ಚಿತ್ತಾಪುರ: ತಾಲೂಕಿನ ಮೋಗಲಾ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಉಲ್ಬಣಗೊಂಡಿದ್ದ ವಾಂತಿ-ಭೇದಿ ರೋಗ ನಿಯಂತ್ರಣಕ್ಕೆ ಬಂದಿದ್ದು, ತಾತ್ಕಾಲಿಕ ವೈದ್ಯಕೀಯ ಚಿಕಿತ್ಸೆ ಕೇಂದ್ರ ತೆರೆಯಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸುರೇಶ ಮೇಕಿನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಹತ್ತಿರ ಚರಂಡಿ ನೀರು ನಿಲ್ಲುತ್ತದೆ. ಅದೇ ನೀರು ಅಂತರ್ಜಲದಲ್ಲಿ ಸೇರುತ್ತಿದೆ. ನೀರು ಪೂರೈಕೆ ಮಾಡುವ ಪೈಪ್ ಗಳು ಕೆಲವೆಡೆ ಒಡೆದು ಹಾಳಾಗಿವೆ. ಬಚ್ಚಲು ನೀರು ಪೈಪ್‌ಗ್ಳಲ್ಲಿ ಸೇರುತ್ತಿದೆ. ಹೀಗಾಗಿ ಗ್ರಾಮಕ್ಕೆ ಅಶುದ್ಧ ನೀರು ಪೂರೈಕೆ ಆಗುತ್ತಿದೆ. ಈ ಕಲುಷಿತ ನೀರು ಸೇವನೆಯೇ ವಾಂತಿ, ಭೇದಿ ಉಲ್ಬಣಕ್ಕೆ ಕಾರಣವೆಂದು ತಿಳಿಸಿದರು.
ಗ್ರಾಮದಲ್ಲಿ ವಾಂತಿ-ಭೇದಿ ರೋಗ ಉಲ್ಬಣಿಸಿದ್ದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. 36 ಜನರು ವಾಂತಿ-ಭೇದಿ ರೋಗಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ. ಆದರೆ ವೈದ್ಯರ ಪ್ರಕಾರ 19 ರೋಗಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು.
ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ತಾಲೂಕು ಆರೋಗ್ಯಾಧಿಕಾರಿ ಡಾ| ಸುರೇಶ ಮೇಕಿನ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಪೂಜಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅ ಧಿಕಾರಿ ಅಬ್ದುಲ್ ನಬಿ, ಹಿರಿಯ ಭೂ ವಿಜ್ಞಾನಿ ದೀಪಕ್ ಕೇನಾಯಿ, ಜೆಇ ಭೀಮಸೇನ್ ಕುಲಕರ್ಣಿ, ಅಬ್ದುಲ್ ಮಜೀದ್, ಕಾಂಗ್ರೆಸ್ ಮುಖಂಡರಾದ ರಾಜಶೇಖರ ತಿಮ್ಮನಾಯಕ, ನಿಂಬೇಣ್ಣಪ್ಪ ಸಾಹು ಕೋರವಾರ ಮತ್ತಿತರ ಮುಖಂಡರು ಮೋಗಲಾ ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರು ಸರಬರಾಜಾಗುವ ಪೈಪ್‌ಗ್ಳನ್ನು ಪರಿಶೀಲಿಸಿದರು.
ಗ್ರಾ.ಪಂ ನಿರ್ಲಕ್ಷ್ಯ :ಗ್ರಾಮದಲ್ಲಿ ಕುಡಿವ ನೀರಿನ ಪೈಪ್ ಗಳು ಕೆಲವೆಡೆ ಒಡೆದಿವೆ. ಎಲ್ಲೆಂದರಲ್ಲಿ ಗಿಡಗಂಟಿ ಬೆಳೆದಿವೆ. ಚರಂಡಿ ಸ್ವತ್ಛತೆ ಮಾಯವಾಗಿದೆ. ಇದಕ್ಕೆಲ್ಲ ಗ್ರಾಮ ಪಂಚಾಯತಿ ಆಡಳಿತ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮದ ಶರಣು ಸಾಹು ತೊನಸನಳ್ಳಿ ಆರೋಪಿಸಿದ್ದಾರೆ.