ಚಿತ್ರದುರ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಗಂಡಿನಷ್ಟೇ ಸರಿಸಮನಾಗಿ ಕೆಲಸ ಮಾಡುತ್ತಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಎಲ್ಲಾ ಅಧಿಕಾರಿಗಳು ಮಹಿಳೆಯರೇ ಇರುವುದು ಖುಷಿಯ ವಿಚಾರ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಯಾವುದೇ ಕ್ಷೇತ್ರಗಳಲ್ಲಿ ಹೆಣ್ಣು ಕೆಲಸ ಮಾಡುವುದಕ್ಕೆ ಹಿಂಜರಿಯುವ ಕಾಲ ಈಗಿಲ್ಲ. ಪುರುಷರು ನಿರ್ವಹಿಸುವ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ ಎಂದರು.
ಸದ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಮಹಿಳೆಯರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ನಿಜಕ್ಕೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಈ ವಿದ್ಯಮಾನ ಜಿಲ್ಲೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಬಣ್ಣಿಸಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಮಹಿಳೆ ಮನೆ ಕೆಲಸಕ್ಕೆ ಮಾತ್ರ ಸೀಮಿತವಲ್ಲ. ಮಹಿಳೆ ಇಡೀ ಜಗತ್ತಿಗೆ ಸರಿಸಾಟಿಯಾಗಿ ಇದ್ದಾಳೆ. ಅಮೆರಿಕಕ್ಕೆ ಸ್ವಾತಂತ್ರ್ಯ ಬಂದು 300 ವರ್ಷವಾದರೂ ಈವರೆಗೆ ಮಹಿಳೆ ಅಧ್ಯಕ್ಷೆಯಾಗಿರುವ ಇತಿಹಾಸ ಇಲ್ಲ. ಆದರೆ ನಮ್ಮ ಭಾರತದಲ್ಲಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಆಗಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾರೆ ಎಂದರು.
ಜಿಲ್ಲಾಧಿಕಾರಿ ಆರ್. ವಿನೊತ್ ಪ್ರಿಯಾ ಮಾತನಾಡಿ, ಸಮಾನತೆ ಎನ್ನುವುದು ಮತ್ತೂಬ್ಬರಿಂದ ಪಡೆಯುವುದಲ್ಲ, ನಾವೇ ಪಡೆದುಕೊಳ್ಳುವುದು. ಸಮಾನತೆ ಪಡೆಯಬೇಕು ಎಂದರೆ ಹೆಣ್ಣುಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ತಾಯಂದಿರು ಮನೆಯಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯ ತೋರಬಾರದು. ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ಹೆಣ್ಣಿಗೆ ಗೌರವ ಕೊಡುವುದನ್ನು ಕಲಿಸಬೇಕು. ಇದರಿಂದ ಅತ್ಯಾಚಾರ ನಿಲ್ಲಿಸಬಹುದು. ಮನೆಯಲ್ಲಿ ತಾಯಂದಿರು ಹೆಣ್ಣು ಮಕ್ಕಳನ್ನು ಸ್ವಾತಂತ್ರವಾಗಿ ಬೆಳೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಹೆಣ್ಣು-ಗಂಡು ಎಂಬ ಭೇದಭಾವ ಹುಟ್ಟುವುದೇ ಮಹಿಳೆ ಗರ್ಭಾವಸ್ಥೆಯಲ್ಲಿ. ಹೆಣ್ಣು ಹುಟ್ಟಿದರೆ ಹೆಚ್ಚು ವೆಚ್ಚವಾಗುತ್ತದೆ ಎಂಬ ಮನೋಭಾವ ಇನ್ನೂ ಇದೆ. ಹೆಣ್ಣನ್ನು ಸ್ವತಂತ್ರವಾಗಿ ಬೆಳೆಸಬೇಕು. ಸಮಾಜಮುಖೀಯಾಗಿ ಬೆಳೆಸಲು ತಂದೆ-ತಾಯಿಯರು ಕೈಜೋಡಿಸಬೇಕು ಎಂದರು.
ರುಡ್‌ಸೆಟ್ ನಿರ್ದೇಶಕಿ ಜಿ. ಮಂಜುಳಾ, ನ್ಯಾಯವಾದಿ ಡಿ.ಕೆ. ಶೀಲಾ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷ ಲಿಂಗರಾಜು, ಜಿಪಂ ಸದಸ್ಯ
ಕೃಷ್ಣಮೂರ್ತಿ, ತಾಪಂ ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷ ಕೊಲ್ಲಿ ಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.