ಬೆಂಗಳೂರು/ಚೆನ್ನೈ: ಲೈಂಗಿಕ ಕಿರುಕುಳದ ಆರೋಪದ ಮೇಲೆ ಖ್ಯಾತ ನೃತ್ಯ ಸಂಯೋಜಕ (Choreographer) ಜಾನಿ ಮಾಸ್ಟರ್ (Jani Master) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ 21 ವರ್ಷದ ಯುವತಿಯೊಬ್ಬಳು ನೃತ್ಯ ಸಂಯೋಜಕ ಜಾನಿ ಮಾಸ್ಟರ್ (ಶೇಕ್ ಜಾನಿ ಬಾಷಾ) ಮೇಲೆ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಳು. ಈ ಸಂಬಂಧ ಸೈಬರಾಬಾದ್‌ನ ನರಸಿಂಗಿ ಪೊಲೀಸರು ಬುಧವಾರ (ಸೆ.18ರಂದು) ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದರು.
ದೂರಿನಲ್ಲಿ ಏನಿದೆ?:
ದೂರು ನೀಡಿದ ಯುವತಿ ಕೂಡ ನೃತ್ಯ ಸಂಯೋಜಕಿಯಾಗಿದ್ದು, ಕಳೆದ ಕೆಲ ತಿಂಗಳಿನಿಂದ ಈಕೆ ಜಾನಿ ಮಾಸ್ಟರ್ ಜೊತೆಗೆ ಕೆಲಸ ಮಾಡುತ್ತಿದ್ದಳು. ಜಾನಿ ಮಾಸ್ಟರ್ ಹೊರಾಂಗಣ ಚಿತ್ರೀಕರಣದ ವೇಳೆ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಚಿತ್ರೀಕರಣದ ಸಮಯದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರು ನಾರ್ಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಹಲವಾರು ಬಾರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರೆ ಹೇಳಿದ್ದಾಳೆ.
ಪೊಲೀಸರು ದೂರು ದಾಖಲಿಸಿಕೊಂಡು ಜಾನಿ ಮಾಸ್ಟರ್ ಅವರ ಬಂಧನಕ್ಕೆ ಬಲೆ ಬೀಸಿದ್ದರು. ಜಾನಿ ಮಾಸ್ಟರ್ ಅವರ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ತಲೆ ಮರೆಸಿಕೊಂಡಿದ್ದ ಅವರನ್ನು ವಿಶೇಷ ಕಾರ್ಯಾಚರಣೆ ತಂಡದ ಪೊಲೀಸರು ಗುರುವಾರ ಮುಂಜಾನೆ(ಸೆ.19ರಂದು) ಗೋವಾದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವಿವಾದ ಇದೇ ಮೊದಲಲ್ಲ: ಜಾನಿ ವಿವಾದದಿಂದ ಸುದ್ದಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಜಾನಿ ಮಾಸ್ಟರ್ ವಿರುದ್ಧ ಆರೋಪಗಳು ಕೇಳಿ ಬಂದಿತ್ತು. ಈ ಹಿಂದೆ ಸತೀಶ್ ಎಂಬ ಡ್ಯಾನ್ಸರ್ ಜಾನಿ ಮಾಸ್ಟರ್ ವಿರುದ್ಧ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಸಿನಿಮಾ ಚಿತ್ರೀಕರಣದಲ್ಲಿ ಕೆಲಸ ಸಿಗದಂತೆ ನೃತ್ಯ ನಿರ್ದೇಶಕರು ತಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಆ ಬಳಿಕ ಜಾನಿ ಮಾಸ್ಟರ್ ಈ ಆರೋಪಗಳನ್ನು ತಳ್ಳಿಹಾಕಿದ್ದರು. ಇದಲ್ಲದೆ 2015 ರಲ್ಲಿ ಕಾಲೇಜಿನಲ್ಲಿ ನಡೆದ ಗಲಾಟೆಯಿಂದಾಗಿ 2019 ರಲ್ಲಿ ಜಾನಿ ಮಾಸ್ಟರ್‌ಗೆ ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು.
ಜಾನಿ ಮಾಸ್ಟರ್ ʼರೌಡಿ ಬೇಬಿʼ ಮತ್ತು ಇತ್ತೀಚೆಗೆ ʼಸ್ತ್ರೀ-2ʼ ಚಿತ್ರ ʼಆಯಿ ನಾಯ್ʼ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.