ಚಿತ್ರಾಪುರ: ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಂಗಳವಾರ ಧ್ವಜಾರೋಹಣ ನೆರವೇರಿತು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕುಡುಪು ವೇ| ಮೂ| ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ| ಮೂ| ಕೃಷ್ಣರಾಜ ತಂತ್ರಿಯವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ಮಧ್ಯಾಹ್ನ ಮಹಾಪೂಜೆಯಾಗಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಮಾ. 5ರಿಂದ 13ರ ವರೆಗೆ ಕ್ಷೇತ್ರದ ಬ್ರಹ್ಮಕಲಶೋತ್ಸವವು ಅತ್ಯಂತ ಸುವ್ಯವಸ್ಥಿತವಾಗಿ ನಡೆದು ಸಹಸ್ರಾರು ಭಕ್ತರು ಶ್ರೀ ದುರ್ಗಾಪರಮೇಶ್ವರಿಯ ದರ್ಶನಗೈದರು. ಅನ್ನದಾನ, ಉಪಹಾರ, ವೈವಿಧ್ಯಮಯ ಧಾರ್ಮಿಕ ಸಂಸ್ಕೃತಿ ಪಸರಿಸುವ ನಾಟಕ, ಗಾಯನ, ನೃತ್ಯ ಕಾರ್ಯಕ್ರಮಗಳು ಭಕ್ತರ ಮನ ಸೂರೆಗೊಂಡವು.
ಸಭೆ, ಸಾಂಸ್ಕೃತಿಕ, ಧಾರ್ಮಿಕ ಹೀಗೆ ಪ್ರತಿಯೊಂದು ಕಾರ್ಯ ಕ್ರಮವು ಯಾವುದೇ ವಿಳಂಬವಿಲ್ಲದೆ ನಿಗದಿತ ಸಮಯಕ್ಕೆ ಸರಿಯಾಗಿ ನಡೆಸುವ ಮೂಲಕ ಇಲ್ಲಿನ ಸಮಿತಿಯ ಸಮಯ ಪರಿಪಾಲನೆ ಮೆಚ್ಚುಗೆಗೆ ಪಾತ್ರವಾಯಿತು ಎಂದು ದೇಗುಲದ ಪ್ರಕಟನೆ ತಿಳಿಸಿದೆ.