ಚಿತ್ರದುರ್ಗ: ಇಂದು ಬಹುತೇಕ ಯುವಕರು ಮಾದಕ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರಬಂದು ವ್ಯಸನಮುಕ್ತರಾಗಿ ಭವಿಷ್ಯ ಕಟ್ಟಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಬೇಕು ಎಂದು ಡಯಟ್ ಪ್ರಾಚಾರ್ಯ ಕೆ. ಕೋದಂಡರಾಮ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಿಗೆ ಆಯೋಜಿಸಿದ್ದ ಮಾದಕ ವಸ್ತುವಿನ ನಿಯಂತ್ರಣದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಯುವ ಸಮೂಹ ದೇಶದ ಸಂಪನ್ಮೂಲ. ಸುಶಿಕ್ಷಿತ, ವ್ಯಸನಮುಕ್ತ, ದೈಹಿಕ ಸದೃಢತೆ ಹಾಗೂ ಮಾನಸಿಕ ಸದೃಢತೆಯಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದು. ಇದರಿಂದ ಕಳ್ಳತನ, ಕೊಲೆ, ದರೋಡೆ ಮತ್ತಿತರ ಸಮಾಜಬಾಹಿರ ಘಟನೆಗಳಿಗೆ ಇತಿಶ್ರೀ ಹಾಡಬಹುದು ಎಂದರು.
ಇಂದು ಹದಿಹರೆಯದವರು ಮಾದಕ ವ್ಯಸನಿಗಳಾಗುತ್ತಿರುವುದು ಬೇಸರ ಸಂಗತಿ. ಹೀಗಾಗಿ ಶಿಕ್ಷಕರಿಗೆ ಈ ಬಗ್ಗೆ ಅರಿವು ಮೂಡಿಸಿದರೆ ಅವರು ಮಕ್ಕಳನ್ನು ಸರಿದಾರಿಗೆ ತರುತ್ತಾರೆ ಎಂಬ ವಿಶ್ವಾಸದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿಕ್ಷಕರು ಮಕ್ಕಳಿಗೆ ಜೀವನದ ಪಾಠವನ್ನು ತಿಳಿಸಿಕೊಡಬೇಕು. ಶಿಕ್ಷಕರು ಪಠ್ಯಕ್ರಮದ ಜೊತೆಗೆ ಮಕ್ಕಳಿಗೆ ನೈತಿಕತೆ, ಮಾನವೀಯ ಮೌಲ್ಯಗಳು ಹಾಗೂ ಸಮಾಜದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಬೇಕು ಎಂದು ಕರೆ ನೀಡಿದರು.
ತರಬೇತಿ ಕೇಂದ್ರದ ಸಂಯೋಜಕಿ ಶೈಲಶ್ರೀ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಾದ್ಯಂತ 37 ಮಾದಕ ವ್ಯಸನ ಮುಕ್ತ ಕೇಂದ್ರಗಳನ್ನು ಸ್ಥಾಪಿಸಿದ್ದು, ಮಾದಕ ವ್ಯಸನಿಗಳಿಗೆ ತರಬೇತಿ, ಚಿಕಿತ್ಸೆ, ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಶಿಕ್ಷಣ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರಿಗೆ ಮಾದಕ ವಸ್ತು ನಿಯಂತ್ರಣ ಕುರಿತು ಅರಿವು ಮೂಡಿಸಲಾಗುತ್ತಿದೆ. ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದು.
ಯುವಕರು ಮೋಜು, ಮಸ್ತಿ ಚಟದಿಂದ ವ್ಯಸನಕ್ಕೆ ಒಳಗಾಗುತ್ತಾರೆ. ಈ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಬೇಕು ಎಂದರು. ಉಪನ್ಯಾಸಕ ಆರ್. ನಾಗರಾಜ್ ಮಾತನಾಡಿ, ಮಾದಕ ವ್ಯಸನಿಗಳು ದೇಶಕ್ಕೆ ಮಾರಕ ಹಾಗೂ ಕುಟುಂಬಕ್ಕೆ ಹೊರೆ. ಪಠ್ಯಕ್ರಮದ ಜೊತೆಗೆ ಸ್ವಸ್ಥ ಸಮಾಜ ನಿರ್ಮಿಸಲು ಶಿಕ್ಷಕರು ಸಹಕರಿಸಬೇಕು. ಪ್ರೀತಿಯಿಂದಲೇ ಮಕ್ಕಳನ್ನು ವ್ಯಸನದಿಂದ ಮುಕ್ತಗೊಳಿಸಬೇಕು. ಜೊತೆಗೆ ಅವರಲ್ಲಿ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸತ್ಯನಾರಾಯಣ, ದೈಹಿಕ ಶಿಕ್ಷಣ ಪರಿವೀಕ್ಷಕ ಶೇಖರಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾರಾಣಿ ಸೇರಿದಂತೆ ಎಲ್ಲ ತಾಲೂಕುಗಳ ಶಿಕ್ಷಕರು ಭಾಗವಹಿಸಿದ್ದರು.