ಚಿತ್ತಾಪುರ: ಪಟ್ಟಣದ ಕಲಬುರಗಿ ರಸ್ತೆಯಲ್ಲಿರುವ ಜೆಸ್ಕಾಂ ಇಲಾಖೆಯ ಟಿಸಿ ರಿಪೇರಿ ಕೇಂದ್ರಕ್ಕೆ ಹಾಗೂ ಫಾರಂ ಬೈಟ್ ಅಗ್ರಿಕಲ್ಟರ್ ಮೆಶೀನರಿ ದಾಸ್ತಾನು ಗೋದಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ 2 ಅಂಗಡಿಗಳ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಆ.9ರ ಶುಕ್ರವಾರ ನಡೆದಿದೆ.
ನವರಂಗ ಏಜೆನ್ಸಿ ಅವರು ವಿದ್ಯುತ್ ಸಂಪರ್ಕಕ್ಕೆ ಅಳವಡಿಸುವ ಟಿಸಿ ರಿಪೇರಿ ಸೆಂಟರ್‌ನಲ್ಲಿ ಸುಮಾರು 45 ಲಕ್ಷ ರೂ. ಮೌಲ್ಯದ ಸಾಮಗ್ರಿಗಳಾದ ಟಿಸಿ, ರಿಪೇರಿ ಕಿಟ್, ಆಯಿಲ್ ಸೇರಿದಂತೆ ಎಲ್ಲ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಟ್ರಾನ್ಸ್ ಫಾರಂ ಮಾಲಕರು ತಿಳಿಸಿದ್ದಾರೆ.
ಪಕ್ಕದಲ್ಲಿರುವ ಫಾರಂ ಬ್ರೈಟ್ ಅಗ್ರಿಕಲ್ಟರ್ ಮಶೀನರಿ ದಾಸ್ತಾನು ಗೋದಾಮಿನಲ್ಲಿ ಚಿಕ್ಕ ಟ್ಯಾಕ್ಟರ್‌ಗಳು, ಬೆಳೆ ಕಟಿಂಗ್ ಮಷಿನ್‌ಗಳು, ಸ್ಪೇರ್ ಪಾರ್ಟ್ ಗಳು ಸೇರಿದಂತೆ ಸುಮಾರು 57 ಲಕ್ಷ ರೂ. ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ಮಾಲೀಕ ಮಹ್ಮದ್ ಆರಿಫ್ ತಿಳಿಸಿದ್ದಾರೆ.
ಬೆಂಕಿ ತಗಲಿರುವ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ನವರಂಗ ಏಜೆನ್ಸಿ ಮಾಲೀಕ ಅರುಣ ಕುಮಾರ ರೆಡ್ಡಿ ಹಾಗೂ ಮಹ್ಮದ್ ಆಸೀಫ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಚಿತ್ತಾಪುರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ತಿಗಡಿ, ಕೈಂ ಪಿಎಸ್‌ಐ ಚಂದ್ರಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.