Advertisement

ರಾಸು ಜಾತ್ರೆಯಲ್ಲಿ ದನಗಳ ಸಂಖ್ಯೆ ಕ್ಷೀಣ!

01:24 PM Mar 11, 2020 | Naveen |

ಚಿತ್ರದುರ್ಗ: ಹಿಂದೊಂದು ಕಾಲವಿತ್ತು. ಊರ ತುಂಬಾ, ಮನೆ ತುಂಬಾ ಜನ, ಜಾನುವಾರುಗಳಿರುತ್ತಿದ್ದವು. ಆದರೆ, ಈಗ ಎಲ್ಲವೂ ಬದಲಾಗಿದೆ. ಊರಲ್ಲಿ ಜನವೂ ಇಲ್ಲ. ಮನೆಯಲ್ಲಿ ದನವೂ ಇಲ್ಲ ಎನ್ನುವ ಸ್ಥಿತಿಗೆ ಬಂದು ನಿಂತಿದ್ದೇವೆ.

Advertisement

ಹೌದು, ಇದಕ್ಕೆ ಇಂಬು ನೀಡುವಂತೆ ಕಳೆದ ಹತ್ತು ದಿನಗಳಿಂದ ಚಿತ್ರದುರ್ಗ ಹೊರವಲಯದ ಸೀಬಾರದ ಬಳಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ದನಗಳ ಸಂಖ್ಯೆ ಕಡಿಮೆಯಾಗಿವೆ. ಹಿಂದೆಲ್ಲಾ ಇಲ್ಲಿ ದನಗಳ ಪರಿಷೆ ನಡೆಯುತ್ತಿದ್ದರೆ ಕಾಲಿಡಲು ಜಾಗವಿಲ್ಲದಷ್ಟು ಎತ್ತುಗಳು, ಹೋರಿಗಳು, ಕರುಗಳು ಬರುತ್ತಿದ್ದವು. ಮಾರಲು, ಕೊಳ್ಳಲು ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು, ಸಾಟಿ ಮಾಡುವವರು ಇಲ್ಲಿ ಸೇರುತ್ತಿದ್ದರು. ಆದರೆ, ಈ ವರ್ಷದ ಜಾತ್ರೆ ಮಾತ್ರ ತುಂಬಾ ನೀರಸವಾಗಿ ಸಾಗುತ್ತಿತ್ತು. ನಾಲ್ಕೈದು ಸಾವಿರ ದನಗಳು ಸೇರುತ್ತಿದ್ದ ಜಾಗದಲ್ಲಿ ಈಗ ಕೇವಲ 300 ಜತೆ ಅಂದರೆ 600 ರಾಸುಗಳು ಮಾತ್ರ ಭಾಗವಹಿಸಿದ್ದವು. ಇದರಲ್ಲಿ ಕಳೆದ ಹತ್ತು ದಿನಗಳಲ್ಲಿ 100 ಜತೆ ಮಾತ್ರ ವ್ಯಾಪಾರ ವಹಿವಾಟು ನಡೆದಿದೆ.

ನೀರಿನ ಸಮಸ್ಯೆಗೆ ನಿಂತಿತ್ತು ಜಾತ್ರೆ: ಜಿಲ್ಲೆಯಲ್ಲಿ ಬಾಧಿಸುತ್ತಿರುವ ಶಾಶ್ವತ ನೀರಿನ ವ್ಯವಸ್ಥೆಗೆ ಸೀಬಾರದ ದನಗಳ ಜಾತ್ರೆ ಕೂಡಾ ನಿಂತಿತ್ತು. 2017 ಹಾಗೂ 2019 ರಲ್ಲಿ ತೀವ್ರ ಬರಗಾಲದ ಕಾರಣಕ್ಕೆ ಇಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಎತ್ತುಗಳು, ರೈತರು ಬರುವುದರಿಂದ ನೀರು ಒದಗಿಸಲು ಕಷ್ಟ ಎಂಬ ಕಾರಣಕ್ಕೆ ಜಾತ್ರೆಯನ್ನು ಮಾತ್ರ ನಡೆದ ದನಗಳ ವಹಿವಾಟಿನ ಜಾತ್ರೆ ನಿಲ್ಲಿಸಲಾಗಿತ್ತು. ಜತೆಗೆ ರೈತರು ಕೂಡಾ ಕಂಗಾಲಾಗಿ ತಮ್ಮ ಬಳಿಯಿದ್ದ ಒಂದೆರಡು ರಾಸುಗಳಿಗೂ ಮೇವು, ನೀರು ಒದಗಿಸಲಾಗದೆ ಮಾರಿಕೊಳ್ಳುವ ಸ್ಥಿತಿಗೆ ಬಂದಿದ್ದರು.

ಜತಗೆ ಜೀರೋ ಕಲ್ಟಿವೇಶನ್‌, ಟ್ರ್ಯಾಕ್ಟರ್‌, ಟಿಲ್ಲರ್‌ಗಳ ಆರ್ಭಟದ ಕಾರಣಕ್ಕೆ ಇಂದು ಮನೆಗಳಲ್ಲಿ ಎತ್ತುಗಳ ಬದಲಿಗೆ ಟ್ರ್ಯಾಕ್ಟರ್‌ ಇಟ್ಟುಕೊಳ್ಳುವ ಸ್ಥಿತಿಗೆ ಒಕ್ಕಲುತನ ಬಂದು ನಿಂತಿದೆ.

