Advertisement

ರಾಹುಲ್‌ಗೆ ಸಂಕಷ್ಟ ತಂದ ಚೌಕಿದಾರ್‌

11:52 PM Apr 15, 2019 | mahesh |

ಹೊಸದಿಲ್ಲಿ: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ತಮ್ಮ ವೈಯಕ್ತಿಕ ರಾಜಕೀಯ ಟೀಕೆಗೆ ಬಳಸಿಕೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಬಿಸಿ ಮುಟ್ಟಿಸಿದೆ. ನಾವು ಹೇಳಿಯೇ ಇಲ್ಲದ ವಿಚಾರವನ್ನು ನಾವೇ ಹೇಳಿದ್ದು ಎಂದು ಹೇಳುತ್ತಾ ಹೋಗಿರುವ ರಾಹುಲ್‌ ಗಾಂಧಿಗೆ ನೋಟಿಸ್‌ ಜಾರಿ ಮಾಡಿರುವ ಸುಪ್ರೀಂ ಕೋರ್ಟ್‌, ಏ.22ರೊಳಗೆ ಈ ಕುರಿತು ವಿವರಣೆ ನೀಡುವಂತೆ ನಿರ್ದೇಶಿಸಿದೆ.

Advertisement

ರಾಹುಲ್‌ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದಿದ್ದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ, ರಾಹುಲ್‌ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ರಾಹುಲ್‌ಗೆ ನೋಟಿಸ್‌ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಏ.23ಕ್ಕೆ ನಿಗದಿ ಮಾಡಿದೆ.

ಏನಿದು ಪ್ರಕರಣ?: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆರಂಭದಲ್ಲಿ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿತ್ತು. ಆದರೆ, ಏ.9ರಂದು ಅರ್ಜಿದಾರರು ಪ್ರಸ್ತಾಪಿಸಿದ ಹೊಸ ದಾಖಲೆಗಳ ಆಧಾರದಲ್ಲಿ, ತಾನು ಹಿಂದೆ ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವುದಾಗಿ ಕೋರ್ಟ್‌ ಹೇಳಿತ್ತು. ಇದರಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿತ್ತು. ಸುಪ್ರೀಂ ಕೋರ್ಟ್‌ನ ಹೊಸ ಆದೇಶವನ್ನು ತಮಗೆ ಸಂದ ಗೆಲುವು ಎಂಬಂತೆ ಬಿಂಬಿಸಿದ್ದ ರಾಹುಲ್‌ ಗಾಂಧಿ, “ಸುಪ್ರೀಂ ಕೋರ್ಟ್‌ ಕೂಡ ಈಗ ಚೌಕಿದಾರ ಕಳ್ಳ ಎಂಬುದಾಗಿ ಹೇಳಿದೆ. ವಾಯುಪಡೆಯ ಹಣವನ್ನು ಮೋದಿಯವರು ಅನಿಲ್‌ ಅಂಬಾನಿಗೆ ಕೊಟ್ಟಿದ್ದಾರೆ ಎಂದು ನಾನು ಹಲವು ತಿಂಗಳಿಂದ ಹೇಳುತ್ತಾ ಬಂದಿದ್ದೇನೆ. ಈಗ ನಮ್ಮ ವಾದವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ’ ಎಂದಿದ್ದರು. ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಎಲ್ಲೂ “ಚೌಕಿದಾರ ಚೋರ್‌ ಹೈ’ ಎಂಬ ಪದ ಬಳಕೆ ಮಾಡಿರಲಿಲ್ಲ. ಹೀಗಿದ್ದರೂ, ರಾಹುಲ್‌ ಈ ರೀತಿ ಹೇಳಿ ಜನರ ಹಾದಿ ತಪ್ಪಿಸಿದ್ದಾರೆ ಹಾಗೂ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ನ್ಯಾಯಾಲಯದ ಆದೇಶವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಮೀನಾಕ್ಷಿ ಲೇಖೀ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಕೋರ್ಟ್‌ ಹೇಳಿದ್ದೇನು?: ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ, “ಅರ್ಜಿದಾರರು ಹೇಳಿದಂತೆ ನಾವು ಎಲ್ಲೂ ಅಂಥ ಪದ ಬಳಕೆ ಮಾಡಿಲ್ಲ. ಅಟಾರ್ನಿ ಜನರಲ್‌ ಆಕ್ಷೇಪಿಸಿದ್ದ ಕೆಲವು ದಾಖಲೆಗಳನ್ನು ನಾವು ವಿಚಾರಣೆಗೆ ಸ್ವೀಕರಿಸುವುದಾಗಿ ಹೇಳಿದ್ದೆವು ಅಷ್ಟೆ. ಹೀಗಾಗಿ, ಈ ಬಗ್ಗೆ ಸ್ಪಷ್ಟೀಕರಣ ಕೇಳುತ್ತೇವೆ’ ಎಂದು ಹೇಳಿ, ರಾಹುಲ್‌ಗೆ ನೋಟಿಸ್‌ ಜಾರಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌, ನ್ಯಾಯಾಲಯಕ್ಕೆ ನಾವು ಸ್ಪಷ್ಟೀಕರಣ ನೀಡುತ್ತೇವೆ ಎಂದಷ್ಟೇ ಹೇಳಿದೆ.

