ಬಾರಿಪಾಡ : ”ಚೋರನಿಗೆ ಮಾತ್ರವೇ ಚೌಕೀದಾರನ ಭಯ; ಚೌಕೀದಾರ ಇಲ್ಲದಿರುವುದನ್ನು ಚೋರ ಮಾತ್ರವೇ ಬಯಸುತ್ತಾನೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ತನ್ನನ್ನು ‘ಚೌಕೀದಾರ್’ ಎಂದು ಲೇವಡಿ ಮಾಡುವುದಕ್ಕೆ ಪ್ರತಿಯಾಗಿ ಸರಿಯಾದ ರೀತಿಯಲ್ಲಿ ಟಾಂಗ್ ನೀಡಿದ್ದಾರೆ.
“ಚೋರನು ಯಾವತ್ತೂ ಚೌಕೀದಾರನನ್ನು ಹೊರಗಟ್ಟುವುದನ್ನು ಬಯಸುತ್ತಾನೆ. ಸಮಾಜವೇ ಇರಲಿ, ಕಾರ್ಖಾನೆಯೇ ಇರಲಿ – ಕಳ್ಳರು ಯಾವತ್ತೂ ಮೊದಲು ಚೌಕೀದಾರನನ್ನು ತೆಗೆಯಲು ಯತ್ನಿಸುತ್ತಾರೆ; ಏಕೆಂದರೆ ಚೌಕೀದಾರ ಇಲ್ಲದಿದ್ದರೆ ಅವರ ಕೆಲಸ ಸುಲಭವಾಗುತ್ತದೆ ! ಚೌಕೀದಾರ ಇರುವಷ್ಟು ಕಾಲ ಚೋರನಿಗೆ ಕಳ್ಳತನ ಮಾಡುವುದು ಅಸಾಧ್ಯವಾಗುತ್ತದೆ” ಎಂದು ಪ್ರಧಾನಿ ಮೋದಿ ಅವರು ಒಡಿಶಾದ ಬಾರಿಪಾಡದಲ್ಲಿ ಬಿಜೆಪಿ ಏರ್ಪಡಿಸಿದ್ದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣವನ್ನು ಕೆದಕಿದ ಪ್ರಧಾನಿ ಮೊದಿ, “ಯುಪಿಯ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸರಕಾರವನ್ನು ನಡೆಸುತ್ತಿತ್ತೇ ಅಥವಾ ಮಿಶೆಲ್ ಮಾಮಾ ಸರಕಾರವನ್ನು ನಡೆಸುತ್ತಿದ್ದರೇ ಎಂಬುದು ಅರ್ಥವಾಗುವುದಿಲ್ಲ. ಆದರೆ ಕಾನೂನು ಮಾತ್ರ ಯಾರನ್ನೂ ಎಸ್ಕೇಪ್ ಆಗಲು ಬಿಡುವುದಿಲ್ಲ” ಎಂದು ಖಡಕ್ ಆಗಿ ನುಡಿದರು.
“2004ರಿಂದ 2014ರ ವರೆಗೆ ದೇಶದ ಸೇನೆಯನ್ನು ದುರ್ಬಲಗೊಳಿಸುವ ಒಂದು ಪಿತೂರಿಯೇ ನಡೆದಿತ್ತು. ಈಗ ದೇಶ ಗಮನಿಸುತ್ತಿದೆ ಮತ್ತು ಅರ್ಥ ಮಾಡಿಕೊಳ್ಳುತ್ತಿದೆ. ಈಗ ನಮ್ಮ ಸರಕಾರ ಸೇನೆಗೆ ಖೆಡ್ಡಾದಿಂದ ಮೇಲೆ ಬರಲು ನೆರವಾಗುತ್ತಿದೆ’ ಎಂದು ಮೋದಿ ಹೇಳಿದರು.
ಅಗಸ್ಟಾ ಹಗರಣದಲ್ಲಿನ ಮಧ್ಯವರ್ತಿ ಕ್ರಿಸ್ಟಿಯನ್ ಮಿಶೆಲ್ ನ ಪತ್ರಗಳ ಕುರಿತಾದ ವರದಿಯನ್ನು ಉಲ್ಲೇಖೀಸಿ ಮಾತನಾಡಿದ ಮೋದಿ, ‘ಮಿಶೆಲ್ ಗೆ ಕಾಂಗ್ರೆಸ್ ನಾಯಕರು ಮತ್ತು ಸಚಿವರ ನಿಕಟ ಸಂಬಂಧ, ಸಂಪರ್ಕ ಇತ್ತು’ ಎಂದು ಹೇಳಿದರು. ‘ಅಂದಿನ ಪ್ರಧಾನಿಗಿಂತಲೂ ಹೆಚ್ಚಿನ ಮಾಹಿತಿ ಮಿಶೆಲ್‌ಗೆ ಇದ್ದಿರಬೇಕು’ ಎಂದವರು ಹೇಳಿದರು.