Advertisement

Toothpaste: ನಿಮ್ಮ ದಂತ ವೈದ್ಯಕೀಯ ಅಗತ್ಯಕ್ಕೆ ತಕ್ಕಂತೆ ಹಲ್ಲುಜ್ಜುವ ಪೇಸ್ಟ್‌ ಆಯ್ಕೆ

10:05 AM Jan 30, 2024 | Team Udayavani |

ನಿಮ್ಮ ಹಲ್ಲುಗಳನ್ನು ಶುಚಿಯಾಗಿ, ಆರೋಗ್ಯಯುತವಾಗಿ ಇರಿಸಿಕೊಳ್ಳುವುದಕ್ಕೆ ಸಮರ್ಪಕವಾದ ಹಲ್ಲುಜ್ಜುವ ಪೇಸ್ಟ್‌ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂಬ ಗೊಂದಲದಲ್ಲಿದ್ದೀರಾ? ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದ್ದು, ಇವುಗಳನ್ನು ಅನುಸರಿಸುವ ಮೂಲಕ ಸೂಕ್ತವಾದ ಆಯ್ಕೆಯನ್ನು ನೀವು ಮಾಡಿಕೊಳ್ಳಬಹುದು.

Advertisement

ಈಗ ಯಾವುದೇ ಅಂಗಡಿ, ಮಳಿಗೆಗೆ ಹೋದರೂ ಥರಹೇವಾರಿ ಟೂತ್‌ಬ್ರಶ್‌ ಗಳನ್ನು ಕಾಣಬಹುದು. ಇವುಗಳಲ್ಲಿ ನಿಮಗೆ, ನಿಮ್ಮ ಅಗತ್ಯಕ್ಕೆ ಅನುಗುಣವಾದ ಟೂತ್‌ಪೇಸ್ಟ್‌ ಆಯ್ಕೆ ಮಾಡಿಕೊಳ್ಳುವುದು ಹೇಗಪ್ಪ ಎಂಬ ಗೊಂದಲ ನಿಮ್ಮಲ್ಲಿ ಉಂಟಾಗುವುದು ಖಚಿತ. ನೀವೊಬ್ಬರೇ ಅಲ್ಲ; ಟೂತ್‌ಪೇಸ್‌ rಗಳ ವೈವಿಧ್ಯವನ್ನು ಕಂಡ ಯಾರಿಗೇ ಆದರೂ ಈ ಗೊಂದಲ ಉಂಟಾಗುವುದು ನಿಶ್ಚಿತ. ಹಲ್ಲುಗಳನ್ನು ಶುಭ್ರಗೊಳಿಸುವುದರಿಂದ ಹಿಡಿದು ಉಸಿರಿನ ದುರ್ವಾಸನೆಯನ್ನು ತೊಲಗಿಸುವ, ಹಲ್ಲುಕುಳಿ ಉಂಟಾಗದಂತೆ ತಡೆಯುವ, ಪ್ಲೇಕ್‌ ತೊಲಗಿಸುವ ಮತ್ತು ಸೂಕ್ಷ್ಮ ಸಂವೇದನೆಯಿಂದ ರಕ್ಷಣೆ ಒದಗಿಸುವ – ಹೀಗೆ ಪ್ರತೀ ದಂತವೈದ್ಯಕೀಯ ಸಮಸ್ಯೆಗೂ ಪರಿಹಾರ ನೀಡಬಲ್ಲ ಪೇಸ್ಟ್‌ಗಳು ಲಭ್ಯವಿರುತ್ತವೆ. ಆದರೆ ನಿಮ್ಮ ಹಲ್ಲುಗಳಿಗೆ ಯಾವ ಪೇಸ್ಟ್‌ ಸೂಕ್ತ ಎಂಬುದೇ ಪ್ರಶ್ನೆ.

