ತುಮಕೂರು: ಐ.ಸಿ.ಡಿ.ಎಸ್ ಸೇವೆ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ಸಿದ್ಧಪಡಿಸಲಾಗಿರುವ ಸ್ನೇಹ ತಂತ್ರಾಂಶ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಬಳಸಲು ತುಮಕೂರನ್ನು ಪೈಲೆಟ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.
ಡಿಎಚ್ಒ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಸಿ.ಸ್ಟೆಪ್ ಸಂಸ್ಥೆಗಳ ಸಹಯೋಗದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿ ಚಾರಕರಿಗೆ ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ತರಬೇತುದಾರರ ತರಬೇತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಸಿ.ಸ್ಟೆಪ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ನೇಹ ಮೊಬೈಲ್ ತಂತ್ರಾಂಶವನ್ನು ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ ಗಳಲ್ಲಿ ಅಳವಡಿಸುವುದರಿಂದ ಏಕರೂಪದ ಮಾಹಿತಿ ಸಂಗ್ರಹಿಸಲು ಅನುವಾಗುತ್ತದೆ ಎಂದು ಹೇಳಿದರು.
ಶೀಘ್ರದಲ್ಲೇ ಸ್ಮಾರ್ಟ್ ಫೋನ್: ಸ್ನೇಹ ತಂತ್ರಾಂಶದ ಪರಿಣಾಮಕಾರಿ ಅಳವಡಿಕೆಗೆ ಜಿಲ್ಲೆಯಲ್ಲಿರುವ 4095 ಅಂಗನವಾಡಿ ಕೇಂದ್ರಗಳ ಎಲ್ಲ ಕಾರ್ಯ ಕರ್ತೆಯರಿಗೆ ಮೊಬೈಲ್ ಒದಗಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಶೇ. 25ರಷ್ಟು ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್ ಹೊಂದಿದ್ದು, ಉಳಿದ ಕಾರ್ಯಕರ್ತೆಯರಿಗೆ ಶೀಘ್ರ ದಲ್ಲೇ ಸ್ಮಾರ್ಟ್ ಫೋನ್ ಒದಗಿಸಲು ಕ್ರಮ ಕೈಗೊಳ್ಳ ಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮೊಬೈಲ್ ಮೂಲಕ ನೀಡುವ ತರಬೇತಿ ಯನ್ನು ಶ್ರದ್ಧೆಯಿಂದ ಕಲಿತು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಚಂದ್ರಿಕಾ ಮಾತನಾಡಿ, ಸ್ನೇಹ ತಂತ್ರಾಂಶವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ತಾಯಿ ಮತ್ತು ಮಗುವಿನ ಸೇವೆ, ಪ್ರತಿದಿನದ ಕಾರ್ಯಚಟುವಟಿಕೆ ಸುಲಭವಾಗಿ ಕೈಗೊಳ್ಳಲು ಉಪಯುಕ್ತವಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಏಕರೂಪದ ಮಾಹಿತಿ ಸಂಗ್ರಹ ಸಾಧ್ಯ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಮಾತನಾಡಿ, ಸ್ನೇಹ ತಂತ್ರಾಂಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯಾದ್ಯಂತ ಮಕ್ಕಳ ಮತ್ತು ತಾಯಂದಿರ ಏಕರೂಪದ ಮಾಹಿತಿ ಸಂಗ್ರಹಿಸ ಬಹುದಾಗಿದೆ ಎಂದರು. ಮಕ್ಕಳ ಚುಚ್ಚುಮದ್ದು, ಗರ್ಭಿಣಿಯರ ಆರೈಕೆ ಹಾಗೂ ನೋಂದಣಿಗಳ ಏಕರೂಪದ ದಾಖಲಿಸುವಿಕೆ, ಮಗುವಿನ ತೂಕ, ಉದ್ದ, ಎತ್ತರದ ಬಗ್ಗೆ ನಿಖರ ಮಾಹಿತಿ ಹಾಗೂ ಮಾಸಿಕ ವರದಿಗಳ ಮಾಹಿತಿ ಸಂಗ್ರಹ, ಅಂಗನವಾಡಿ ಕೇಂದ್ರ ಗಳಲ್ಲಿ ಹಾಜರಾಗುವ ಮಕ್ಕಳ ನಿಖರ ಮಾಹಿತಿ, ಭಾವಚಿತ್ರದ ಮೂಲಕ ಮಕ್ಕಳ ಹಾಜರಾತಿ ತಿಳಿಯಲು ಸಹಕಾರಿ, ವೈದ್ಯಕೀಯ ಸೇವೆ ಅಗತ್ಯವಿರುವ ಮಕ್ಕಳ ಗುರುತಿಸುವಿಕೆಗೆ ಸಂಬಂಧಿಸಿ ಜಿಲ್ಲೆಯ ಮಾಹಿತಿ ಏಕಕಾಲದಲ್ಲಿ ಪಡೆಯ ಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸಕಾಲಕ್ಕೆ ಸೌಲಭ್ಯ: ಸ್ನೇಹ ತಂತ್ರಾಂಶ ಬಳಕೆಯಿಂದ ಅಂಗನವಾಡಿ ಕೇಂದ್ರಗಳಲ್ಲಿರುವ ಲೋಪದೋಷ, ನೂನ್ಯತೆ, ಮೂಲಸೌಕರ್ಯಗಳ ಕೊರತೆ ಅರಿತು ಅಗತ್ಯ ಸೌಲಭ್ಯ ಸಕಾಲದಲ್ಲಿ ಕಲ್ಪಿಸಲು ನೆರವಾಗುತ್ತದೆ. ಅಲ್ಲದೇ ಸಿಬ್ಬಂದಿಗೆ ಸಲಹೆ, ಸೂಚನೆ ನೀಡಲು ಅನುಕೂಲವಾಗುತ್ತದೆ. ತುಮಕೂರನ್ನು ಮಾತೃ ಪೂರ್ಣ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಿ ಕೊಂಡಂತೆ ಸ್ನೇಹ ತಂತ್ರಾಂಶ ಅನುಷ್ಠಾನಕ್ಕೂ ಪೈಲೆಟ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಎಲ್ಲ ಅಧಿಕಾರಿ, ಸಿಬ್ಬಂದಿ ಯೋಜನೆಯ ಅನುಷ್ಠಾನ ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಬೇಕೆಂದು ತಿಳಿಸಿದರು.
ಸಿ.ಸ್ಟೆಪ್ ಸಂಸ್ಥೆಯ ಮುಖ್ಯಸ್ಥೆ ಸುರಭಿ ಹಾಗೂ ರಾಜೇಶ್ ತರಬೇತಿ ನೀಡಿದರು. ಜಿಲ್ಲೆಯ ಎಲ್ಲ ತಾಲೂಕಿನ ಸಿಡಿಪಿಒಗಳು, ಮೇಲ್ವಿಚಾರಕರು, ಅಂಗನ ವಾಡಿ ಕಾರ್ಯಕರ್ತೆಯರು ಇದ್ದರು.