ಕೈ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ರಾಹುಲ್‌ಗೆ ನೋಟಿಸ್‌ ಜಾರಿಯಾಗುತ್ತಲೇ ಮೀನಾಕ್ಷಿ ಲೇಖೀ, ಅಮಿತ್‌ ಶಾ, ಅರುಣ್‌ ಜೇಟ್ಲಿ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದಿದ್ದಾರೆ. ರಾಹುಲ್‌ ಅವರ ಸುಳ್ಳನ್ನು ಈಗ ಸುಪ್ರೀಂ ಕೋರ್ಟ್‌ ಬಯಲಿಗೆಳೆದಿದೆ ಎಂದು ಬಿಜೆಪಿ ಹೇಳಿದೆ. “ರಾಹುಲ್‌ ಗಾಂಧಿ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ನ್ಯಾಯಾಲಯದ ಆದೇಶವನ್ನೇ “ಉತ್ಪತ್ತಿ’ ಮಾಡುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಸುಳ್ಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯವಲ್ಲ’ ಎಂದು ಕೇಂದ್ರ ಸಚಿವ ಜೇಟ್ಲಿ ಹೇಳಿದ್ದಾರೆ. ತಮ್ಮ ಕೊಳಕು ರಾಜಕೀಯದಲ್ಲಿ ರಾಹುಲ್‌ ನ್ಯಾಯಾಲಯವನ್ನು ಎಳೆದುತಂದಿದ್ದಾರೆ ಎಂದು ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಕಿಡಿಕಾರಿದ್ದಾರೆ.

Advertisement

ತುಲಾ ಭಾರದ ತಕ್ಕಡಿಯಿಂದ ಬಿದ್ದ ಶಶಿ ತರೂರ್‌; ತಲೆಗೆ 6 ಹೊಲಿಗೆ
ಕೇರಳದ ದೇವಾಲಯವೊಂದ ರಲ್ಲಿ ತುಲಾಭಾರ ನಡೆಸುವ ವೇಳೆ ತಕ್ಕಡಿ ಮುರಿದು ಬಿದ್ದ ಕಾರಣ, ಕಾಂಗ್ರೆಸ್‌ ನಾಯಕ, ತಿರುವನಂತ ಪುರಂ ಕ್ಷೇತ್ರದ ಅಭ್ಯರ್ಥಿ ಶಶಿ ತರೂರ್‌ ಕೆಳಕ್ಕೆ ಬಿದ್ದು, ಅವರ ತಲೆಗೆ ಗಾಯವಾಗಿರುವ ಘಟನೆ ನಡೆದಿದೆ. ವಿಶು ಹಬ್ಬದ ದಿನವಾದ ಸೋಮವಾರ ತರೂರ್‌ ಅವರು ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ದೇಗುಲವೊಂದರಲ್ಲಿ ತುಲಾಭಾರ ಕೈಗೊಂಡರು. ತಮ್ಮಷ್ಟೇ ತೂಕದ ಸಕ್ಕರೆಯನ್ನು ದೇವಸ್ಥಾನಕ್ಕೆ ಅರ್ಪಿಸಲು ಮುಂದಾದರು. ಆದರೆ ಅವರು ತಕ್ಕಡಿಯಲ್ಲಿ ಕುಳಿತುಕೊಂಡಿದ್ದಾಗ, ತಕ್ಕಡಿ ಏಕಾಏಕಿ ಮುರಿದು ಬಿತ್ತು. ಹೀಗಾಗಿ ತರೂರ್‌ ಕೆಳಕ್ಕೆ ಬಿದ್ದಿದ್ದು, ಅವರ ತಲೆಗೆ ಪೆಟ್ಟಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ 6 ಹೊಲಿಗೆಗಳನ್ನು ಹಾಕಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಅಜಂ ಖಾನ್‌ ವಿರುದ್ಧ ಎಫ್ಐಆರ್‌
ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಕೀಳು ಮಟ್ಟದ ಪದಪ್ರಯೋಗ ಮಾಡಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ವಿರುದ್ಧ ಲಕ್ನೋದಲ್ಲಿ ಎಫ್ಐಆರ್‌ ದಾಖಲಾಗಿದೆ. ಅವರ ಹೇಳಿಕೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಕರಣ ದಾಖಲು ಮಾಡಲಾಗಿದೆ. ಮತ್ತೂಂದೆಡೆ, ರಾಷ್ಟ್ರೀಯ ಮಹಿಳಾ ಆಯೋಗವೂ ಖಾನ್‌ಗೆ ನೋಟಿಸ್‌ ಜಾರಿ ಮಾಡಿದೆ. ಚುನಾ ವಣಾ ಆಯೋ ಗವೂ ಖಾನ್‌ ಹೇಳಿಕೆ ಕುರಿತು ಪರಿ ಶೀ ಲನೆ ಆರಂಭಿ ಸಿದೆ. ಈ ಮಧ್ಯೆ, ವಿವಾದದ ಕುರಿತು ಪ್ರತಿಕ್ರಿಯಿಸಿರುವ ಅಜಂ ಖಾನ್‌, ನಾನು ನನ್ನ ಹೇಳಿಕೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ ಎಂದಿದ್ದಾರೆ.