ಸರಿಯಾದ ಟೂತ್‌ಪೇಸ್ಟ್‌ ಆಯ್ಕೆಯಂತಹ ಸರಳವಾದ ಆದರೆ ನಿರ್ಣಾಯಕವಾದ ಆಯ್ಕೆಯೊಂದಿಗೆ ನಮ್ಮ ಹಲ್ಲುಗಳ ಆರೋಗ್ಯ ಕಾಪಾಡುವ ಮತ್ತು ಶುಭ್ರವಾದ ನಗು ಹೊರಸೂಸುವ ಪ್ರಕ್ರಿಯೆ ಆರಂಭವಾಗುತ್ತದೆ ಎಂಬುದರಲ್ಲಿ ಸಂಶಯ ಇಲ್ಲ. ನಿಮ್ಮ ಹಲ್ಲುಗಳು ಶುಭ್ರವಾಗಿ ಹೊಳೆಯುವುದಕ್ಕೆ ಮತ್ತು ಆರೋಗ್ಯಯುತವಾಗಿ ಇರುವುದಕ್ಕೆ ಸಹಾಯ ಮಾಡುವಂತಹ ಟೂತ್‌ಬ್ರಶ್‌ ಆಯ್ದುಕೊಳ್ಳಲು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಸರಿಯಾದ ಟೂತ್‌ಪೇಸ್ಟ್‌ ಆಯ್ಕೆ ಮಾಡಿಕೊಳ್ಳಲು ಸಲಹೆಗಳು

