ಹುಬ್ಬಳ್ಳಿ: ವೈಕೆ ಕ್ರಿಯೇಷನ್ಸ್‌ದಡಿ “ಛೋಟಾ ಬಾಂಬೆ’ ಕನ್ನಡ ಚಲನಚಿತ್ರದ ಚಿತ್ರೀಕರಣ ಇಲ್ಲಿನ ಗೋಕುಲ ರಸ್ತೆಯ ಲೋಟಸ್ ಗಾರ್ಡನ್‌ದಲ್ಲಿ ರವಿವಾರದಿಂದ ಆರಂಭಗೊಂಡಿತು. ಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಯುಸುಫ ಖಾನ್ ಹಾಗೂ ಸಹ ನಿರ್ಮಾಪಕ ಅಶಾದ್ ಖಾನ ಕಿತ್ತೂರ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ನಿರ್ದೇಶಕ ಯುಸುಫ ಖಾನ್, ಹೂ ಬಳ್ಳಿ ಎನ್ನುವ ಊರು ಛೋಟಾ ಬಾಂಬೆ ಹೇಗಾಯಿತು. ಈ ಛೋಟಾ ಬಾಂಬೆ ಪುನಃ ಹೂ ಬಳ್ಳಿ ಆಗಲು ಏನು ಮಾಡಬೇಕು ಎಂಬ ಸಂದೇಶ ನೀಡುವುದೇ ಚಿತ್ರದ ಮುಖ್ಯ ತಿರುಳಾಗಿದೆ. 40 ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ಚಿತ್ರೀಕರಣವಾಗಲಿದೆ. ಇದರಲ್ಲಿ ಐದು ಹಾಡುಗಳಿವೆ ಎಂದರು.
ನಾನು ಇಲ್ಲಿಯೇ ಹುಟ್ಟಿ ಬೆಳೆದವ. ಸದ್ಯ ಮುಂಬಯಿಯಲ್ಲಿ ವಾಸುತ್ತಿದ್ದು, ಬಾಲಿವುಡ್ ನಟ ನಾನಾ ಪಾಟೇಕರ ಅವರ ಜೊತೆ ಕೆಲಸ ಮಾಡಿದ ಅನುಭವವಿದೆ. ಈ ಮೊದಲು ‘ನೀ ನನ್ನ ಜೀವ’ ಚಿತ್ರ ನಿರ್ಮಿಸಿದ್ದೆ. ಉತ್ತರ ಕರ್ನಾಟಕ ಭಾಗದ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಛೋಟಾ ಬಾಂಬೆ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾಯಕ, ನಾಯಕಿ ಸೇರಿದಂತೆ ಬಹುತೇಕ ಕಲಾವಿದರು ಈ ಭಾಗದವರೇ ಆಗಿದ್ದಾರೆ ಎಂದು ತಿಳಿಸಿದರು. ನಟರಾದ ಸೂರಜ್ ಸಾಸನೂರ, ಅಭಿಷೇಕ ಜಾಲಿಹಾಳ, ಶೆನೋಯ್ ಕಾಟವೆ, ಯಶಸ್ವಿನಿ ಶೆಟ್ಟಿ, ಶಿವು ಹಿರೇಭೈರಗಿ, ಸುನಿಲ ಪತ್ರಿ, ಸಲೀಂ ಎಂ. ಇನ್ನಿತರೆ ಕಲಾವಿದರು ಹಾಗೂ ಗಣ್ಯರಾದ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿ ಮೊದಲಾದವರಿದ್ದರು.
ತಾರಾಗಣ:
ತಾರಾಗಣದಲ್ಲಿ ಮೂಲತಃ ಧಾರವಾಡದ ಸೂರಜ್ ಸಾಸನೂರ, ಅಭಿಷೇಕ ಜಾಲಿಹಾಳ ನಾಯಕರಾಗಿ ಹಾಗೂ ಹುಬ್ಬಳ್ಳಿಯ ಶೆನೋಯ್ ಕಾಟವೆ, ಯಶಸ್ವಿನಿ ಶೆಟ್ಟಿ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ರೂಪದರ್ಶಿ ಆಗಿರುವ ಯಶಸ್ವಿನಿಗೆ ಇದು ಮೊದಲ ಚಿತ್ರವಾಗಿದ್ದು, ಪತ್ರಕರ್ತೆಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಶೆನೋಯ್‌ಗೆ ಇದು ಮೂರನೇ ಚಿತ್ರವಾಗಿದೆ. ಚಿತ್ರಕ್ಕೆ ಶಿವು ಹಿರೇಭೈರಗಿ ಸಂಗೀತ, ಟಿ. ವೆಂಕಟೇಶ ಛಾಯಾಗ್ರಹಣ, ಶ್ಯಾಮ ಅವರ ಸಂಕಲನ, ಕೌರವ ವೆಂಕಟೇಶ ಅವರ ಸಾಹಸ, ಪಿ. ಸುರೇಶ ನೃತ್ಯ, ಬಸವರಾಜ ಜೆ.ಕೆ. ಮೇಕಪ್ ಇದೆ.