ಖಾನ್‌ ಹೇಳಿಕೆಗೆ ವ್ಯಾಪಕ ಆಕ್ರೋಶ
ಈ ಬಾರಿ ಅಜಂ ಖಾನ್‌ ಲಕ್ಷ್ಮಣ ರೇಖೆ ದಾಟಿದ್ದಾರೆ. ನಾನು ಅವರನ್ನು ಅಣ್ಣನಂತೆ ಕಾಣುತ್ತಿದ್ದೆ. ಇನ್ನು ನಾನಿದನ್ನು ಸಹಿಸುವುದಿಲ್ಲ. ಇಂಥವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆಯೇ?
ಜಯಪ್ರದಾ, ಬಿಜೆಪಿ ಅಭ್ಯರ್ಥಿ

ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ವೇಳೆ ಭೀಷ್ಮ ಮೌನಕ್ಕೆ ಶರಣಾಗಿದ್ದರು. ಈಗ ರಾಂಪುರದಲ್ಲಿ ದ್ರೌಪದಿ ವಸ್ತ್ರಾಪಹರಣ ಆಗುತ್ತಿದೆ. ಮುಲಾಯಂ ಸಿಂಗ್‌ ಅವರೇ ನೀವು ಮೌನ ವಹಿಸದಿರಿ.
ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ

“ಒಳಉಡುಪು’ ಕುರಿತು ಅಜಂ ಖಾನ್‌ ಮಾತನಾಡಿದ್ದರೂ, ಕಾಂಗ್ರೆಸ್‌, ಅದರ ಮಿತ್ರಪಕ್ಷಗಳು ಯಾವುದೇ ಹೇಳಿಕೆ ನೀಡುತ್ತಿಲ್ಲವೇಕೆ? ಯುಪಿಎಯಲ್ಲಿರುವ ವರು ಸ್ತ್ರೀಯರನ್ನು ಎಷ್ಟು ಗೌರವಿಸುತ್ತಾರೆ ಎಂಬುದು ಇದರಿಂದ ತಿಳಿಯುತ್ತದೆ.
ಸ್ಮತಿ ಇರಾನಿ, ಕೇಂದ್ರ ಸಚಿವೆ

