Advertisement

ಸಂಬಳಕ್ಕಷ್ಟೇ ಶಿಕ್ಷಕರಾಗಬೇಡಿ: ಪ್ರಿಯಾಂಕ್‌

10:48 AM Sep 06, 2019 | Naveen |

ಚಿತ್ತಾಪುರ: ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸರ್ಕಾರದ ಸಂಬಳ ತೆಗೆದುಕೊಳ್ಳುವದಷ್ಟೇ ನಮ್ಮ ಕೆಲಸ ಎಂದು ಶಿಕ್ಷಕರು ಭಾವಿಸಿಕೊಳ್ಳಬಾರದು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ 2019-20ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ, ನಿವೃತ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಸರ್ಕಾರದ ಸಂಬಳದ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.

ಸಂಸ್ಕಾರ ಇಲ್ಲದವರ ಹತ್ತಿರ ಅಧಿಕಾರ, ವಿದ್ಯೆ ಹಾಗೂ ಹಣವಿದ್ದರೂ ಅಪಾಯಕಾರಿ ಎಂದು ಅನುಭವಿಗಳು ಹೇಳಿದ್ದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ವಿದ್ಯೆ ಜೊತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ನೀಡುವ ಸಂಸ್ಕಾರವು ವಿದ್ಯಾರ್ಥಿಗಳ ಬದುಕು ರೂಪಿಸುತ್ತದೆ ಎಂದರು.

ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ, ಪ್ರಶ್ನೆ ಕೇಳುವುದನ್ನು ಕಲಿಸಿಕೊಡಬೇಕು. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಇಲ್ಲ. ಆದರೆ ಪರೀಕ್ಷೆಯಲ್ಲಿ ನಾನು ಅನುತ್ತೀರ್ಣ ಆಗ್ತೀನಿ ಎನ್ನುವ ಭಯ ಇದೆ. ಅದಕ್ಕಾಗಿ ಶಿಕ್ಷಕರು ಅಂತಹ ಭಯವನ್ನು ತೆಗೆದು ಹಾಕಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವ ಹಾಗೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಪ್ರತಿಭೆಗಳು ಇರುತ್ತವೆ. ಅಂತಹ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಶಿಕ್ಷಣ ಕಡ್ಡಾಯ ಎನ್ನುವ ಘೋಷಣೆ ಇಲ್ಲಿಯವರೆಗೂ ಇತ್ತು. ಈಗ ಗುಣಮಟ್ಟದ ಶಿಕ್ಷಣ ಕಡ್ಡಾಯ ಎನ್ನುವುದು ಚಾಲ್ತಿಯಲ್ಲಿದೆ. ಶಿಕ್ಷಕರು ಬದಲಾಗಬೇಕು. ನಾಡಿನ ಶ್ರೇಷ್ಠ ಶಿಕ್ಷಕ ಎಂದು ಕರೆಯುವ ಡಾ| ಎಸ್‌. ರಾಧಾಕೃಷ್ಣನ್‌ ರಾಷ್ಟ್ರಪತಿಯಾಗಿದ್ದರು. ಆದ್ದರಿಂದ ರಾಷ್ಟ್ರಪತಿ ಹುದ್ದೆಗಿಂತಲೂ ಶಿಕ್ಷಕರ ಜವಾಬ್ದಾರಿ ಶ್ರೇಷ್ಠ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಶಿಕ್ಷಕರು ಅನೇಕ ಬೇಡಿಕೆಗಳನ್ನು ಇಡುತ್ತಿರಿ. ಆದರೆ ಶಾಲೆಯಲ್ಲಿರುವ ಸಮಸ್ಯೆಗಳ ಕುರಿತು ಎಸ್ಟಿಮೇಟ್ ನೀಡುವಾಗ ಅರ್ಧಮರ್ಧ ನೀಡುತ್ತೀರಿ. ಶಾಲೆಯಲ್ಲಿ ಶೌಚಾಲಯ ಇಲ್ಲ ಎಂದು ಮನವಿ ಮಾಡುತ್ತೀರಿ. ಅದೇ ವೇಳೆ ಶೌಚಾಲಯಕ್ಕೆ ನೀರು ಬೇಕಿದೆ ಎಂದು ಎಸ್ಟಿಮೇಟ್‌ನಲ್ಲಿ ತಿಳಿಸೋದಿಲ್ಲ. ಹೀಗಾಗಿ ಸಂಬಂಧಪಟ್ಟ ಶಾಲೆಯ ಮುಖ್ಯಶಿಕ್ಷಕರು ಸರಿಯಾದ ಮಾಹಿತಿ ನೀಡಬೇಕು. ಕಳೆದ ಬಾರಿ ನಮ್ಮ ಸರ್ಕಾರ ಇತ್ತು. ಕೆಲಸ ಮಾಡಿಕೊಳ್ತಾ ಇದ್ದೀವಿ. ಆದರೆ ಇದೀಗ ನಮ್ಮ ಸರ್ಕಾರ ಇಲ್ಲ. ಜಗಳ ಮಾಡಿ ಆದರೂ ಅಭಿವೃದ್ಧಿ ಕೆಲಸಗಳನ್ನು ಮಾಡ್ತೀನಿ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ವಿದ್ಯಾರ್ಥಿನಿ ಮಹೇಶ್ವರಿ ಮಾತನಾಡಿದರು.

ಕ್ಷೇತ್ರ ಶಿಕ್ಷಾಣಾಧಿಕಾರಿ ಶಂಕ್ರಮ್ಮ ಡವಳಗಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೆಳೆ ಅತ್ತುತ್ತಮ ಮತ್ತು ನಿವೃತ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಜಿಪಂ ಸದಸ್ಯ ಶಿವರುದ್ರ ಭೀಣಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಮುಖಂಡರಾದ ಭೀಮಣ್ಣ ಸಾಲಿ, ಮುಕ್ತಾರ ಪಟೇಲ್, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಅಬ್ದುಲ್ ರಸೂಲ್, ರಾಜಶೇಖರ ತಿಮ್ಮನಾಕ್‌, ಚಂದು ಪವಾರ, ಈರಣ್ಣ ಕೆಂಭಾವಿ, ಬಾಬರ್‌ ಪಟೇಲ್, ಮಹಾಂತೇಶ ಪಂಚಾಳ, ಶರಣಗೌಡ ಪಾಟೀಲ, ಹೆಚ್.ವೈ. ರಡ್ಡೇರ್‌, ದೇವಿಂದ್ರರೆಡ್ಡಿ ದುಗನೂರ, ಪ್ರಕಾಶ ನಾಯಿಕೋಡಿ, ದೇವಪ್ಪ ನಂದೂರಕರ್‌, ಸುರೇಶ ಸರಾಫ್‌, ರೇವಣಸಿದ್ದಪ್ಪ ಮಾಸ್ತಾರ್‌ ಇದ್ದರು.

ಮಲ್ಲಿಕಾರ್ಜುನ ಸೇಡಂ ಸ್ವಾಗತಿಸಿದರು, ಸಂತೋಷ ಶಿರನಾಳ ನಿರೂಪಿಸಿದರು. ಅಬ್ದುಲ್ ಸಲೀಂ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next