ಎಂ.ಡಿ ಮಶಾಖ
ಚಿತ್ತಾಪುರ: ಪಟ್ಟಣದ 23 ವಾರ್ಡ್‌ಗಳ ಚುನಾವಣೆ ಫಲಿತಾಂಶ ಹೊರಬಿದ್ದು ಒಂದು ವರ್ಷವೇ ಕಳೆದರೂ ಇಲ್ಲಿಯವರೆಗೆ ಚುನಾಯಿತ ಸದಸ್ಯರ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಿಕೊಳ್ಳಬೇಕು ಎಂಬ ಗೊಂದಲ ಸಾರ್ವಜನಿಕರಲ್ಲಿ ಉಂಟಾಗಿದೆ.
ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಆಕಾಂಕ್ಷಿಗಳಿಗೆ ಅಧಿಕಾರ ಭಾಗ್ಯ ಈಗಲೂ ದೂರವೇ ಉಳಿದಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ. ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ಸದ್ಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನನೆಗುದ್ದಿಗೆ ಬಿದ್ದಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಪಟ್ಟಿಯನ್ನು ಫಲಿತಾಂಶ ಪ್ರಕಟವಾದ 2018 ಸೆ.3ರಂದೇ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಫಲಿತಾಂಶದ ಚಿತ್ರಣ ನಿಚ್ಚಳವಾದ ಬಳಿಕ ಸೆ.6ರಂದು ಪರಿಷ್ಕೃತ ಮೀಸಲು ಪಟ್ಟಿ ಪ್ರಕಟಿಸಲಾಯಿತು. ಪರಿಷ್ಕೃತ ಮೀಸಲು ಪಟ್ಟಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ತಡೆ ಬಿದ್ದಿದೆ.
ಒಟ್ಟು 23 ವಾರ್ಡ್ ಹೊಂದಿರುವ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 18, ಬಿಜೆಪಿ 5 ಸ್ಥಾನ ಗಳಿಸಿವೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದೆ. ಅಧ್ಯಕ್ಷ ಸ್ಥಾನಕ್ಕೆ (ಬಿಸಿಎ) ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಒಬ್ಬರು, ಉಪಾಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ) ಸಂಬಂಧಿಸಿದಂತೆ ಒಬ್ಬರು ಆಗುತ್ತಾರೆ. ಆದರೆ ಅಧ್ಯಕ್ಷ-ಉಪಾಧ್ಯಕ್ಷ ಯಾರಾಗುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಪ್ರಸಕ್ತ ಮೀಸಲಿಗೆ ನ್ಯಾಯಾಲಯದ ತಡೆ ಇದೆ. ಚುನಾಯಿತ ಸದಸ್ಯರು ಮಾತ್ರ ಮೀಸಲಾತಿ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಸಾಲು ಸಾಲು ಸಮಸ್ಯೆ: ಕಳೆದ ಒಂದು ವರ್ಷದಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಸ-ಕಡ್ಡಿ, ತ್ಯಾಜ್ಯ ಕಂಡುಬರುತ್ತಿರುವುದು ಒಂದೆಡೆಯಾದರೇ, ಮತ್ತೊಂದೆಡೆ ಚರಂಡಿಗಳ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಪಟ್ಟಣದ ವೆಂಕಟೇಶ್ವರ ಕಾಲೋನಿ, ಗಣೇಶ ಕಾಲೋನಿ, ಇಂದಿರಾನಗರ, ಕೆಳಗೇರಿ, ಹೋಳಿಕಟ್ಟಾ, ಜನತಾ ಚೌಕ್, ಆಸರ್ ಮೋಹಲ್ಲಾ ಸೇರಿದಂತೆ ಇತರೆ ಕಾಲೋನಿಗಳಲ್ಲಿ ಹಂದಿ, ನಾಯಿಗಳ ಕಾಟ ವೀಪರಿತವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಹೊಸ ಸದಸ್ಯರು ಮಾತ್ರ ಮೀಸಲು ಬಾರದೇ ಅತಂತ್ರರಾಗಿದ್ದಾರೆ.
ಅಧಿಕಾರಿಗಳ ಬಳಿ ತಮ್ಮ ವಾರ್ಡ್ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.