ಕಲಬುರಗಿ:ಪಾಲಿಕೆ ಆಧೀನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಶ್ರೀ ಅಂಬಿಗರ ಸೇವಾದಳ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮೇಯರ್, ಆಯುಕ್ತರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಸುಮಾರು 65 ಲಕ್ಷ ಜನರನ್ನು ಹೊಂದಿರುವ ಟೋಕರೆ ಕೋಲಿ, ಕಬ್ಬಲಿಗ, ಬೇಸ್ತ, ಮೊಗವೀರ, ಅಂಬಿಗ ಮುಂತಾದ 39 ಪರ್ಯಾಯ ಪದಗಳ ಸಮುದಾಯಗಳಿಗೆ ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾದರೂ ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಕ್ಕಿಲ್ಲ. ಸಮಾಜಕ್ಕೆ ತುಂಬಾ ಅನ್ಯಾಯವಾಗಿದೆ ಎಂದರು.
12 ನೇ ಶತಮಾನದ ವಚನಕಾರರಲ್ಲಿ ಪ್ರಸಿದ್ದರಾದ ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ನೇರ ನಡೆನುಡಿಯಿಂದ ನಿಷ್ಠುರ ವಚನಗಳಿಂದ ಮೂಢನಂಬಿಕೆ ಹಾಗು ಕಂದಾಚಾರಗಳಿಗೆ ಕಡಿವಾಣ ಹಾಕಿದ್ದರು. ಅಂತಹವರ ಪಾಲಿಕೆಯ ಸ್ವಾಧೀನದಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದರು.
ನಗರದ ಹೊರವಲಯದ ಹೈಕೋರ್ಟ್ ಪೀಠದ ಎದುರು ಈಗಾಗಲೇ ಒಂದು ವೃತ್ತ ನಿರ್ಮಿಸಲಾಗಿದೆ. ಅದಕ್ಕೆ ದಿ.ವಿಠಲ ಹೇರೂರ ಹೆಸರನ್ನು ಇಡಬೇಕು. ಇವೆಲ್ಲ ಬೇಡಿಕೆ ಈಡೇರದೇ ಇದ್ದರೆ ಜ.18 ರಂದು ಪಾಲಿಕೆಯ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸಂತೋಷ ಬೆಣ್ಣೂರ, ಸಂದೇಶ ಕಮಕನೂರ, ದಿಗಂಬರ ಮಾಗಣಗೇರಿ, ಮಹಾಂತೇಶ ಹರವಾಳ, ರಾಜು ಸೊನ್ನ, ದೇವಿಂದ್ರ ಜೋಗೂರ, ಮಲ್ಲು ಬಿದನೂರ, ಶ್ರೀಕಾಂತ ಅಲ್ಲೂರ,ಅಶೋಕ ಬಿದನೂರ, ಶಿವಾನಂದ ಹೊನಗುಂಟಿ, ಶರಣು ತಳವಾರ, ಸಿದ್ದು ಜಮಾದಾರ ಹಾಗೂ ಇತರರಿದ್ದರು.