ಲಾಹೋರ್: ಆವೆನ್‌ಫೀಲ್ಡ್ ಅಪಾರ್ಟ್‌ಮೆಂಟ್ ಪ್ರಕರಣದಲ್ಲಿ ದೋಷಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಶುಕ್ರವಾರ ಸಂಜೆ ಅಬುಧಾಬಿಯಿಂದ ಕುಟುಂಬ ಸಮೇತ ಲಾಹೋರ್‌ಗೆ ಆಗಮಿಸಲಿದ್ದು, ವಿಮಾನ ನಿಲ್ದಾಣದಲ್ಲೇ ಬಂಧಿಸಿ ಜೈಲಿಗೆ ಕರೆದೊಯ್ಯಲು ಪೊಲೀಸರು ಎಲ್ಲಾ ಸಿದ್ಧತೆ ನಡೆಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ನವಾಜ್ ಷರೀಫ್ರ ಪಿಎಂಎಲ್‌ಎನ್ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ನಾಯಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಜೈಲಿನಲ್ಲಿಡಲಾಗಿದೆ.ಸೆಕ್ಷನ್ 144 ಉಲ್ಲಂಘನೆ ಮಾಡಿದ ಆರೋಪದಲ್ಲಿ ಇವರನ್ನು ವಶಕ್ಕೆ ಪಡೆದಿದ್ದಾರೆ.
ಲಾಹೋರ್‌ನ ಅಲ್ಲಮಾ ಇಕ್‌ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ತಡೆ ಹಾಕಲಾಗಿದ್ದು, ಕೆಲವು ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಲಾಹೋರ್ ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಇಂಟರ್‌ನೆಟ್ ಸೇವೆ ಸ್ಥಗಿತ ಗೊಳಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಷರೀಫನ್ನು ಜೈಲಿಗೆ ಸ್ಥಳಾಂತರಿಸಲು ಎರಡು ಹೆಲಿಕಾಪ್ಟರ್‌ಗಳನ್ನೂನಿಯೋಜಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಭ್ರಷ್ಟಾಚಾರ ತಡೆ ದಳ 16 ಸದಸ್ಯರ ತಂಡವನ್ನು ರೂಪಿಸಿದೆ.
ಷರೀಫ್ ಸಹೋರದ ಶಹಬಾಜ್ ಸಾವಿರಾರು ಬೆಂಬಲಿಗರೊಂದಿಗೆ ವಿಮಾನ ನಿಲ್ದಾಣದತ್ತ ಬೃಹತ್ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ. ಆದರೆ ಅನುಮತಿ ಪಡೆಯದಿರುವ ಕಾರಣಕ್ಕೆ ಪೊಲೀಸರು ಅವಕಾಶ ನೀಡುವ ಸಾಧ್ಯತೆಗಳು ಕಡಿಮೆ.
ವಿಮಾನವನ್ನು ಸೂಕ್ತ ಭದ್ರತೆಯ ಕಾರಣ ಇಸ್ಲಮಾಬಾದ್ ವಿಮಾನ ನಿಲ್ದಾಣದತ್ತ ತಿರುಗಿಸಿ ಅಲ್ಲಿಂದಲೇ ಜೈಲಿಗೆ ಕರೆದೊಯ್ಯಲು ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.