100 ದಿನಗಳ ಅಜೆಂಡಾಕ್ಕೆ ಪ್ರಧಾನಿ ಮೋದಿ ಸೂಚನೆ
ಪ್ರಸಕ್ತ ಲೋಕಸಭಾ ಚುನಾವಣೆ ಫ‌ಲಿತಾಂಶ ಬರೋದು ಮೇ 23ಕ್ಕೆ. ಅದಾದ ನಂತರವೇ ಸರ್ಕಾರ ರಚನೆ ಕಸರತ್ತು. ಯಾರು ಅಧಿಕಾರಕ್ಕೆ ಬರುತ್ತಾರೋ ಏನೋ ಗೊತ್ತಿಲ್ಲ. ಆದರೆ, ತಾವು ಮತ್ತೆ ಪ್ರಧಾನಿಯಾಗುವುದಂತೂ ಖರೆ ಎಂಬ ಉತ್ಸಾಹದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಕಾರ್ಯಾಲಯ (ಪಿಎಂಒ), ನೀತಿ ಆಯೋಗ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರಾದ ಕೆ. ವಿಜಯ ರಾಘವನ್‌ ಅವರಿಗೆ ಮುಂದಿನ ಸರ್ಕಾರ ರಚನೆಯಾದ ದಿನದಿಂದ ಮೊದಲ 100 ದಿನಗಳವರೆಗೆ ಕೈಗೊಳ್ಳಬಹುದಾದ ಕಾರ್ಯಯೋಜನೆಗಳ ಬಗ್ಗೆ ಒಂದು ಕಾರ್ಯತಂತ್ರ ರೂಪಿಸು ವಂತೆ ಸೂಚಿಸಿದ್ದಾರೆ. ದೇಶದ ಜಿಡಿಪಿಯನ್ನೂ ಎರಡಂಕಿಗಳಿಗೆ ವೃದ್ಧಿಸಲು ಸಹಾಯವಾಗಬಹುದಾದ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. “ತೈಲ ಮತ್ತು ನೈಸರ್ಗಿಕ ಅನಿಲ, ಮಿನರಲ್ಸ್‌, ಮೂಲಸೌಕರ್ಯ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಸ್ವತಂತ್ರ ನೀಡಲು ಮೋದಿ ಚಿಂತನೆ ನಡೆಸಿದ್ದು 2047ರ ಹೊತ್ತಿಗೆ ನಿರ್ಮಾಣವಾಗಲಿರುವ ಭವ್ಯಭಾರತಕ್ಕೆ ಮುಂದಿನ ಸರ್ಕಾರದ 100 ದಿನಗಳಲ್ಲೇ ಅಡಿಪಾಯ ಹಾಕುವುದು ಮೋದಿಯವರ ಉದ್ದೇಶ’ ಎಂದು ಪ್ರಧಾನಿ ಕಚೇರಿಯ ಕೆಲವು ಅಧಿಕಾರಿಗಳು ತಿಳಿಸಿದ್ದಾರೆಂದು “ಹಿಂದೂಸ್ತಾನ್‌ ಟೈಮ್ಸ್‌’ ಹೇಳಿದೆ.

ಯೂಟ್ಯೂಬ್‌ ವಿಡಿಯೋ ಮೂಲದ ಮಾಹಿತಿ
ಲೋಕಸಭೆ ಚುನಾವಣೆ ಸಮಯದಲ್ಲಿ ಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಗೂಗಲ್‌ ಕೈಗೊಂಡಿದ್ದು, ಇನ್ನು ಸುದ್ದಿಗೆ ಸಂಬಂಧಿಸಿದ ವಿಡಿಯೋಗಳಿಗೆ ಪ್ರತ್ಯೇಕ ಮಾಹಿತಿ ಪ್ಯಾನೆಲ್‌ ಅನ್ನೂ ಒದಗಿಸಲಿದೆ. ಇದರಲ್ಲಿ ಈ ಸುದ್ದಿ ವಿಡಿಯೋವನ್ನು ಪ್ರಕಟಿಸಿದವರಿಗೆ ಸರ್ಕಾರ ಹಣ ನೀಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಈ ಮಾಹಿತಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿರಲಿದೆ ಎಂದು ಯೂಟ್ಯೂಬ್‌ನ ಸುದ್ದಿ ಪಾಲುದಾರಿಕೆ ವಿಭಾಗದ ಮುಖ್ಯಸ್ಥ ಟಿಮ್‌ ಕಾಟ್ಜ್ ಹೇಳಿದ್ದಾರೆ. ಮಾಹಿತಿಯಲ್ಲಿ ಅವರಿಗೆ ಸಂಬಂಧಿಸಿದ ವಿಕಿಪೀಡಿಯಾ ಪುಟದ ಲಿಂಕ್‌ ನೀಡಲಾಗುತ್ತದೆ. ಇದರಿಂದ ವೀಡಿಯೋ ವೀಕ್ಷಿಸುವವರಿಗೆ ತಾವು ವೀಕ್ಷಿಸುತ್ತಿರುವ ವಿಡಿಯೋ ಯಾವ ಮೂಲದ್ದು ಎಂಬ ಸ್ಪಷ್ಟ ವಿವರಣೆ ಸಿಗಲಿದೆ.