ಜಾತ್ರೆಗಿದೆ 65 ವರ್ಷಗಳ ಇತಿಹಾಸ: ಮಧ್ಯ ಕರ್ನಾಟಕ ಕೃಷಿ ಪ್ರಧಾನ ಭಾಗ. ಇಲ್ಲಿನ ರೈತರು ಸುಗ್ಗಿ ನಂತರ ಎತ್ತುಗಳ ಕೊಡು, ಕೊಳ್ಳುವ ವಿನಿಮಯ ಮಾಡುತ್ತಾರೆ. ಅದಕ್ಕೆ ಪೂರಕವಾಗಿ ಹಿಂದಿನ ಜಯದೇವ ಗುರುಗಳು ಹಾಗೂ ಜಯವಿಭವ ಗುರುಗಳು ಶಿವರಾತ್ರಿ ನಂತರ ದನಗಳ ಜಾತ್ರೆ ನಡೆಯುವಂತೆ ಮಾಡಿದ್ದರು. ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳ ಸ್ಮರಣಾರ್ಥ ಈಗ 65ನೇ ವರ್ಷದ ಜಾತ್ರೆ ನಡೆದಿದೆ. ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಅದನ್ನು ಮುರುಘಾ ಶರಣರು ಮುಂದುವರಿಸಿದ್ದು, ಇದಕ್ಕಾಗಿ 36 ಎಕರೆ ವಿಶಾಲ ಜಾಗವನ್ನು ಮೀಸಲಿಟ್ಟಿದ್ದಾರೆ. ಹತ್ತು ದಿನಗಳ ಕಾಲ ಇಲ್ಲಿ ರೈತರು ಹಾಗೂ ರಾಸುಗಳು ಬೀಡು ಬಿಡುವುದರಿಂದ ಸಾಕಷ್ಟು ಮರಗಿಡಗಳನ್ನು ಬೆಳೆಸಿ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಮುಂದೆ ಕೂಡಾ ಇಲ್ಲಿ ನೀರಿನ ಸಮಸ್ಯೆ ಬಾ ಧಿಸದಿರಲಿ ಎಂಬ ಕಾರಣಕ್ಕೆ 90 ಲಕ್ಷ ರೂ. ವೆಚ್ಚದ ಚೆಕ್‌ಡ್ಯಾಂ ನಿರ್ಮಿಸುತ್ತಿದ್ದಾರೆ ಎಂದು ಗುತ್ತಿನಾಡು ಗ್ರಾಮದ ಜಿ.ಎಂ. ಪ್ರಕಾಶ್‌ ಮಾಹಿತಿ ನೀಡಿದರು.

Advertisement

ರೈತಸ್ನೇಹಿ ದನಗಳ ಜಾತ್ರೆ
ಮುರುಘಾ ಮಠದ ಆಶ್ರಯದಲ್ಲಿ ನಡೆಯುವ ಈ ಜಾತ್ರೆ ರೈತಸ್ನೇಹಿಯಾಗಿದೆ. ಇಲ್ಲಿಗೆ ಬರುವ ಒಂದು ಜತೆ ಎತ್ತುಗಳಿಗೆ 50 ರೂ. ಪ್ರವೇಶ ಶುಲ್ಕ ಹಾಗೂ ಮಾರಾಟ ಮಾಡಿದ ನಂತರ ಮಾರಿದವರು, ಖರೀದಿ ಸಿದವರು ತಲಾ 50 ರಂತೆ 100 ರೂ. ನೀಡಿದರಾಯಿತು. ಇಲ್ಲಿಗೆ ಬರುವ ರೈತರಿಗಾಗಿ ರಾತ್ರಿ ವೇಳೆಗೆ ಬೆಳಕಿನ ವ್ಯವಸ್ಥೆ, ನೀರಿನ ವ್ಯವಸ್ಥೆ ಇರುತ್ತದೆ. ತುಮಕೂರು, ಬೆಂಗಳೂರು, ಮಾಗಡಿ, ಮಧುಗಿರಿ, ತಮಿಳುನಾಡು, ಆಂಧ್ರಪ್ರದೇಶ, ವದ್ದಿನಕಲ್‌, ಬಳ್ಳಾರಿ, ಹೊಸಪೇಟೆ ಮತ್ತಿತರೆಡೆಗಳಿಂದ ಜರ್ಸಿ, ಗಿರ್‌, ಡಾಗಿ, ಮುದ್ರ, ಅಮೃತ್‌ ಮಹಲ್‌, ಹಳ್ಳಿಕಾರ ಸೇರಿದಂತೆ ವಿವಿಧ ತಳಿಯ ರಾಸುಗಳು ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದು, ಕರಿಯಮ್ಮನಹಟ್ಟಿ ಮಂಜುನಾಥ್‌ ಎಂಬುವವರ ಬಳಿ 2.60 ಲಕ್ಷ ರೂ. ಮೌಲ್ಯದ ಎತ್ತುಗಳು ಆಕರ್ಷಣಿಯವಾಗಿವೆ. ಇದನ್ನು ಹೊರತುಪಡಿಸಿ 1.60 ಲಕ್ಷದವರೆಗೆ ಎತ್ತುಗಳ ವ್ಯವಹಾರ ನಡೆದಿದೆ. ಸೀಬಾರ ಜಾತ್ರೆ ಮುಗಿದ ನಂತರ ಜೊಡದಗುಡ್ಡದಲ್ಲಿ ನಡೆಯುವ ದನಗಳ ಜಾತ್ರೆಗೆ ಇಲ್ಲಿನ ಬಹುತೇಕ ರೈತರು ತೆರಳುತ್ತಾರೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next