ಹೊಸದಿಲ್ಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಕಾಪ್ಟರ್ ಹಗರಣದ ಮಧ್ಯವರ್ತಿ ಮೈಕಲ್, ತನ್ನನ್ನು ವಿಚಾರಣೆ ನಡೆಸುತ್ತಿರುವ ಸಿಬಿಐ ಮುಂದೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ. ಡೀಲ್‌ನ ನಂತರ ತನಗೆ ಬಂದ ಲಂಚದ ಹಣವನ್ನು ಬಚ್ಚಿಡಲು ಆತ ಭಾರತದಲ್ಲಿ ನಕಲಿ ಕಂಪೆನಿ ಸೃಷ್ಟಿಸಿರುವ ವಿಚಾರ ಬೆಳಕಿಗೆ ಬಂದಿದೆ. ಹೊಸದಿಲ್ಲಿಯ ಆರ್.ಕೆ. ನಂದಾ, ಮುಂಬೈನ ಜೆ.ಬಿ. ಬಾಲಸುಬ್ರಹ್ಮಣ್ಯಂ ಎಂಬುವರ ಸಹಾಯದಿಂದ ನಕಲಿ ಕಂಪೆನಿ ಸೃಷ್ಟಿಸಿ ಲಂಚದ ಹಣವನ್ನು ಅದರಲ್ಲಿ ಹೂಡಿಕೆ ಮಾಡಿದ್ದ. ಆನಂತರ, ಕಂಪೆನಿ ಹೆಸರಲ್ಲಿ ಚತ್ತಾರ್‌ಪುರದಲ್ಲೊಂದು ಫಾರ್ಮ್ ಹೌಸ್ ಸೇರಿದಂತೆ 3 ಸ್ಥಿರಾಸ್ತಿಗಳನ್ನು ಖರೀದಿಸಿದ್ದ. ಈ ಮೂರರಲ್ಲಿ ಎರಡನ್ನು ಮಾರಿ, ಬಂದ ದುಡ್ಡನ್ನು ದುಬೈನಲ್ಲಿರುವ ತನ್ನ ಕಂಪೆನಿಗೆ ವರ್ಗಾಯಿಸಿಕೊಂಡಿದ್ದ. ಈ ವಿಚಾರದ ಬೆನ್ನು ಹತ್ತಿರುವ ಸಿಬಿಐ, ಇದೀಗ ಮೈಕಲ್‌ನ ಡ್ರೈವರ್‌ನನ್ನೂ ವಿಚಾರಣೆಗೊಳಪಡಿಸಲು ತೀರ್ಮಾನಿಸಿದೆ.