Advertisement

2 ಶತಮಾನದ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

03:04 PM Dec 23, 2019 | Suhan S |

ಶ್ರೀರಂಗಪಟ್ಟಣ: ಎರಡು ಶತಮಾನಗಳಿಗೂ ಅಧಿಕ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಶತಮಾನಗಳ ಇತಿಹಾಸವವಿರುವ ರೋಮನ್‌ ಕ್ಯಾಥೋಲಿಕ್‌ ಶೈಲಿಯ ಅಬ್ಬೆದುಬ್ವಾ ಹೆಸರಿನ ಚರ್ಚ್‌ವೊಂದು ತಾಲೂಕಿನ ಗಂಜಾಂ ಗ್ರಾಮದಲ್ಲಿದ್ದು, ಶತಮಾನಗಳು ಉರುಳಿದರೂ ಇಂದಿಗೂ ಕ್ರೈಸ್ತಮತದ ಲಾಂಛನವಾಗಿದೆ. ಇದೇ ಡಿ.24 ರಾತ್ರಿಯಿಂದ ಈ ಚರ್ಚ್‌ನಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ

Advertisement

ಸಾವಿರಾರು ಮಂದಿ ಆಗಮಿಸಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಶತಮಾನಗಳ ಸಂಸ್ಕೃತಿಯ ಸ್ಮಾರಕವಾಗಿ ಪ್ರವಾಸಿಗರ ಕುತೂಹಲ ತಣಿಸುವ ಕೇಂದ್ರ ಬಿಂದುವಾಗಿ ಶ್ರೀರಂಗಪಟ್ಟಣದ ಗಂಜಾಂ ಗ್ರಾಮದಲ್ಲಿರುವ ಚರ್ಚ್‌ ಕ್ರೈಸ್ತ ಮತಸ್ಥರನ್ನು ತನ್ನೆಡೆಗೆ ಸೆಳೆಯುತ್ತಿದೆ.

ಪುರಾತನ ಚರ್ಚ್‌ಹಿಂದಿದೆ ರೋಚಕ ಕಥೆ: ಸುಮಾರು ಕ್ರಿ.ಶ.1800 ನೇ ಇಸವಿಯಲ್ಲಿ ನಿರ್ಮಾಣವಾಗಿದೆ ಎನ್ನಲಾದ ಈ ಅಬ್ಬೆದುಬ್ವಾಚರ್ಚ್‌ ನಿರ್ಮಾಣದ ಹಿಂದೆ ಒಂದು ರೋಚಕ ಕಥೆ ಇದೆ. 1792ರಲ್ಲಿ ಫ್ರಾನ್ಸ್‌ನಿಂದ ಬಂದ ಎತ್ರಾಂಗ್ರೆಸ್‌ ಎನ್ನುವ ಕ್ರೈಸ್ತ ಮಿಶನರಿಯ ಪಾದ್ರಿಯೊಬ್ಬ ಧರ್ಮ ಪ್ರಚಾರಕ್ಕೆ ಭಾರತಕ್ಕೆ ಬಂದು ತಾಲೂಕಿನ ಗಂಜಾಂ ಗ್ರಾಮದಲ್ಲಿ ನೆಲೆಸಿದ್ದರಂತೆ. 1799ರಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ದದಲ್ಲಿ ಟಿಪ್ಪು ಮಡಿದ ನಂತರ ಬ್ರಿಟಿಷರ ನಿಯಂತ್ರಣದಲ್ಲಿದ್ದ ಈ ಗ್ರಾಮದಲ್ಲಿ ರೋಮನ್‌ ಕ್ಯಾಥೋಲಿಕ್‌ ಪಂಗಡದದವರು ಇಂಡೋ ಸಾರ್ಸನಿಕ್‌ ಶೈಲಿಯಲ್ಲಿ ಚರ್ಚ್‌ನ್ನು ನಿರ್ಮಾಣ ಮಾಡಲಾಯಿತೆಂದು ದಾಖಲೆಗಳಿಂದ ತಿಳಿದು ಬರುತ್ತದೆ.

