ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ನಗರದ ಸ್ಟೇಡಿಯಂ ರಸ್ತೆಯ ಎಂ.ಎಂ. ಪ್ರೌಢಶಾಲಾ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನೆಗೆ ಇನ್ನೊಂದೇ ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಅಧಿಕಾರಿಗಳು ಕಾನೂನು ಸುವ್ಯವಸ್ಥೆ, ಶೋಭಾಯಾತ್ರೆಗೆ ರಸ್ತೆಯ ಸಿದ್ಧತೆ, ಆಹಾರ, ಪಾನೀಯ ತಪಾಸಣೆಗೆ ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಪ್ರಮುಖರು ನಗರದ ಅಲಂಕಾರದಲ್ಲಿ ಮಗ್ನರಾಗಿದ್ದಾರೆ.
ಕೋಟೆ ನಗರಿ ಈಗ ಝಗಮಗಿಸುತ್ತಿದ್ದು, ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ರಾತ್ರಿಯಾಯಿತೆಂದರೆ ಬೀದಿಗಳು ಮಿನುಗುವ ಬೆಳಕಿನಿಂದ ಕಂಗೊಳಿಸುತ್ತಿವೆ. ಪ್ರಮುಖ ರಸ್ತೆಯಲ್ಲಿರುವ ವೃತ್ತಗಳು ಹಾಗೂ ಅಲ್ಲಿರುವ ವಹಾಪುರುಷರ ಪುತ್ಥಳಿಗಳಿಗಳಿಗೆ ಹೊಸ ಮೆರುಗು ಬಂದಿದೆ.
ದುರ್ಗದ ದೊರೆ ಮದಕರಿ ನಾಯಕರ ದೊಡ್ಡ ಪ್ರತಿಮೆಗೆ ಹಿನ್ನೆಲೆಯಾಗಿ ಕೋಟೆ ಹಾಗೂ ಬತೇರಿ, ನೆಲದಲ್ಲಿ ಫಿರಂಗಿ ಇಟ್ಟಿರುವುದು ಅತ್ಯಂತ ಆಕರ್ಷಣೀಯವಾಗಿದೆ. ರಸ್ತೆಯಲ್ಲಿ ಓಡಾಡುವವರು ನಿಂತು ನೋಡುವುದು, ಸೆಲ್ಫಿ ತೆಗೆದುಕೊಳ್ಳುತ್ತಾ ಖುಷಿಪಡುತ್ತಿದ್ದಾರೆ. ಅಲ್ಲಿಂದ ತುಸು ದೂರದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಯಾವುದೇ ರೀತಿಯ ಕೇಸರಿ ಅಲಂಕಾರ ಮಾಡುವುದು ಬೇಡ ಎಂದು ಕೆಲವು ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದವು. ಇಲ್ಲಿ ಬುದ್ಧಿವಂತಿಕೆ ಉಪಯೋಗಿಸಿರುವ ಸಂಘಟಕರು, ಅಂಬೇಡ್ಕರ್ ಪ್ರತಿಮೆಗೆ ಹಿನ್ನೆಲೆಯಾಗಿ ದೊಡ್ಡ ಗಾತ್ರದ ಸಂವಿಧಾನದ ತೆರೆದ ಪುಸ್ತಕ ಇಟ್ಟು ಅಲಂಕಾರ ಮಾಡಿ ಹೊಸತನ ತೋರಿದ್ದಾರೆ.
ಗಾಂಧಿ ವೃತ್ತವಂತೂ ಕೇಸರಿ ಬಾವುಟಗಳ ಚಪ್ಪರದಿಂದ ಕಂಗೊಳಿಸುತ್ತಿದೆ. ಒನಕೆ ಓಬವ್ವ ವೃತ್ತದಲ್ಲೂ ಕೇಸರಿ ಬಾವುಟ ಹಾಗೂ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಹಾಗೂ ಚಿತ್ರದುರ್ಗ ಪ್ರವೇಶಿಸುವಾಗ ಸಿಗುವ ಕನಕ ವೃತ್ತದಲ್ಲಿರುವ ಕನಕದಾಸರ ಪ್ರತಿಮೆಗೆ ಅದ್ಭುತವಾಗಿ ಶೃಂಗಾರ ಮಾಡಿರುವುದು ಕಣ್ಮನ ಸೆಳೆಯುತ್ತಿವೆ.
ಕಳೆದ ಒಂದು ವಾರದಿಂದ ಸುಮಾರು ಒಂದು ಸಾವಿರ ಭಜರಂಗದಳ ಕಾರ್ಯಕರ್ತರು ನಗರದ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಗರ ಮೂಲದ ಕಲಾವಿದರು ಪ್ರತಿಮೆಗಳಿಗೆ ವಿಶೇಷ ಮೆರುಗು ನೀಡಿದ್ದಾರೆ. ಅಲಂಕಾರಕ್ಕಾಗಿ ಸುಮಾರು 15 ಸಾವಿರ ಮೀಟರ್ ಕೇಸರಿ ಬಟ್ಟೆ ಬಳಸಲಾಗಿದ್ದು, 500ಕ್ಕೂ ಹೆಚ್ಚು ದೊಡ್ಡ ಧ್ವಜಗಳು ರಾರಾಜಿಸುತ್ತಿವೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಹರಿದು ಬರುವ ಜನಸಾಗರಕ್ಕೆ 30ಕ್ಕೂ ಹೆಚ್ಚು ಸಂಸ್ಥೆಗಳು ಊಟ, ನೀರಿನ ವ್ಯವಸ್ಥೆ ಮಾಡಲು ತಯಾರಿ ನಡೆಸಿವೆ. ಮೆರವಣಿಗೆ ಮಾರ್ಗದುದ್ದಕ್ಕೂ ಸಂಘಟನೆ ಸೂಚನೆಯಂತೆ ನೀರು, ಮಜ್ಜಿಗೆ, ಪುಳಿಯೊಗರೆ, ಪಲಾವ್ ಪ್ರಸಾದ ವಿತರಣೆಯಾಗಲಿದೆ.