Advertisement

ಹೆಣ್ಣು ಭ್ರೂಣ ಹತ್ಯೆ ತಡೆಗೆ ಶ್ರಮಿಸಿ

11:41 AM Jun 23, 2019 | Naveen |

ಚಿತ್ರದುರ್ಗ: ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ಕರೆಯುತ್ತಾರೆ. ಆದರೆ ಬಹುತೇಕ ಖಾಸಗಿ ನರ್ಸಿಂಗ್‌ ಹೋಂಗಳು ಇದಕ್ಕೆ ಅಪವಾದವಾಗಿ ನಡೆದುಕೊಳ್ಳುತ್ತಿವೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆಗಳ ಆಶ್ರಯದಲ್ಲಿ ‘ಭೇಟಿ ಬಜಾವೊ ಭೇಟಿ ಪಡಾವೊ’ ಕಾರ್ಯಕ್ರಮದಡಿ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳ ಮುಖ್ಯಸ್ಥರು, ವೈದ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಣದಾಸೆಗೆ ಹೆಣ್ಣು ಶಿಶು ಹತ್ಯೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಹೆಣ್ಣು ಭ್ರೂಣ ಹತ್ಯೆಯನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿವೆ. ಸಮಾಜದಲ್ಲಿ ಈ ದಂಧೆ ಗುಪ್ತಗಾಮಿನಿಯಂತೆ ನಡೆಯುತ್ತಿದೆ. ಹಾಗಾಗಿ ನಾವು ಮನುಷ್ಯರಾ ಎಂದು ಪ್ರಶ್ನಿಕೊಳ್ಳಬೇಕಾಗಿದೆ ಎಂದರು.

ದುಡ್ಡು ಕೊಟ್ಟರೆ ಎಲ್ಲವೂ ಅಂಗೈಯಲ್ಲೇ ಸಿಗುತ್ತಿದೆ. ಇಂದಿನ ವ್ಯವಸ್ಥೆಯನ್ನು ನೋಡಿದರೆ ಈ ವೃತ್ತಿಯನ್ನು ಅಧೋಗತಿಗೆ ತಂದಿದ್ದೇವೆ ಎನ್ನಿಸುತ್ತದೆ. ವೈದ್ಯರಿಗೆ ಮೊದಲು ಇದ್ದಂತಹ ಗೌರವ ಈಗ ಇಲ್ಲ. ಪ್ರತಿ ಹೆಣ್ಣು ಕುಟುಂಬದ ದೇವತೆಆಗಿದ್ದು, ನಮ್ಮಲ್ಲಿ ಹೆಣ್ಣನ್ನು ಪಾರ್ವತಿ, ಸರಸ್ವತಿ, ಲಕ್ಷ್ಮೀ ಎಂದೆಲ್ಲ ಕರೆಯುತ್ತೇವೆ. ಹೆಣ್ಣು ಪೂಜನೀಯ ಸ್ಥಾನದಲ್ಲಿದ್ದರೂ ಭ್ರೂಣ ಹತ್ಯೆ ಅವ್ಯಾಹತವಾಗಿದೆ ಎಂದು ವಿಷಾದಿಸಿದರು.

ಮೂರು ತಿಂಗಳು, ಆರು ತಿಂಗಳು, ಒಂಭತ್ತು ತಿಂಗಳ ಸಂದರ್ಭದಲ್ಲಿ ಮಗುವಿಗೆ ತೊಂದರೆ ಇದ್ದರೆ ಪತ್ತೆ ಮಾಡುವುದಕ್ಕಾಗಿ ಮಾತ್ರ ಅಲಾó ಸೌಂಡ್‌ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಇಂದು ಗಂಡು, ಹೆಣ್ಣುಮಗುವಿನ ಪತ್ತೆಗಾಗಿ ಅಲಾó ಸೌಂಡ್‌ ಮಾಡುತ್ತಿರುವುದು ವಿಷಾದಕರ ಸಂಗತಿ. ನರ್ಸಿಂಗ್‌ ಹೋಮ್‌ ಇಲ್ಲದವರು ಕೂಡ ದುಡ್ಡಿಗಾಗಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಬೇರೆ ಬೇರೆ ದಂಧೆಯಂತೆ ಸಮಾಜದಲ್ಲಿ ಇದು ಕೂಡ ಒಂದು ದಂಧೆಯಾಗಿದೆ. ನಿಮ್ಮ ಮುಖಗಳು, ಒಳಮುಖಗಳೆಲ್ಲಾ ನನಗೆ ಚೆನ್ನಾಗಿ ಗೊತ್ತು. ಇದನ್ನು ನಾನು ಯಾವುದೇ ಸಂಶಯ ಇಲ್ಲದೇ ಘಂಟಾಘೋಷವಾಗಿ ಹೇಳುತ್ತೇನೆ. ಶಿಶು ಹತ್ಯೆ ಮಾಡಿದ ವೈದ್ಯರಿಗೆ ಪಾಪಪ್ರಜ್ಞೆ ಕಾಡದೇ ಬಿಡದು. ಅದಕ್ಕೆ ತಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಹಿಂದಿನ ಜನತೆ ಅಶಿಕ್ಷಿತರಾಗಿದ್ದರೂ ಲಿಂಗಾನುಪಾತ ಪ್ರಮಾಣ ಚೆನ್ನಾಗಿಯೇ ಇತ್ತು. ಆದರೆ ಈಗ ಪುರುಷರಿಗಿಂತ ಮಹಿಳೆಯರ ಪ್ರಮಾಣ ಕಡಿಮೆಯಾಗಿದೆ. ಹೆಣ್ಣು ಇಲ್ಲದೆ ಸಮಾಜ ಬೆಳೆಯಲು ಸಾಧ್ಯವಿಲ್ಲ. ಯಾರೇ ಮದುವೆಯಾದರೂ ಹೆಣ್ಣನ್ನೇ ಮದುವೆ ಆಗಬೇಕು. ಹಸುವನ್ನು ಮದುವೆ ಮಾಡಿಕೊಳ್ಳಲಾಗುವುದಿಲ್ಲ. ಹಾಗಾಗಿ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಶಿಶು ಹತ್ಯೆ ತಡೆಯಬೇಕು. ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಸ್ವಚ್ಛತೆ ಕಾಪಾಡಬೇಕು. ಕಡ್ಡಾಯವಾಗಿ ಕಾನೂನು ಪಾಲಿಸಬೇಕು. ಬಡವ, ಮಧ್ಯಮ, ಶ್ರೀಮಂತ ಎಲ್ಲರಿಗೂ ಒಂದೇ ರೀತಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಪರವಾನಗಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್. ಪಾಲಾಕ್ಷ, ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಒ. ಸುಧಾ, ಸಂಪನ್ಮೂಲ ವ್ಯಕ್ತಿ ಡಾ| ಅಖೀಲ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next