Advertisement

ಯೋಗಕ್ಕೆ ಜಾತಿ-ಧರ್ಮದ ಹಂಗಿಲ್ಲ: ಗೋಪಾಲಸ್ವಾಮಿ

04:36 PM Jun 23, 2019 | Naveen |

ಚಿತ್ರದುರ್ಗ: ಶಿವ ಯೋಗದ ಮೊದಲ ಗುರು. ಶಿವನಿಂದ ಆರಂಭವಾದ ಯೋಗ ಇಂದು ವಿಶ್ವ ವ್ಯಾಪಿಯಾಗಿದ್ದು ದಿನ ನಿತ್ಯ ಯೋಗ ಮಾಡಿ ರೋಗದಿಂದ ದೂರ ಇರಬೇಕು ಎಂದು ಜೆಡಿಎಸ್‌ ವಕ್ತಾರ ಡಿ. ಗೋಪಾಲಸ್ವಾಮಿ ನಾಯಕ ಹೇಳಿದರು.

Advertisement

ಇಲ್ಲಿನ ಐತಿಹಾಸಿಕ ಕೋಟೆ ಆವರಣದಲ್ಲಿ ಕೋಟೆ ವಾಯುವಿಹಾರಿಗಳ ಸಂಘ, ಪತಂಜಲಿ ಯೋಗ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಯೋಗದ ಮಹತ್ವ ಅರಿತಿರುವ ವಿಶ್ವದ 180 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ ಎಂದರೆ ಅದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ. ಯೋಗಕ್ಕೆ ಜಾತಿ-ಧರ್ಮದ ಹಂಗಿಲ್ಲ. ಮಗುವಿನಿಂದ ಹಿಡಿದು ನೂರು ವರ್ಷದವರೂ ಯೋಗ ಮಾಡಬಹುದು. ಯೋಗ ಮಾಡುವುದರಿಂದ ಅನೇಕ ಕಾಯಿಲೆಗಳಿಂದ ದೂರವಿರಬಹುದು. ಪ್ರಾಣಾಯಾಮಕ್ಕೆ ಹೃದಯಾಘಾತವನ್ನು ತಡೆಗಟ್ಟುವ ಶಕ್ತಿಯಿದೆ ಎಂದರು.

ಸೂರ್ಯ ಉದಯಿಸುವ ಮುನ್ನವೇ ಯೋಗ ಮಾಡಿದರೆ ಉತ್ತಮ. ಇದರಿಂದ ಮನಸ್ಸಿನ ಗೊಂದಲ, ಜಂಜಾಟ, ಒತ್ತಡ ನಿವಾರಣೆಯಾಗಿ ಮನಸ್ಸು ತಿಳಿಯಾಗಿರುತ್ತದೆ. ಯೋಗದ ಜೊತೆಗೆ ಶುದ್ಧ ಗಾಳಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಿತ ಆಹಾರ ಕೂಡ ಯೋಗದಷ್ಟೇ ಮುಖ್ಯ. ಯೋಗವನ್ನು ನಿರಂತರವಾಗಿ ಮಾಡುತ್ತಿದ್ದರೆ ಸಿಟ್ಟು ಮನುಷ್ಯನಿಂದ ದೂರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್‌. ಸತ್ಯಣ್ಣ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ದಿನಕ್ಕೆ 20 ಗಂಟೆ ಬಿಡುವಿಲ್ಲದೆ ಕೆಲಸ ಮಾಡುತ್ತಾರೆಂದರೆ ಯೋಗಾಭ್ಯಾಸವನ್ನು ಮೈಗೂಡಿಸಿಕೊಂಡಿರುವುದೇ ಕಾರಣ. ಹಿಂದಿನ ಕಾಲದಲ್ಲಿ ಜನರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಈಗ ಎಲ್ಲರ ಜೀವನ ಯಾಂತ್ರಿಕವಾಗಿದೆ. ಕಟ್ಟಿಗೆ ಒಲೆ ಹೋಗಿ ಕುಕ್ಕರ್‌, ಮಿಕ್ಸಿ, ಗ್ರೈಂಡರ್ ಬಂದಿರುವುದರಿಂದ ಹೆಣ್ಣುಮಕ್ಕಳ ಕೈಗೆ ಕೆಲಸವಿಲ್ಲದಂತಾಗಿದೆ. ಇದರಿಂದ ನಾನಾ

Advertisement

ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ವಿಷಾದಿಸಿದರು.

ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನ್ನ, ನೀರು, ಗಾಳಿಯನ್ನು ಹೇಗೆ ಪ್ರತಿ ನಿತ್ಯ ಸೇವಿಸುತ್ತೇವೆಯೋ ಅದೇ ರೀತಿ ನಿತ್ಯ ಯೋಗ ಮಾಡಬೇಕು. ಯೋಗವನ್ನು ಒಂದು ದಿನ ಮಾಡಿ ಸುಮ್ಮನಾಗಬಾರದು. ದಿನಕ್ಕೆ ಒಂದು ಗಂಟೆಯನ್ನಾದರೂ ಯೋಗಕ್ಕೆ ಮೀಸಲಿಟ್ಟರೆ ಕಾಯಿಲೆಗಳಿಂದ ದೂರವಿರಬಹುದು ಎಂದರು.

ಮನುಷ್ಯನಿಗೆ ಕಾಯಿಲೆ ಬಂದಾಗ ವೈದ್ಯರ ಬಳಿಗೆ ಹೋಗಿ ಸಾವಿರಾರು ರೂ.ಗಳನ್ನು ಖರ್ಚು ಮಾಡುವ ಬದಲು ದಿನವೂ ಯೋಗಾಭ್ಯಾಸ ಮಾಡಿದರೆ ಜೀವನಪರ್ಯಂತ ಆರೋಗ್ಯದಿಂದ ಇರಬಹುದು. ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಬೇಕು. ಮಿತವಾಗಿ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ತಿಳಿಸಿದರು.

ನಗರಸಭೆ ಸದಸ್ಯ ಶ್ರೀನಿವಾಸ್‌, ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ

ಜಯಣ್ಣ, ಉಪಾಧ್ಯಕ್ಷ ವಿ. ಚನ್ನಬಸಪ್ಪ, ನಿರ್ದೇಶಕರುಗಳಾದ ಕೂಬಾ ನಾಯ್ಕ, ಉಡುಸಾಲಪ್ಪ, ಈಶ್ವರಪ್ಪ, ಡಿ.ಬಿ. ನರಸಿಂಹಪ್ಪ, ಲತಾ, ರತ್ನಮ್ಮ, ವನಜಾಕ್ಷಿ, ಕಮಲಾ, ಜಯಶ್ರೀ, ಯೋಗ ಶಿಕ್ಷಕರುಗಳಾದ ಹೇಮಾವತಿ, ನಾಗರಾಜ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next