ಚಿತ್ತಾಪುರ: ಕೆಲಸ ಅರಸಿ ಪಟ್ಟಣ ಹಾಗೂ ಹೊರ ರಾಜ್ಯಕ್ಕೆ ತೆರಳಿದ್ದ ಬಹುತೇಕ ಜನರು ಲಾಕ್ ಡೌನ್‌ನಿಂದಾಗಿ ಕೆಲಸವಿಲ್ಲದೇ ಸ್ವಗ್ರಾಮಗಳಿಗೆ ವಾಪಸ್ಸಾಗುತ್ತಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಪಡೆಯಲು ಉತ್ಸುಕರಾಗಿದ್ದಾರೆ.
ಲಾಕ್‌ಡೌನ್‌ಗೂ ಮುನ್ನ ತಾಲೂಕಿನಲ್ಲಿ ನರೇಗಾ ಯೋಜನೆ ಪ್ರಗತಿ ಮಂದಗತಿಯಲ್ಲಿತ್ತು. ಕಾರ್ಮಿಕರ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೀಗ ಹಳ್ಳಿಗಳಲ್ಲೇ ಉದ್ಯೋಗ ಪಡೆಯಲು ಕೂಲಿಕಾರರು ಗ್ರಾಮ ಪಂಚಾಯಿತಿಗಳಿಗೆ ಬರುತ್ತಿದ್ದು, ಉದ್ಯೋಗ ಖಾತ್ರಿ ಜಾಬ್‌ಕಾರ್ಡ್ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಯೋಜನೆಯಡಿ ಪ್ರತಿ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಉದ್ಯೋಗ ಲಭ್ಯವಿದೆ. ಗ್ರಾ.ಪಂಗೆ ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಕೆಲಸ ಸಿಗುತ್ತದೆ. ದಿನಕ್ಕೆ 275ರೂ. ವೇತನ ನೀಡಲಾಗುತ್ತದೆ. ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಕೆಲಸ ಮಾಡಿದ ದಿನಗಳ ವೇತನವನ್ನು 15 ದಿನಗಳೊಳಗೆ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುತ್ತದೆ. ವೈಯಕ್ತಿಕ ಕಾಮಗಾರಿ ಸೇರಿದಂತೆ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕೆರೆ ಹೂಳೆತ್ತುವುದು ಮುಂತಾದ ಕಾಮಗಾರಿಗಳು ನರೇಗಾ ಯೋಜನೆಯಡಿ ನಡೆಯುತ್ತಿವೆ.
ನರೇಗಾ ಯೋಜನೆಯಲ್ಲಿ ತಾಲೂಕಿನ 33,235 ಕುಟುಂಬಗಳ ಪೈಕಿ 64,443 ಮಂದಿ ಜಾಬ್ ಕಾರ್ಡ್ ಪಡೆದಿದ್ದಾರೆ. ಲಾಕ್‌ಡೌನ್ ನಂತರ 6,286 ಕುಟುಂಬಗಳ ಪೈಕಿ 3583 ಜನರು ಜಾಬ್‌ಕಾರ್ಡ್ ಪಡೆದಿದ್ದಾರೆ ಎಂದು ತಾ.ಪಂ ವ್ಯವಸ್ಥಾಪಕ ಅಮೃತ ಕ್ಷೀರಸಾಗರ ಮಾಹಿತಿ ನೀಡಿದ್ದಾರೆ. ತಾಲೂಕಿನ ಸಾತನೂರ, ಡೋಣಗಾಂವ, ಹೊಸ್ಸುರ್, ಭಂಕಲಗಿ, ಯಾಗಾಪುರ, ಭೀಮನಳ್ಳಿ, ಅಳ್ಳೋಳ್ಳಿ, ಹಲಕಟ್ಟಾ, ಕಮರವಾಡಿ, ಮಾಲಗತ್ತಿ, ರಾವೂರ, ಗುಂಡಗುರ್ತಿ, ಪೇಠಶಿರೂರ, ದಂಡೋತಿ, ಅಲ್ಲೂರ (ಬಿ) ಸೇರಿದಂತೆ ಮುಂತಾದ ಕಡೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಪ್ರಾರಂಭವಾಗಿವೆ.
ಬೆಂಗಳೂರಿನಲ್ಲಿ ಮನೆ ಕಟ್ಟುವ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ನಂತರ ವಾರ ಪೂರ್ತಿ ಮಾಡಿದ ಕೆಲಸದ ಹಣ ನೀಡಿ, ವಾಪಸ್ ಕಳುಹಿಸಿದರು. ಇಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಲಗಳ ಬದು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದೇನೆ. ಜೀವನ ನಡೆಸಲು ಸಾಕಾಗುವಷ್ಟು ವೇತನ ದೊರೆಯುತ್ತಿದೆ. ಮತ್ತೆ ಬೆಂಗಳೂರಿಗೆ ಹೋಗುವ ಮನಸ್ಸು ಇಲ್ಲ.
ದ್ಯಾವಣ್ಣ ಅಳ್ಳೋಳ್ಳಿ ,
ಕೂಲಿ ಕಾರ್ಮಿಕ
ಹೊಟ್ಟೆ ಪಾಡಿಗೆ ವಲಸೆ ಹೋಗಿದ್ದ ಕಾರ್ಮಿಕರು ಲಾಕ್‌ಡೌನ್ ನಿಂದಾಗಿ ಮರಳಿ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ. ಬಂದವರೆಲ್ಲರೂ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕಾಮಗಾರಿಗಳ ಅನುಷ್ಠಾನಕ್ಕೆ ಇದು ಪೂರಕವಾಗಿದೆ.
ಡಾ| ಬಸಲಿಂಗಪ್ಪ ಡಿಗ್ಗಿ,
ಇಒ, ತಾ.ಪಂ
ಎಂ.ಡಿ. ಮಶಾಖ