ವಾಡಿ: ಚುನಾವಣೆ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೋರ್ವರು ಗುಂಡು ಹೊಡೆದುಕೊಂಡು ಅತ್ಮಹತ್ಯೆ ಮಾಡಿಕೊಂಡ ಘಟನೆ ಮೇ.4 ರ ಗುರುವಾರ ಚಿತ್ತಾಪುರ ಪಟ್ಟಣದಲ್ಲಿ ಸಂಭವಿಸಿದೆ.
ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 2012/23ನೇ ಬ್ಯಾಚ್ ನ ಪೇದೆ, ಶಹಾಬಾದ ಮಡ್ಡಿ ಏರಿಯಾ ನಿವಾಸಿ ಮಲ್ಲಿಕಾರ್ಜುನ ಪತ್ತೇಪೂರ (38) ಮೃತಪಟ್ಟವರು.
ಚಿತ್ತಾಪುರ ತಹಶಿಲ್ದಾರರ ಕಚೇರಿಯಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಪೇದೆ ಮಲ್ಲಿಕಾರ್ಜುನ, ಇತರ ಸಿಬ್ಬಂದಿಗಳೊಂದಿಗೆ ಬುಧವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಮಧ್ಯರಾತ್ರಿ ಸುಮಾರು 2.30 ಗಂಟೆಗೆ ತಹಶಿಲ್ದಾರ್ ಕಚೇರಿಯ ಕಟ್ಟಡದ ಮೇಲೆ ಹೋಗಿದ್ದಾರೆ ಎನ್ನಲಾಗಿದ್ದು, ಬೆಳಗಿನ ಜಾವ ಕೈಯಲ್ಲಿ ಬಂದೂಕು ಇದ್ದು, ಗಂಟಲಿನ ಮೂಲಕ ತಲೆಯಿಂದ ಗುಂಡು ಪಾರಾದ ಸ್ಥಿತಿಯಲ್ಲಿ ಪೊಲೀಸ್ ಪೇದೆಯ ಮೃತದೇಹ ಪತ್ತೆಯಾಗಿದೆ.
ಕಸ ಗುಡಿಸಲು ಹೋದ ಪೌರಕಾರ್ಮಿಕ ಮಹಿಳೆಯೊಬ್ಬರಿಂದ ಘಟನೆ ಬೆಳಕಿಗೆ ಬಂದಿದೆ. ಇದು ಕೊಲೆಯೋ ಅಥವ ಆತ್ಮಹತ್ಯೆಯೋ ಎಂಬುದರ ನಿಖರವಾಗಿ ತಿಳಿದುಬಂದಿಲ್ಲ. ಘಟನೆಯಿಂದ ಖಾಕಿ ಪಾಳೆಯದಲ್ಲಿ ತಲ್ಲಣ ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ಎಸ್ ಪಿ ಇಶಾ ಪಂತ್, ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ ಐ ನಂದಕುಮಾರ, ತಹಶಿಲ್ದಾರ ಪಾಷಾವಲಿ ಭೇಟಿ ನೀಡಿದ್ದಾರೆ. ತನಿಖೆ ಮುಂದುವರೆದಿದೆ.