಬುರಗಿಯಲ್ಲಿರುವ ಸೇಂಟ್ ಮೇರಿ, ಮೆಥೊಡಿಸ್ಟ್, ಕ್ಯಾಥೋಲಿಕ್ ಚರ್ಚ್, ಇಂಡಿಯನ್ ಕನವೆಷನ್ ಚರ್ಚ್‌ಗಳು ಆಕರ್ಷಕ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದವು. ಅಲಂಕಾರ ಕಣ್ಮನ ಸೆಳೆದವು. ಆಕರ್ಷಕವಾದ ಮೇರಿ, ಬಾಲ ಏಸುವಿನ ಕಲಾಕೃತಿ, ಜೋಸೆಫ್, ಬೊಂಬೆಗಳು, ಕುರಿಗಳು, ಸಾಂತಾ ಕ್ಲಾಸ್, ಬೃಹತ್ ನಕ್ಷತ್ರ ಗಮನ ಸೆಳೆದವು. ಅದೇ ರೀತಿ ವಿಜಯ ವಿದ್ಯಾಲಯದ ಮೆಥೋಡಿಸ್ಟ್ ಚರ್ಚ್‌ನಲ್ಲಿ ದಿನವಿಡಿ ಜನಜಾತ್ರೆಯೇ ಹಾಗೆ ಕ್ರೈಸ್ತರು ಜಮಾಗೊಂಡು ವಿವಿಧ ಕಾರ್ಯಕ್ರಮ ನಡೆಸಿದರು.