Advertisement

ನಮ್ಮ ಸುತ್ತಲಿನ ಇತಿಹಾಸ ಅರಿಯಿರಿ

01:31 PM Aug 30, 2019 | Naveen |

ಚಿತ್ತಾಪುರ: ನಮ್ಮ ಸುತ್ತಲಿನ ಇತಿಹಾಸ ಪ್ರಸಿದ್ಧ ಸ್ಥಳ, ಪುಣ್ಯಕ್ಷೇತ್ರ ಮತ್ತು ಪರಂಪರೆಯನ್ನು ನಿರ್ಲಕ್ಷಿಸಿದ್ದೇವೆ. ಐತಿಹಾಸಿಕದ ಮಹತ್ವ ಅರಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ವಿಷಾದ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂಗಣ್ಣ ಆರ್‌. ಮಲ್ಕನ್‌ ರಚಿಸಿದ ಕೊಲ್ಲೂರ್‌ ಐತಿಹಾಸಿಕ ಗತ ವೈಭವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಚಿತ್ತಾಪುರ ತಾಲೂಕಿನ ಹಲವಾರು ಗ್ರಾಮಗಳು ಐತಿಹಾಸಿಕ ಹಿನ್ನೆಲೆ ಹೊಂದಿವೆ. ನಾಗಾವಿ, ಕೊಲ್ಲೂರ, ಸನ್ನತ್ತಿ ಸೇರಿದಂತೆ ಹಲವಾರು ಕಡೆ ಈ ಭಾಗದ ಶ್ರೀಮಂತ ಇತಿಹಾಸ ಕಾಣಸಿಗುತ್ತದೆ. ಆದರೆ ಈ ಕುರಿತು ಅರಿಯಲು ಈಗಿನ ಸರ್ಕಾರ ಅಥವಾ ಸಮಾಜವಾಗಲಿ ಆಸಕ್ತಿ ತೋರುತ್ತಿಲ್ಲ ಎಂದರು.

ಪ್ರಸ್ತುತ ದಿನದಲ್ಲಿ ಪ್ರತಿಯೊಬ್ಬರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಓದುವ ಹವ್ಯಾಸವನ್ನೇ ಕಳೆದುಕೊಂಡಿದ್ದಾರೆ. ಈ ಭಾಗದ ಇತಿಹಾಸ, ಕಲೆ, ಸಂಸ್ಕೃತಿ, ಆಹಾರ, ನಡೆ-ನುಡಿ ಬಗ್ಗೆ ಏನು ಗೊತ್ತಿಲ್ಲ. ಬರೀ ಹಿರಿಯರು ಆಚರಿಸಿಕೊಂಡು ಬರುತ್ತಿದ್ದಾರೆ. ನಾವು ಅದನ್ನೇ ಪಾಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೇ ತಮ್ಮ ಸುತ್ತಲಿನ ಇತಿಹಾಸ ಅರಿಯದೇ ಹಾಗೆ ಉಳಿದುಕೊಳ್ಳುವ ಸಂಭವ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸಕಾರರಿಗೆ, ಬರಹಗಾರರಿಗೆ, ಲೇಖಕರಿಗೆ ನಾವು ಗೌರವಿಸಬೇಕು. ನಾಗಾವಿ ನಾಡಿನ ಕುರಿತು ಸರ್ಕಾರಿ ಪಠ್ಯಕ್ರಮದಲ್ಲಿ ಸೇರಿಸುವ ಕುರಿತು ಕೆಲವೊಂದು ತಾಂತ್ರಿಕ ಅಡಚಣೆಗಳಿವೆ. ಆದರೆ ಈ ಭಾಗದ ಕುರಿತು ಪುಸ್ತಕ ಪ್ರಕಟಣೆಗೆ ಯಾರಾದರೂ ಮುಂದೆ ಬಂದರೆ ಅದಕ್ಕೆ ಬೇಕಾಗುವ ಹಣವನ್ನು ಸರ್ಕಾರಿ ಅನುದಾನದಲ್ಲಿ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ನಿವೃತ್ತ ಮುಖ್ಯಗುರು ಲಿಂಗಣ್ಣ ಆರ್‌. ಮಲ್ಕನ್‌ ಮಾತನಾಡಿದರು. ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್‌ ಪುಸ್ತಕ ಪರಿಚಯಿಸಿದರು. ಅಖೀಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ರಾಜ್ಯಾಧ್ಯಕ್ಷೆ ಡಾ| ವಿಶಾಲಾಕ್ಷ್ತ್ರೀ ವಿ. ಕರಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ್‌ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ್, ತಾಪಂ ಅಧ್ಯಕ್ಷ ಜಗಣ್ಣಗೌಡ, ಜಯಪ್ರಕಾಶ ಕಮಕನೂರ್‌, ಸುನೀಲ್ ದೊಡ್ಮನಿ, ಶೀಲಾ ಕಾಶಿ, ಮಹ್ಮದ್‌ ರಸೂಲ್ ಮುಸ್ತಫಾ, ಇಸ್ಮಾಯಿಲ್ ಸಾಬ್‌, ರಮೇಶ ಮರಗೋಳ, ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ, ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ, ತಾಪಂ ಇಒ ಡಾ| ಬಸಲಿಂಗಪ್ಪ ಡಿಗ್ಗಿ, ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ, ತಾಪಂ ಸದಸ್ಯ ಭಾಗಪ್ಪ ಕೊಲ್ಲೂರ್‌, ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕೊಲ್ಲೂರ್‌ ಗ್ರಾಪಂ ಅಧ್ಯಕ್ಷ ಕೃಷ್ಣರೆಡ್ಡಿ ಇದ್ದರು. ಕಾಶಿರಾಯ ಕಲಾಲ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next