Advertisement

ಪಿಎಸ್‌ಎಲ್‌ ಬಿಟ್ಟು ತವರಿಗೆ ಹಾರಿದ ಕ್ರಿಸ್‌ ಲಿನ್‌

10:08 AM Mar 18, 2020 | Team Udayavani |

ಲಾಹೋರ್‌: ರವಿವಾರ ವಷ್ಟೇ ಪಾಕಿಸ್ಥಾನ್‌ ಸೂಪರ್‌ ಲೀಗ್‌ ಟಿ20 ಪಂದ್ಯದಲ್ಲಿ ಮುಲ್ತಾನ್‌ ಸುಲ್ತಾನ್‌ ವಿರುದ್ಧ ಶತಕ ಬಾರಿಸಿ ಮೆರೆದಿದ್ದ ಲಾಹೋರ್‌ ಖಲಂದರ್ ತಂಡದ ಆರಂಭಕಾರ ಕ್ರಿಸ್‌ ಲಿನ್‌ ಸೋಮವಾರ ಕೊರೊನಾ ಭೀತಿಯಿಂದ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ. “ಕ್ರಿಕೆಟಿಗಿಂತ ಬದುಕು ಮಿಗಿಲಾದುದು’ ಎಂಬುದಾಗಿ ಲಿನ್‌ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ.

Advertisement

ಇದೇ ವೇಳೆ ದಕ್ಷಿಣ ಆಫ್ರಿಕಾದ ಡೇವಿಡ್‌ ವೀಸ್‌ ಮತ್ತು ಶ್ರೀಲಂಕಾದ ಲೆಗ್‌ಸ್ಪಿನ್ನರ್‌ ಸಿಕ್ಕುಗೆ ಪ್ರಸನ್ನ ಕೂಡ ಪಿಎಸ್‌ಎಲ್‌ ಬಿಟ್ಟು ತವರಿಗೆ ಮರಳಿದ್ದಾರೆ.

ಕ್ರಿಕೆಟಿಗಿಂತ ಬದುಕು ಮುಖ್ಯ
“ಇಲ್ಲಿಯ ತನಕ ಪಿಎಸ್‌ಎಲ್‌ ಪಂದ್ಯಾವಳಿಯನ್ನು ನಾನು ಆನಂದಿ ಸುತ್ತಲೇ ಬಂದಿದ್ದೇನೆ. ದುರದೃಷ್ಟ ವಶಾತ್‌ ನಾನೀಗ ಕೂಟದ ನಡುವಲ್ಲೇ ತವರಿಗೆ ವಾಪಸಾಗಬೇಕಿದೆ. ಕ್ರಿಕೆಟಿಗಿಂತ ಬದುಕು ಮಿಗಿಲಾದುದು ಎಂದು ನಾನು ಯಾವತ್ತೂ ಹೇಳುತ್ತಿರುತ್ತೇನೆ. ಇಂದು ಕೂಡ ಇದೇ ಮಾತನ್ನು ಹೇಳಬಯಸುತ್ತೇನೆ. ಲಾಹೋರ್‌ ಖಲಂದರ್ ತಂಡದ ಮೇಲೆ ನನಗೆ ವಿಶ್ವಾಸವಿದೆ. ಎಲ್ಲರಿಗೂ ನನ್ನ ಕೃತಜ್ಞತೆ ಗಳು’ ಎಂದು ಕ್ರಿಸ್‌ ಲಿನ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದಿದ್ದಾರೆ.

ಕೊರೊನಾ ಹಾವಳಿ ತೀವ್ರಗೊಂಡ ಬಳಿಕ ಪಾಕಿಸ್ಥಾನ್‌ ಸೂಪರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಡುತ್ತಿದ್ದ ಬಹಳಷ್ಟು ವಿದೇಶಿ ಕ್ರಿಕೆಟಿಗರು ತವರಿಗೆ ಮರಳಿದ್ದಾರೆ. ಇಂಗ್ಲೆಂಡಿನ ಅಲೆಕ್ಸ್‌ ಹೇಲ್ಸ್‌, ಜಾಸನ್‌ ರಾಯ್‌, ಟೈಮಲ್‌ ಮಿಲ್ಸ್‌, ಲಿಯಮ್‌ ಡಾಸನ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಲೂಯಿಸ್‌ ಗ್ರೆಗರಿ, ಜೇಮ್ಸ್‌ ವಿನ್ಸ್‌, ವೆಸ್ಟ್‌ ಇಂಡೀಸಿನ ಕಾರ್ಲೋಸ್‌ ಬ್ರಾತ್‌ವೇಟ್‌, ದಕ್ಷಿಣ ಆಫ್ರಿಕಾ ರಿಲೀ ರೋಸ್ಯೂ, ಕೋಚ್‌ ಜೇಮ್ಸ್‌ ಫಾಸ್ಟರ್‌ ಇವರಲ್ಲಿ ಪ್ರಮುಖರು. ಇದೀಗ ಕ್ರೀಸ್‌ ಲಿನ್‌ ಸರದಿ.

ಮೊದಲ ಸೆಮಿಫೈನಲ್‌
ರವಿವಾರ ಮುಲ್ತಾನ್‌ ಸುಲ್ತಾನ್‌ ವಿರುದ್ಧ ಆಡಿದ್ದೇ ಕ್ರಿಸ್‌ ಲಿನ್‌ ಅವರ ಕೊನೆಯ ಪಿಎಸ್‌ಎಲ್‌ ಪಂದ್ಯವೆನಿಸಿತು. ಇದರಲ್ಲಿ ಅವರು 52 ಎಸೆತಗಳಲ್ಲಿ ಶತಕ ಬಾರಿಸಿದದ್ದರು. 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಲಾಹೋರ್‌ ಖಲಂದರ್ ಮೊದಲ ಸಲ ಸೆಮಿಫೈನಲ್‌ ಪ್ರವೇಶಿಸಿತ್ತು.

Advertisement

ಆಸ್ಟ್ರೇಲಿಯ ಸರಕಾರದ ನಿಯಮದಂತೆ, ತವರಿಗೆ ಬಂದಿಳಿದ ಬಳಿಕ ಕ್ರಿಸ್‌ ಲಿನ್‌ 14 ದಿನಗಳ ವೈದ್ಯಕೀಯ ನಿಗಾದಲ್ಲಿ ಇರಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next