ಕ್ರಿ.ಶ.1800ರಲ್ಲಿ ಧರ್ಮ ಗುರುಗಳಾಗಿ ಭಾರತಕ್ಕೆ ಬಂದ ಫಾದರ್‌ ಅಬ್ಬೆದುಬ್ವಾ ಗಂಜಾಂ ಗ್ರಾಮ ಈ ಚರ್ಚ್‌ ನಿರ್ಮಿಸಿ ಇದರ ಪಕ್ಕದಲ್ಲಿಯೇ ಆಂಗ್ಲ ಮಾದ್ಯಮ ಶಾಲೆಯೊಂದನ್ನು ತೆರದು ಶಿಕ್ಷಣ ಕ್ರಾಂತಿ ಕೈಗೊಂಡು ಧರ್ಮ ಪ್ರಚಾರ ನಡೆಸುತ್ತಿದ್ದ ದಿನಗಳಲ್ಲಿ , ಶ್ರೀರಂಗಪಟ್ಟಣದ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ಲೇಗ್‌ ಹಾಗೂ ಸಿಡುಬು ರೋಗ ಉಲ್ಬಣಿಸಿ ವ್ಯಾಪಕ ಗೊಂಡಾಗ ಸ್ವತಃ ಅಬ್ಬೆದುಬ್ವಾ ಗುರುಗಳೆ ಧರ್ಮ ಪ್ರಸಾರ ಕಾರ್ಯಕ್ಕಿಂತ ಜನ ಸೇವೆ ಕಾರ್ಯವೆಂದು ತಿಳಿದು ಪ್ರಾನ್ಸ್‌ ದೇಶದಿಂದ ಈ ರೋಗಕ್ಕೆ ಔಷಧಿ ತರಸಿ ಮನೆ ಮನೆಗೆ ತೆರಳಿ ಸಾವಿರಾರು ಜನರಿಗೆ ಔಷಧಿ ನೀಡಿ ಜೀವದಾನ ಮಾಡಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ . ಹೀಗೇ  ಜನ ಸೇವೆ ಮಾಡುತ್ತಾ ಸುಮಾರು 23 ವರ್ಷಗಳ ಸೇವೆ ಸಲ್ಲಿಸಿ ಇಲ್ಲಿನ ಜನರ ಮನಸು ಗೆದ್ದ ಕಾರಣದಿಂದಲೇ ಈ ಚರ್ಚ್‌ಗೆ ಅಬ್ಬೆ ದುಬ್ವಾ ಎಂಬ ಅವರ ಹೆಸರಿನಿಂದಲೇ ಕರೆಯುವಷ್ಟು ಪ್ರಸಿದ್ಧಿ ಯಾಯಿತೆಂದು ಗ್ರಾಮದ ಹಿರಿಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶ್ರೀರಂಗಪಟ್ಟಣವನ್ನಾಳಿದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್‌ ಹಾಗೂ ಮೈಸೂರು ಮಹಾರಾಜ ಆಳ್ವಿಕೆಯ ಕಾಲದಲ್ಲಿ ಬಿಟ್ಟು ಹೋದ ಐತಿಹಾಸಿಕ ಸ್ಮಾರಕಗಳೊಂದಿಗೆ ಈ ಅಬ್ಬೆದುಬ್ವಾ ಚರ್ಚ್‌ ಕೂಡ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಶ್ರೀರಂಗಪಟ್ಟಣಕ್ಕೆ ಹೆಮ್ಮೆಯ ವಿಷಯವಾಗಿದೆ. ಎರಡು ಶತಮಾನಗಳೇ ಕಳೆದರೂ ಅಚಲವಾಗಿ ನಿಂತಿರುವ ಈ ಐತಿಹಾಸಿಕ ಚರ್ಚನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

Advertisement

 

-ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next