Advertisement

ಕೋವಿಡ್ ಮುಕ್ತವಾಗುವತ್ತ ಜಿಲ್ಲೆ ಹೆಜ್ಜೆ

01:29 PM Jun 10, 2020 | Naveen |

ಚಿತ್ರದುರ್ಗ: ತೀವ್ರ ಆತಂಕಕ್ಕೆ ಒಳಗಾಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೊದಲ ಹಂತದಲ್ಲಿ ಬಂದ ಕೋವಿಡ್ ವೈರಸ್‌ ಎಂಬ ಮಹಾಮಾರಿಯನ್ನು ಮಣಿಸಿ ಕೋವಿಡ್ ಮುಕ್ತವಾಗುವತ್ತ ಹೆಜ್ಜೆ ಇಟ್ಟಿದೆ.

Advertisement

ಜಿಲ್ಲಾಸ್ಪತ್ರೆ ಬಳಿ ಇರುವ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಜನ ಸೋಂಕಿತರು ಗುಣಮುಖರಾಗಿ ಮಂಗಳವಾರ ಬಿಡುಗಡೆ ಹೊಂದುವ ಮೂಲಕ ಕೋವಿಡ್‌ ಆಸ್ಪತ್ರೆ ಈಗ ಸೋಂಕಿತರಿಂದ ಮುಕ್ತವಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 15 ಕೊರೊನಾ ಸೋಂಕಿತರು ಈಗ ಇಲ್ಲಿಂದ ಗುಣಮುಖರಾಗಿ ತೆರಳಿದ ಬಗ್ಗೆ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದರು.

ಕೋವಿಡ್‌-19 ಸೋಂಕಿನಿಂದ ಗುಣಮುಖರಾದ ನಾಲ್ವರನ್ನು ಮಂಗಳವಾರ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಧಿಕಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎಚ್‌.ಜೆ. ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ತುಳಸಿರಂಗನಾಥ, ಡಿವೈಎಸ್‌ಪಿ ಪಾಂಡುರಂಗ ಇನ್ನಿತರರು ಹೂಗುತ್ಛ ನೀಡಿ ಬೀಳ್ಕೊಟ್ಟರು.

ಕೋವಿಡ್‌ ವೈರಸ್‌ ಸೋಂಕು ದೃಢಪಟ್ಟಿದ್ದ ಪಿ-2237, ಪಿ-2248, ಪಿ-2253 ಮತ್ತು ಪಿ-2831 ಸೇರಿದಂತೆ ನಾಲ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದರು. ಇದುವರೆಗೆ ನಾಲ್ಕು ಹಂತಗಳಲ್ಲಿ ಸೋಂಕಿತರನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗ ಕೋವಿಡ್‌ ಆಸ್ಪತ್ರೆಯಲ್ಲಿ ಸದ್ಯಕ್ಕೆ ಯಾವುದೇ ರೋಗಿಗಳಿಲ್ಲ. ಚಳ್ಳಕೆರೆ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರಪ್ರದೇಶ ಮೂಲದ ಕಾರ್ಮಿಕರು ಕೂಡ ಗುಣಮುಖರಾಗಿದ್ದು, ಬುಧವಾರ ಬಿಡುಗಡೆಯಾಗಲಿದ್ದಾರೆ. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆ ಕೋವಿಡ್ ಮುಕ್ತ ಜಿಲ್ಲೆಯಾಗುವತ್ತ ಸಾಗುತ್ತಿದೆ.

339 ಜನರ ವರದಿ ಬಾಕಿ
ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸಂಬಂಧಿಸಿದಂತೆ ಒಟ್ಟು 339 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ತುಳಸಿರಂಗನಾಥ ತಿಳಿಸಿದ್ದಾರೆ. ಇದುವರೆಗೆ 3641 ಜನರ ಮಾದರಿ ಸಂಗ್ರಹಿಸಲಾಗಿದೆ. 3174 ಜನರ ವರದಿ ನೆಗೆಟಿವ್‌ ಬಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ 40 ಜನರಲ್ಲಿ ಕೋವಿಡ್‌ ವೈರಸ್‌ ಸೋಂಕು ಧೃಡಪಟ್ಟಿದೆ. 27 ಜನರು ಗುಣಮುಖರಾಗಿದ್ದು, 12 ಜನ ಚಳ್ಳಕೆರೆ ಕೋವಿಡ್‌ ಹೆಲ್ತ್‌ಕೇರ್‌ ಸೆಂಟರ್‌ನಲ್ಲಿ ಹಾಗೂ ಒಬ್ಬರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Advertisement

ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ನಾವು ಒಂದು ಹಂತದ ಗೆಲುವು ಸಾಧಿಸಿದ್ದೇವೆ. ಮುಂದೆ ಬರುವ ಸಂದರ್ಭಗಳನ್ನು ನಿಭಾಯಿಸಲು ನಮ್ಮ ವೈದ್ಯಕೀಯ ತಂಡ ಸಿದ್ಧವಿದೆ.
ಡಾ| ಎಚ್‌.ಜೆ. ಬಸವರಾಜಪ್ಪ,
ಜಿಲ್ಲಾ ಶಸ್ತ್ರಚಿಕಿತ್ಸಕ

Advertisement

Udayavani is now on Telegram. Click here to join our channel and stay updated with the latest news.

Next