  1. ನಿಮ್ಮ ದಂತ ವೈದ್ಯಕೀಯ ಅಗತ್ಯಗಳನ್ನು ಅರಿತುಕೊಳ್ಳಿ ಮೊತ್ತಮೊದಲನೆಯ ವಿಚಾರ ಎಂದರೆ ನಿಮ್ಮ ನಿರ್ದಿಷ್ಟ ದಂತವೈದ್ಯಕೀಯ ಅಗತ್ಯಗಳನ್ನು ಅರಿತುಕೊಳ್ಳಿ. ನೀವು ದಂತಕುಳಿಗಳ ವಿರುದ್ಧ ಹೋರಾಡುತ್ತಿದ್ದೀರಾ ಅಥವಾ ಸೂಕ್ಷ್ಮ ಸಂವೇದನೆಯ ವಿರುದ್ಧ ಹೋರಾಡುತ್ತಿದ್ದೀರಾ? ನಿಮಗೆ ಬೇಕಾದ, ಸರಿಯಾದ ಟೂತ್‌ಪೇಸ್ಟ್‌ ಆಯ್ಕೆ ಮಾಡಿಕೊಳ್ಳಲು ಈ ವ್ಯಕ್ತಿಗತ ಅಗತ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ.
  2. ಫ್ಲೋರೈಡ್‌ ಅಂಶ ಗಮನಿಸಿಕೊಳ್ಳಿ ನಿಮ್ಮ ಆರೋಗ್ಯಪೂರ್ಣ ಹಲ್ಲು, ಶುಭ್ರ ನಗುವಿನ ಅತ್ಯುತ್ತಮ ಗೆಳೆಯ ಎಂದರೆ ಅದು ಫ್ಲೋರೈಡ್‌. ದುರ್ಬಲಗೊಂಡ ಎನಾಮಲ್‌ಗೆ ಫ್ಲೋರೈಡ್‌ ಎಂಬ ಖನಿಜಾಂಶವನ್ನು ಮರುಪೂರಣಗೊಳಿಸಿ ದಂತಕುಳಿ ಉಂಟಾಗುವುದರ ವಿರುದ್ಧ ಹಲ್ಲುಗಳನ್ನು ಸದೃಢಗೊಳಿಸುವ ಖನಿಜ ಅಂಶ ಇದು. ನೀವು ಆಯ್ಕೆ ಮಾಡಿಕೊಳ್ಳುವ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ.
  3. ಸೂಕ್ಷ್ಮ ಸಂವೇದಿ ಹಲ್ಲುಗಳ ರಕ್ಷಣೆ ನಿಮ್ಮ ಹಲ್ಲುಗಳು ಶಾಖ ಅಥವಾ ಶೈತ್ಯಕ್ಕೆ ಸೂಕ್ಷ್ಮ ಸಂವೇದಿಯಾಗಿದ್ದರೆ ಅದನ್ನು ನಾಶಪಡಿಸಬಲ್ಲ ಸಾದಾ ಟೂತ್‌ಪೇಸ್ಟ್‌ ಬಳಕಯಿಂದ ನಿಮ್ಮ ಹಲ್ಲುಗಳ ಸತ್ವ ಕಡಿಮೆಯಾಗಬಹುದು. ಅಂತಹ ಪೇಸ್ಟ್‌ಗಳಲ್ಲಿ ಹಲ್ಲುಗಳ ಮೇಲ್ಮೆ„ಯಿಂದ ಸಂವೇದನೆಯನ್ನು ನರಗಳಿಗೆ ರವಾನಿಸುವುದನ್ನು ತಡೆಗಟ್ಟಬಲ್ಲ ಪೊಟ್ಯಾಸಿಯಂ ನೈಟ್ರೇಟ್‌ ಅಥವಾ ಸ್ಟ್ರಾಂಟಿಯಂ ಕ್ಲೋರೈಡ್‌ ನಂತಹ ರಾಸಾಯನಿಕ ಸಂಯುಕ್ತಗಳು ಇಂತಹ ಪೇಸ್ಟ್‌ಗಳಲ್ಲಿ ಇರುವುದೇ ಇದಕ್ಕೆ ಕಾರಣ. ಇದರಿಂದ ಹಲ್ಲುಗಳ ಸೂಕ್ಷ್ಮ ಸಂವೇದನ ಶಕ್ತಿ ನಷ್ಟವಾಗುತ್ತದೆ.
  4. ಮಕ್ಕಳಿಗಾಗಿ ಟೂತ್‌ಪೇಸ್ಟ್‌ ಇಂತಹ ಟೂತ್‌ಪೇಸ್ಟ್‌ಗಳಲ್ಲಿ ಫ್ಲೋರೈಡ್‌ ಅಂಶ ಕಡಿಮೆ ಇರುತ್ತದೆ. ಜತೆಗೆ ಮಕ್ಕಳ ಟೂತ್‌ಪೇಸ್ಟ್‌ಗಳಲ್ಲಿ ಕ್ಷಯಕಾರಕ ಸಂಯುಕ್ತಗಳು ಕಡಿಮೆ ಇರುತ್ತವೆ. ಯಾಕೆಂದರೆ ಪ್ರೌಢ ವಯಸ್ಕರ ಹಲ್ಲುಗಳಿಗಿಂತ ಮಕ್ಕಳ ಹಲ್ಲುಗಳಲ್ಲಿ ಖನಿಜಾಂಶಗಳು ಕಡಿಮೆ ಇರುತ್ತವೆ. ಮಕ್ಕಳು ಖುಷಿಯಿಂದ ಹಲ್ಲುಜ್ಜುವಂತಾಗಲು ಮಕ್ಕಳ ಟೂತ್‌ಪೇಸ್ಟ್‌ಗಳಲ್ಲಿ ವಿವಿಧ ಸ್ವಾದಗಳು ಕೂಡ ಇರುತ್ತವೆ.
