ಇಸ್ಲಾಮಾಬಾದ್ : ”ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಜಾ ಫಾರೂಕ್ ಹೈದರ್ ಅವರನ್ನು ಒಯ್ಯುತ್ತಿದ್ದ ಹೆಲಿಕಾಪ್ಟರ್ ಭಾರತೀಯ ವಾಯ ಪ್ರದೇಶ ಉಲ್ಲಂಘನೆ ಮಾಡಿಲ್ಲ; ಆದರೂ ಭಾರತೀಯ ಪಡೆಗಳು ಅದನ್ನು ಗಡಿ ನಿಯಂತ್ರಣ ರೇಖೆಗೆ ಸಮೀಪ ಹೊಡೆದುರುಳಿಸಲು ಯತ್ನಿಸಿವೆ” ಎಂದು ಪಾಕ್ ಮಾಧ್ಯಮಗಳು ಹೇಳಿವೆ.
ಪಾಕಿಸ್ಥಾನದ ಡಾನ್ ನ್ಯೂಸ್ ಪ್ರಕಟಿಸಿರುವ ವರದಿಯ ಪ್ರಕಾರ ಪಾಕ್ ಹೆಲಿಕಾಪ್ಟರ್ ನಲ್ಲಿ ಪಿಓಕೆ ಪ್ರಧಾನಿ ಹೈದರ್ ಮತ್ತು ಇಬ್ಬರು ಸಚಿವರು ಪ್ರಯಾಣಿಸುತ್ತಿದ್ದರು; ಭಾರತೀಯ ಪಡೆಗಳು ಈ ಹೆಲಿಕಾಪ್ಟರನ್ನು ಅಬ್ಟಾಸ್‌ಪುರ ಗ್ರಾಮ ಸಮೀಪ ಹೊಡೆದುರುಳಿಸಲು ಯತ್ನಿಸಿದವು. ಪಿಓಕೆ ಪ್ರಧಾನಿ ತನ್ನ ಕ್ಯಾಬಿನೆಟ್ ಸದಸ್ಯರೊಬ್ಬರ ಸಹೋದರ ತೀರಿಕೊಂಡ ಕಾರಣ, ಅವರನ್ನು ಕಾಣಲು ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಭಾರತೀಯ ಪಡೆಗಳ ಗುಂಡಿನ ದಾಳಿಗೆ ಗುರಿಯಾಗಿಯೂ ಅನಾಹುತದಿಂದ ಪಾರಾದ ಹೆಲಿಕಾಪ್ಟರ್ ಪಾಕ್ ವಾಯು ಪ್ರದೇಶದೊಳಗೆ ಹಾರುತ್ತಿತ್ತು. ಇದ್ದಕ್ಕಿದ್ದಂತೆಯೇ ಭಾರತೀಯ ಪಡೆಗಳು ಹೆಲಿಕಾಪ್ಟರ್ ಮೇಲೆ ಗುಂಡು ಹಾರಿಸಿದವು; ಹೆಲಿಕಾಪ್ಟರ್ ಝೀರೋ ಲೈನಿಗೆ ಅತ್ಯಂತ ನಿಕಟದಲ್ಲಿತ್ತು ಎಂದು ಡಾನ್ ನ್ಯೂಸ್ ವರದಿ ಹೇಳಿದೆ.
ಪಾಕ್ ಪ್ರಧಾನಿ ಹೆಲಿಕಾಪ್ಟರ್‌ನಲ್ಲಿ ಹೋಗುವ ವಿಷಯವನ್ನು ಭಾರತೀಯ ಅಧಿಕಾರಿಗಳಿಗೆ ಮುಂಚಿತವಾಗಿ ಏಕೆ ತಿಳಿಸಿಲ್ಲ ಎಂಬ ಪ್ರಶ್ನೆಗೆ ಹೈದರ್ ಅವರು “ನಾನು ಪೌರ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದೆ; ಆದುದರಿಂದ ಅದನ್ನು ಯಾರಿಗೂ ತಿಳಿಸುವ ಅಗತ್ಯ ಇರಲಿಲ್ಲ; ನಾನು ಹಿಂದೆಯೂ ಅನೇಕ ಬಾರಿ ಈ ರೀತಿ ಹೆಲಿಕಾಪ್ಟರ್‌ನಲ್ಲಿ ಈ ವಲಯದಲ್ಲಿ ಪ್ರಯಾಣಿಸಿದ್ದೇನೆ; ಆದರೆ ಈ ರೀಯಿಯ ಘಟನೆ ಮಾತ್ರ ಇದೇ ಮೊದಲ ಬಾರಿಗೆ ನಡೆದಿದೆ’ ಎಂದು ಹೇಳಿದರು.