ಪಿಎಂ ಮೋದಿ ಪ್ರಚಾರಕ್ಕೆ ಹಣ ಎಲ್ಲಿಂದ?
ಟಿವಿಯಲ್ಲಿ ಪ್ರಸಾರವಾಗುವ 30 ಸೆಕೆಂಡುಗಳ ಜಾಹೀರಾತಿಗೂ ಲಕ್ಷಗಟ್ಟಲೆ ಹಣ ಕೊಡ ಬೇಕು. ಹೀಗಿರುವಾಗ ಎಲ್ಲಿ ನೋಡಿದರೂ ಪ್ರಧಾನಿ ಮೋದಿ ಅವರ ಜಾಹೀರಾತು ಕಾಣಿಸು ತ್ತಿದೆ. ಇದನ್ನೇನೂ ಅವರು ತಮ್ಮ ಜೇಬಿನಿಂದ ಕೊಡು ತ್ತಿಲ್ಲ. ಇಷ್ಟೊಂದು ಹಣ ವೆಚ್ಚ ಮಾಡುತ್ತಿರುವ ಮೋದಿಯವರಿಗೆ ನಿಜವಾಗಲೂ ಫ‌ಂಡ್‌ ನೀಡುತ್ತಿರುವವರು ಯಾರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಫ‌ತೇಪುರ ಸಿಕ್ರಿಯೆಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಬಬ್ಬರ್‌ ಪರ ಪ್ರಚಾರ ನಡೆಸಿದ ಅವರು ಈ ಪ್ರಶ್ನೆಗಳನ್ನು ಹಾಕಿದ್ದಾರೆ.

ಇದಾದ ಬಳಿಕ ಗುಜರಾತ್‌ನ ಮಹುವಾದಲ್ಲಿ ರ್ಯಾಲಿ ನಡೆಸಿದ ರಾಹುಲ್‌, ಪ್ರಧಾನಿ ಮೋದಿ ಅವರು ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರಫೇಲ್‌ ಒಪ್ಪಂದದ ನಿಯಮಗಳನ್ನೇ ಬದಲಾಯಿಸಿ ದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ನೀರವ್‌ ಮೋದಿ, ಮಲ್ಯ, ಮೆಹುಲ್‌ ಚೋಕ್ಸಿ ಯಂಥ ಕಳ್ಳರ ಕಿಸೆಯಿಂದ ಹಣ ತಂದು ತಮ್ಮ ನ್ಯಾಯ್‌ ಯೋಜನೆಗೆ ಬಳಸುತ್ತೇವೆ. ಅನಿಲ್‌ ಅಂಬಾನಿಗೆ 30 ಸಾವಿರ ಕೋಟಿ ರೂ.ಗಳನ್ನು ನೀಡಲು ಮೋದಿ ಅವರಿಗೆ ಸಾಧ್ಯವಿದೆ ಎಂದಾದರೆ, ಕಡುಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಕೊಡಲು ನಮ್ಮಿಂದ ಸಾಧ್ಯ ವಿಲ್ಲವೇ ಎಂದೂ ರಾಹುಲ್‌ ಪ್ರಶ್ನಿಸಿದ್ದಾರೆ.

