ಚಿತ್ತಾಪುರ: ಎಪಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಅಸೋಸಿಯೇಷನ್ ಮೂಲಕ ಹೆಚ್ಚುವರಿ ತೊಗರಿ ಖರೀದಿ ಮಾಡಲು ಒತ್ತಡ ಹೇರಬೇಕು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ 2016-17ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ 50ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಭವನ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕೋಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪ್ರತಿ ರೈತನಿಂದ ಹತ್ತು ಕ್ವಿಂಟಲ್ ತೊಗರಿ ಖರೀದಿ ಮಾಡಲು ಉದ್ದೇಶಿಸಿ 300ರೂ. ಬೆಂಬಲ ಬೆಲೆ
ನೀಡುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರವಿದ್ದಾಗ ಬೆಂಬಲ ಬೆಲೆ 500ರೂ. ನೀಡಿದೆ. ಈಗ ಅಷ್ಟೇ ಮೊತ್ತ ನಿಗದಿ ಮಾಡುವುದರ ಜೊತೆಗೆ ಈಗಿನ 10 ಕ್ವಿಂಟಲ್ ಬದಲು ಇನ್ನಷ್ಟು ಹೆಚ್ಚು ಖರೀದಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಹೇಳಿದರು.
ಎಪಿಎಂಸಿ ಪದ್ಧತಿ ಬ್ರಿಟಿಷ್ ಕಾಲದಿಂದಲೇ ಜಾರಿಗೆ ಬಂದಿದೆ. ಹತ್ತಿ ಖರೀದಿ ಮಾಡಿದ ಬ್ರಿಟಿಷರು ಮ್ಯಾಂಚೆಸ್ಟರ್‌ಗೆ ಕಳಿಸುತ್ತಿದ್ದರು. ನಂತರ ಎಪಿಎಂಸಿ ಕಾಯ್ದೆ ಬದಲಾಯಿತು. ಆದರೆ ಅವರ ಉದ್ದೇಶ ಹಾಗೆ ಮುಂದುವರೆದಿವೆ. ರೈತರ ಹಿತಾಸಕ್ತಿ ಕಾಪಾಡಲು ನಿರ್ಮಿಸಿರುವ ಎಪಿಎಂಸಿಗಳು ರೈತರ ಕುರಿತು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ನಾಲವಾರ, ಜಿ.ಪಂ ಸದಸ್ಯ ಶಿವರುದ್ರ ಭೀಣಿ, ತಾ.ಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ ಸಾಹೇಬ್, ಮನ್ಸೂರ ಪಟೇಲ್, ಮುಕ್ತಾರ ಪಟೇಲ್, ಚಂದ್ರಶೇಖರ ಸಾತನೂರ, ಶ್ಯಾಮ ಮುಕ್ತೇದಾರ, ಶೀಲಾ ಕಾಶಿ, ಪಾಶಾ ಖುರೇಶಿ, ಮಲ್ಲಿಕಾರ್ಜುನ ಪೂಜಾರಿ, ಎಂ.ಎ ರಶೀದ್, ಇಸ್ಮಾಯಿಲ್ ಸಾಬ್, ರಾಮಲಿಂಗ ಬಾನಾರ್, ಶರಣು ಡೋಣಗಾಂವ, ಶಿವಾಜಿ ಕಾಶಿ, ಶೇಖ ಬಬ್ಲು , ನಜೀರ ಆಡಕಿ ಇದ್ದರು.