Advertisement
ಉಡುಪಿ: ಜರ್ಮನ್ ಮಿಷನರಿಗಳು ಸ್ಥಾಪಿಸಿದ ಜಿಲ್ಲೆಯ ಮೊದಲ ಪ್ರೌಢಶಾಲೆ “ಕ್ರಿಶ್ಚಿಯನ್ ಹೈಸ್ಕೂಲ್’ಗೆ ಇದೀಗ 121ರ ಸಂಭ್ರಮ. ಈ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಬದುಕು ರೂಪಿಸಿಕೊಟ್ಟಿದೆ.
ಜರ್ಮನ್ ಮಿಷನರಿಗಳು 1898ರಲ್ಲಿ ಉಡುಪಿಯಲ್ಲಿ ಕ್ರಿಶ್ಚಿಯನ್ ಪ್ರೌಢಶಾಲೆ ಪ್ರಾರಂಭಿಸಿದ್ದರು. ಆ ಸಂದರ್ಭ ಶಾಲೆಯಲ್ಲಿ 36 ಮಕ್ಕಳು ಹಾಗೂ 8 ಮಂದಿ ಅಧ್ಯಾಪಕರು ಇದ್ದರು. ಹಂತ ಹಂತವಾಗಿ ಅಭಿವೃದ್ಧಿ ಕಂಡ ಶಾಲೆ 1907ರ ಹೊತ್ತಿಗೆ 267 ಮಕ್ಕಳಿಗೆ ವಿದ್ಯೆ ನೀಡುವಷ್ಟು ಬೆಳವಣಿಗೆ ಸಾಧಿಸಿತ್ತು. ಎಂ. ವೆಂಕಟೇಶ್ ಪ್ರಭು ಅವರು ಪ್ರೌಢಶಾಲೆ ಮೊದಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಬದುಕು ರೂಪಿಸಲು ಅಗತ್ಯವಿರುವ ವೃತ್ತಿಪರ ತರಬೇತಿ ಸಹ ನೀಡಲಾಗುತ್ತಿತ್ತು. ಉಡುಪಿ ಸುತ್ತಮುತ್ತಲಿನ ಶೇ. 85ರಷ್ಟು ಮಕ್ಕಳು ಪ್ರೌಢಶಾಲೆಯ ಶಿಕ್ಷಣವನ್ನು ಈ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ.
Related Articles
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸ್ಥಳದ ಕೊರತೆ ಎದುರಾಯಿತು. 1913ರಲ್ಲಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿದ್ದು, ಅಂದಿನ ಜಿಲ್ಲಾ ಮುನ್ಸಿಫ್ರಾದ ಬಿ. ವೆಂಕಟರಾಯ ಕಟ್ಟಡ ಶಂಕು ಸ್ಥಾಪನೆ ನೆರವೇರಿಸಿದ್ದರು. 1915ರಲ್ಲಿ ಮುನ್ಸಿಫ್ ಕುಪ್ಪಸ್ವಾಮಿ ಅಯ್ಯರ್ ಅವರು ಪ್ರೌಢಶಾಲೆಯ ಹೊಸ ಕಟ್ಟಡವನ್ನು ಉದ್ಘಾಟಿಸಿದರು. ಅನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1,500 ದಾಟಿದ್ದು, 25 ಶಿಕ್ಷಕರು ಸೇವೆಯನ್ನು ಸಲ್ಲಿಸುತ್ತಿದ್ದರು.
Advertisement
1940ರಲ್ಲಿ ಅಧಿಕೃತ ಮನ್ನಣೆಮೊದಲ ಮಹಾಯುದ್ಧದ ಪರಿಣಾಮ ಕ್ರಿಶ್ಚಿಯನ್ ಪ್ರೌಢಶಾಲೆಯ ಮೇಲೆ ಬೀರಿತ್ತು. ಜರ್ಮನ್ ಮಿಷನರಿಗಳಿಂದ ಶಾಲೆಯ ಜವಾಬ್ದಾರಿ 1919ರಲ್ಲಿ ಕೆನರೀಸ್ ಇವಾಂಜೆಲಿಕಲ್ ಮಿಷನ್ ಸಂಸ್ಥೆ ವಹಿಸಿಕೊಂಡಿದೆ. 1940ರಲ್ಲಿ ಶಿಕ್ಷಣ ಇಲಾಖೆ ಅಧಿಕೃತ ಮನ್ನಣೆ ಗಳಿಸಿ “ದಿ ಮಲಬಾರ್ ಆ್ಯಂಡ್ ಸೌತ್ ಕೆನರಾ ಎಜುಕೇಶನ್ ಸೊಸೈಟಿ’ಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ಗುಣಮಟ್ಟದ ಶಿಕ್ಷಣಕ್ಕೆ ಹೆಸರು
ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ಪ್ರಸ್ತುತ ಸುಮಾರು 800 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಸರಕಾರದ 7 ಮಂದಿ ಶಿಕ್ಷಕರು ಹಾಗೂ ಆಡಳಿತ ಮಂಡಳಿಯಿಂದ ನೇಮಕಗೊಂಡ 2 ಮಂದಿ ಶಿಕ್ಷಕರು ಇದ್ದಾರೆ. ಬಾಹ್ಯಾಕಾಶ ವಿಜ್ಞಾನಿ ಯು.ಆರ್. ರಾವ್, ಮಣಿಪಾಲ ಸಂಸ್ಥೆಗಳ ಸ್ಥಾಪಕ ಟಿಎಂಎ ಪೈ, ನಾಗಾಲ್ಯಾಂಡ್ ಗವರ್ನರ್ ಪಿ.ಬಿ. ಆಚಾರ್ಯ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯಲ್ಲಿ 121 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹಳೆವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ಸಾಕಷ್ಟು ಅಭಿವೃದ್ದಿಗೊಂಡಿದೆ. ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
-ಹೆಲೆನ್ ವಿಕ್ಟೋರಿಯಾ ಸಾಲಿನ್ಸ್,
ಮುಖ್ಯೋಪಾಧ್ಯಾಯಿನಿ. ಕವಿ ಮುದ್ದಣರು ಅಧ್ಯಾಪಕರಾಗಿದ್ದ ಶತಮಾನ ಕಂಡಿರುವ ಶಾಲೆ ಗುಣಮಟ್ಟ ಕಾಯ್ದುಕೊಂಡು ಬಂದಿದೆ. ಇಲ್ಲಿನ ಶಿಕ್ಷಣ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಶಾಲೆಯ ಶಿಕ್ಷಕ ವರ್ಗದ ಅನುಕರಣೆಯ ಸೇವೆ ಸುತ್ಯರ್ಹ.
-ರಾಘವೇಂದ್ರ ಪ್ರಭು ಕರ್ವಾಲು , ಹಳೆ ವಿದ್ಯಾರ್ಥಿ. - ತೃಪ್ತಿ ಕುಮ್ರಗೋಡು