ಪಾಕ್‌ ಬಗ್ಗೆ ಮಾತೇಕೆ?
ಪ್ರಧಾನಿ ಮೋದಿಯವರು ಭಾರತದ ಬಗ್ಗೆ, ಇಲ್ಲಿನ ಯುವಜನತೆಗೆ ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ಯಾವಾಗ ನೋಡಿ ದರೂ ಪಾಕಿಸ್ಥಾನದ ಬಗ್ಗೆಯೇ ಮಾತನಾಡುತ್ತಿರು ವುದೇಕೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪ್ರಶ್ನಿಸಿದ್ದಾರೆ. ಉ.ಪ್ರದೇಶದ ಆಗ್ರಾದಲ್ಲಿ ಮಾತನಾಡಿದ ಅವರು, ಭಾರತವು ಸತ್ಯದ ಆಧಾರದಲ್ಲಿ ನಿಂತಿರುವಂಥದ್ದು. ಯಾರು ಆ ಸತ್ಯದಿಂದ ದೂರ ಸರಿಯುತ್ತಾರೋ ಅವರನ್ನು ದೇಶ ಸುಮ್ಮನೆ ಬಿಡುವುದಿಲ್ಲ. ಬಿಜೆಪಿಯಂತೂ ಬಹಳ ಹಿಂದೆಯೇ ಸತ್ಯದ ಹಾದಿ ಬಿಟ್ಟು ದೂರ ಸಾಗಿದೆ. ಪ್ರಚಾರದ ಅಬ್ಬರದಲ್ಲಿ ಸತ್ಯವನ್ನು ಹೂಳಲಾಗುತ್ತಿದೆ ಎಂದಿದ್ದಾರೆ.

ನಕಲಿ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಜೋಷಿ ಆಗ್ರಹ
ಬಿಜೆಪಿ ಹಿರಿಯ ಮುಖಂಡ ಎಲ್‌ ಕೆ ಆಡ್ವಾಣಿಗೆ ತಾನು ಬರೆದಿದ್ದೇನೆ ಎನ್ನಲಾದ ನಕಲಿ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಆಗ್ರಹಿಸಿದ್ದಾರೆ. ನಾನು ಇಂತಹ ಯಾವ ಪತ್ರವನ್ನೂ ಬರೆದಿಲ್ಲ. ಈ ನಕಲಿ ಪತ್ರವನ್ನು ನಾನು ಓದಿದ್ದೇನೆ. ಈ ಪತ್ರ ಯಾವ ಮೂಲದಿಂದ ಸಾಮಾಜಿಕ ಮಾಧ್ಯಮಕ್ಕೆ ಬಂತು ಎಂಬುದನ್ನು ಕಂಡುಹಿಡಿಯಿರಿ ಎಂದು ಆಯೋಗಕ್ಕೆ ಜೋಷಿ ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕನ ಹತ್ಯೆ
ಒಡಿಶಾದ ಖುರ್ದಾ ನಗರದಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದ ಘಟನೆ ಭಾನುವಾರ ರಾತ್ರಿ ನಡೆದಿದೆ. ಬಿಜೆಪಿಯ ಮಂಡಲ್‌ ಅಧ್ಯಕ್ಷ ಮಂಗುಲಿ ಜೇನಾ ಎಂಬವರೇ ಹತ್ಯೆಯಾದ ನಾಯಕ. ಇವರು ಖುರ್ದಾ ಅಭ್ಯರ್ಥಿಯ ಮನೆ ಹೊರಗೆ ನಿಂತಿ ದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.

ರವಿಕಿಶನ್‌ಗೆ ಬಿಜೆಪಿ ಟಿಕೆಟ್‌
ಉತ್ತರಪ್ರದೇಶದಲ್ಲಿ ಮತ್ತೆ 7 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಭೋಜ್‌ಪುರಿ ಖ್ಯಾತ ಸಿನಿಮಾ ನಟ ರವಿಕಿಶನ್‌ ಅವರಿಗೆ ಗೋರಖ್‌ಪುರ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಹಾಲಿ ಸಂಸದ ಸಂಜಯ್‌ ನಿಶಾದ್‌ ಅವರನ್ನು ಸಂತ ಕಬೀರ್‌ ನಗರದಲ್ಲಿ ಕಣಕ್ಕಿಳಿಸಲಾಗಿದೆ. ಕಳೆದ ವರ್ಷ ನಡೆದ ಗೋರಖ್‌ಪುರ ಉಪ ಚುನಾವಣೆಯಲ್ಲಿ ಎಸ್‌ಪಿ-ಬಿಎಸ್ಪಿ ಮಿತ್ರಪಕ್ಷಗಳ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ನಿಶಾದ್‌ ಗೆಲುವು ಸಾಧಿಸಿದ್ದರು. ಈ ಬಾರಿ ನಿಶಾದ್‌ ಅವರು ಮೈತ್ರಿಪಕ್ಷಗಳಿಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಮೋದಿ ಸಿನಿಮಾ ವೀಕ್ಷಿಸಿ ನಿರ್ಧರಿಸಿ
ಪ್ರಧಾನಿ ಮೋದಿ ಕುರಿತ ಸಿನಿಮಾ ನಿಷೇಧಿಸಿ ಹೊರಡಿಸಿದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಪೂರ್ಣ ಸಿನಿಮಾ ವೀಕ್ಷಿಸಿದ ನಂತರ ಈ ನಿರ್ಧಾರ ಕೈಗೊಳ್ಳಿ ಎಂದಿದೆ. ಏ.19 ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂ ತೆಯೂ ನಿರ್ದೇಶಿಸಲಾಗಿದೆ. ಈ ಸಂಬಂಧ ಏ.22 ರಂದು ವಿಚಾರಣೆ ನಡೆಯಲಿದೆ. ಸಿನಿಮಾಗೆ ತಡೆ ತಂದು ಆಯೋಗ ಹೊರಡಿಸಿದ ಆದೇಶದ ವಿರುದ್ಧ ನಿರ್ಮಾಪಕರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಕಾಂಗ್ರೆಸ್‌ ಮೊದಲು ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನ್ಯಾಯ್‌ ಯೋಜನೆಯನ್ನು ಅನುಷ್ಠಾನ ಮಾಡಲಿ. ಆ ರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾದರೆ, ಆಗ ಆ ಪಕ್ಷವನ್ನು ಜನ ನಂಬುತ್ತಾರೆ.
ಸುಧೀರ್‌,ಮಹಾರಾಷ್ಟ್ರದ ಸಚಿವ

