Advertisement

ನಾನಿನ್ನೂ ನಿವೃತ್ತಿಯಾಗಿಲ್ಲ: ಮತ್ತೆ ಯು ಟರ್ನ್ ಹೊಡೆದ ಕ್ರಿಸ್‌ ಗೇಲ್‌

09:35 AM Aug 16, 2019 | keerthan |

ಪೋರ್ಟ್‌ ಆಫ್‌ ಸ್ಪೇನ್:‌ ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ ನಿವೃತ್ತಿ ವಿಷಯದಲ್ಲಿ ಮತ್ತೆ ಉಲ್ಟಾ ಹೊಡೆದಿದ್ದಾರೆ. ಭಾರತ ವಿರುದ್ಧದ ಸರಣಿ ನಂತರ ನಿವೃತ್ತಿಯಾಗುತ್ತೇನೆ ಎಂದಿದ್ದ ಗೇಲ್‌, ನಿನ್ನೆಯ ಪಂದ್ಯದ ನಂತರ ನಾನಿನ್ನೂ ನಿವೃತ್ತಿಯಾಗಿಲ್ಲ ಎಂದಿದ್ದಾರೆ.

Advertisement

ಪಂದ್ಯದ ನಂತರ ಮಾತನಾಡಿದ ಗೇಲ್‌  “ನಾನಿನ್ನು ಏನೂ ಹೇಳಿಲ್ಲ. ಮುಂದಿನ ಪ್ರಕಟಣೆಯವರೆಗೆ ನಾನು ಏಕದಿನದಲ್ಲಿ ಮುಂದುವರಿಯುತ್ತೇನೆ” ಎಂದಿದ್ದಾರೆ.

ಗೇಲ್‌ ಹೀಗೆ ನಿವೃತ್ತಿ ಮುಂದೂಡುವುದು ಇದೇ ಮೊದಲಲ್ಲ. ವಿಶ್ವಕಪ್‌ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ದೂರವಾಗುತ್ತೇನೆ ಎಂದಿದ್ದ ಯುನಿವರ್ಸಲ್‌ ಬಾಸ್‌ ಮತ್ತೆ ಮನಸ್ಸು ಬದಲಾಯಿಸಿ ಭಾರತ ವಿರುದ್ದದ ಸರಣಿಯ ನಂತರ ವಿದಾಯ ಹೇಳುತ್ತೇನೆ ಎಂದಿದ್ದರು. ಆದರೆ ಈಗ ಮತ್ತೆ ಮಾತು ಬದಲಾಯಿಸಿರುವ ಗೇಲ್‌ ಇನ್ನು ಯಾವಾಗ ವಿದಾಯ ಹೇಳುತ್ತಾರೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

ವಿದಾಯ ಪಂದ್ಯದಂತೆಯೇ ಇತ್ತು!
ಬುಧವಾರ ಭಾರತ ವಿರುದ್ಧದ ಸರಣಿಯ ಅಂತಿಮ ಏಕದಿನ ಪಂದ್ಯ ಕ್ರಿಸ್‌ ಗೇಲ್‌ ರ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಎಂದೇ ಬಿಂಬಿಸಲಾಗಿತ್ತು. ಸಾಮಾನ್ಯವಾಗಿ ಏಕದಿನದಲ್ಲಿ 45 ಜೆರ್ಸಿ ನಂಬರ್‌ ನಲ್ಲಿ ಆಡುವ ಗೇಲ್‌, ನಿನ್ನೆ 301 ನೇ ಪಂದ್ಯ ಆಡಲಿಳಿದಿದ್ದ ಕಾರಣ ತಮ್ಮ ಜೆರ್ಸಿಯ ನಂಬರ್‌ ಅನ್ನು 301 ಎಂದು ಬದಲಾಯಿಸಿದ್ದರು.  ಉತ್ತಮವಾಗಿ ಆಡಿದ್ದ ಗೇಲ್‌ 72 ರನ್‌ ಗಳಿಸಿ ಔಟಾದಾಗ ತಮ್ಮ ಬ್ಯಾಟ್‌ ಗೆ ಹೆಲ್ಮೆಟ್‌ ಸಿಕ್ಕಿಸಿ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದ್ದರು. ಡಗೌಟ್‌ ನಲ್ಲಿ ಕುಳಿತಿದ್ದ ವಿಂಡೀಸ್‌ ಆಟಗಾರರು ಕೂಡಾ ದಿಗ್ಗಜನಿಗೆ ಗೌರವ ಸಲ್ಲಿಸಿದ್ದರು. ಮೈದಾನದಲ್ಲಿದ್ದ ಭಾರತೀಯರು ಕೂಡಾ ಗೇಲ್‌ ಗೆ ಗೌರವ ಸೂಚಿಸಿದ್ದರು. ಈ ಎಲ್ಲಾ ಬೆಳವಣಿಗೆಗಳು ಇದು ಗೇಲ್‌ ಅಂತಿಮ ಪಂದ್ಯದಂತೆಯೇ ಇತ್ತು.

ಗೇಲ್‌ 72 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರೂ ವಿಂಡೀಸ್‌ ಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಸೋಲಿನೊಂದಿಗೆ ಸುದೀರ್ಘ ಅಂತಾರಾಷ್ಟ್ರೀಯ ಜೀವನ ಕೊನೆ ಮಾಡಲು ಇಷ್ಟಪಡದೇ ಗೇಲ್‌ ತಮ್ಮ ನಿವೃತ್ತಿಯನ್ನು ಮುಂದೂಡಿದ್ದಾರೆ ಎಂಬ ಮಾತುಗಳು ಕೂಡಾ ಈಗ ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next