  5. ಅನಗತ್ಯ ಅಂಶಗಳನ್ನು ಹೊಂದಿರುವ ಪೇಸ್ಟ್‌ಗಳನ್ನು ದೂರವಿಡಿ ಅತಿಯಾಗಿ ಕೃತಕ ಸಿಹಿಕಾರಕಗಳು, ಬಣ್ಣಗಳು ಅಥವಾ ಕಟುವಾದ ಹಲ್ಲು ಕ್ಷಯಕಾರಕ ಅಂಶಗಳನ್ನು ಹೊಂದಿರುವ ಟೂತ್‌ಪೇಸ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ. ಇಂತಹ ಅಂಶಗಳು ಹಲ್ಲುಗಳು ಕ್ಷಯಿಸುವಂತೆ ಮಾಡಬಹುದು ಅಥವಾ ಹಲ್ಲುಗಳು ತೊಂದರೆಗೆ ಒಳಗಾಗುವಂತೆ ಮಾಡಬಹುದು.
  6. ನಿಮ್ಮ ದಂತವೈದ್ಯರ ಜತೆಗೆ ಸಮಾಲೋಚಿಸಿ ನಿಮಗೆ ಟೂತ್‌ಪೇಸ್ಟ್‌ ಆಯ್ಕೆಯಲ್ಲಿ ಯಾವುದೇ ಸಂದೇಹಗಳು ಮೂಡಿದರೆ ನಿಮ್ಮ ದಂತವೈದ್ಯರನ್ನು ಸಂಪರ್ಕಿಸಿ ಸಮಾಲೋಚಿಸಿ. ನಿಮ್ಮ ಹಲ್ಲುಗಳ ಆರೋಗ್ಯ, ರಕ್ಷಣೆಯ ಬಗ್ಗೆ ಅವರು ಸಾಕಷ್ಟು ಅನುಭವ, ಜ್ಞಾನ ಹೊಂದಿರುವ ಕಾರಣ ನಿಮ್ಮ ಅಗತ್ಯಗಳಿಗೆ ತಕ್ಕಂತಹ ಆಯ್ಕೆಯನ್ನು ಮಾಡಿಕೊಳ್ಳಲು ಅವರು ಸೂಕ್ತ ಸಲಹೆಗಳನ್ನು ನೀಡಬಲ್ಲರು. ಹೀಗೆ ಸಾದಾ ಸೀದಾ ಯಾವುದೋ ಒಂದನ್ನು ಖರೀದಿಸಿ ತರುವುದಕ್ಕಿಂತ ಹೆಚ್ಚಿನ ವಿಚಾರಗಳು ನಿಮ್ಮ ಟೂತ್‌ ಬ್ರಶ್‌ ಆಯ್ಕೆಯಲ್ಲಿ ಇವೆ. ಅದು ಆರೋಗ್ಯವಂತ, ಶುಭ್ರ ನಗು ಹೊರಸೂಸುವಲ್ಲಿ ಮೊದಲ ಹೆಜ್ಜೆ.

ಹಲ್ಲುಜ್ಜುವ ಸರಿಯಾದ ರೀತಿ, ಸರಿಯಾದ ಫ್ಲಾಸಿಂಗ್‌ ಮತ್ತು ನಿಯಮಿತವಾಗಿ ದಂತವೈದ್ಯರಲ್ಲಿಗೆ ಭೇಟಿ – ಇವು ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವಲ್ಲಿ ಬಹಳ ನಿರ್ಣಾಯಕ ಅಂಶಗಳು. ಹೀಗಾಗಿ ಸರಿಯಾದ ಆಯ್ಕೆಯನ್ನು ಮಾಡಿ, ಶುಭ್ರವಾಗಿ ಹೊಳೆಯುವ ನಗು ನಿಮ್ಮದಾಗಲಿ ಮತ್ತು ನಿಮ್ಮ ಆತ್ಮವಿಶ್ವಾಸ ಬೆಳಗಲಿ!

Advertisement

-ಡಾ| ಆನಂದದೀಪ್‌ ಶುಕ್ಲಾ,

ಅಸೋಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ,

ಎಂಸಿಒಡಿಎಸ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್‌ ಸರ್ಜರಿ ವಿಭಾಗ, ಕೆಎಂಸಿ , ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next