ಭಾರತವು ಈಗ ಬಿಜೆಪಿ ನೇತೃತ್ವದ ಬಲಿಷ್ಠ ಸರ್ಕಾರವನ್ನು ಹೊಂದಿರುವ ಕಾರಣ, ಪಾಕಿಸ್ತಾನ ಹಾಗೂ ಚೀನಾ ದೇಶಗಳು ಯಾವ ಕಾರಣಕ್ಕೂ ಭಾರತದ ವಿರುದ್ಧ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ.
ಯೋಗಿ ಆದಿತ್ಯನಾಥ್‌, ಉ.ಪ್ರ. ಸಿಎಂ

ಪ್ರಧಾನಿ ಮೋದಿ ಹೇಳಿರುವಂತೆ ನನ್ನ ಕುಟುಂಬವೇನಾದರೂ ಭಾರತವನ್ನು ಒಡೆ ಯಲು ಬಯಸಿದ್ದರೆ, ಈಗ ಭಾರತವೇ ಇರುತ್ತಿರಲಿಲ್ಲ. ದೇಶ ಒಡೆಯಲು ಯತ್ನಿಸುತ್ತಿರುವುದು ಮೋದಿ. ಅವರು ಎಷ್ಟೇ ಪ್ರಯತ್ನಿಸಿದರೂ ಭಾರತವು ವಿಭಜನೆಯಾಗಲು ನಾವು ಬಿಡುವುದಿಲ್ಲ.
ಫಾರೂಕ್‌ ಅಬ್ದುಲ್ಲಾ, ಎನ್‌ಸಿ ಮುಖಂಡ

ಕಳ್ಳರಿಗೇ ಏಕೆ ಮೋದಿ ಎಂಬ ಉಪನಾಮ ಇರುತ್ತದೆ ಎಂದು ಕೇಳುವ ಮೂಲಕ ರಾಹುಲ್‌ಗಾಂಧಿ, ಸಮಾಜದ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದು, ಅವರಿಗೆ ಅವಮಾನ ಮಾಡಿದ್ದಾರೆ.
ಮದನ್‌ಲಾಲ್‌ ಸೈನಿ, ಬಿಜೆಪಿ ನಾಯಕ

ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಈಗ ಆರೆಸ್ಸೆಸ್‌ನ ಸಹಾಯವನ್ನು ಪಡೆಯುತ್ತಿದೆ. ಆ ಪಕ್ಷದ ಸಂಪೂರ್ಣ ಗೇಮ್‌ಪ್ಲಾನ್‌ ಬಯ ಲಾಗಿದೆ. ಈ ಕಾಂಗ್ರೆಸ್‌, ಬಿಜೆಪಿ ಮತ್ತು ಎಡ ಪಕ್ಷಗಳ ಡೆಡ್ಲಿ ಮೈತ್ರಿಯನ್ನು ಜನರು ಸೋಲಿಸ ಬೇಕು. ಇಂಥವರನ್ನು ಯಾರೂ ನಂಬಬಾರದು.
ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next