ಚಿತ್ರದುರ್ಗ: ತೀವ್ರ ನೀರಿನ ಅಭಾವ ಎದುರಿಸುತ್ತಾ, ಸದಾ ಬರಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಹಾಗೂ ಜಲ ಜಾಗೃತಿ ಮೂಡಿಸಲು ಶುಕ್ರವಾರ ಸಹಿ ಸಂಗ್ರಹ ಅಭಿಯಾನ ನಡೆಯಿತು.
ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮದಡಿ ಬಾಲಕರ ಸರ್ಕಾರಿ ಪಪೂ ಕಾಲೇಜು ಎದುರು ಸಹಿ ಸಂಗ್ರಹ ಹಮ್ಮಿಕೊಳ್ಳಲಾಗಿತ್ತು.
ಪೋಸ್ಟರ್‌ಗೆ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್. ವಿನೋತ್‌ಪ್ರಿಯಾ ಮಾತನಾಡಿ, ಸದಾ ಬರಪೀಡಿತವಾಗುತ್ತಿರುವ ಜಿಲ್ಲೆಯಲ್ಲಿ ನೀರನ್ನು ಸಂಗ್ರಹಿಸಿ ಸಂರಕ್ಷಿಸುವುದು ಮಾತ್ರ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದರು.
ಪ್ರತಿ ವರ್ಷ ಭೂಮಿ ಮೇಲೆ ಬೀಳುವ ಮಳೆ ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಮಳೆ ಕೊಯ್ಲು ಪದ್ಧತಿಯನ್ನು ಅನುಸರಿಸಬೇಕು. ಪ್ರತಿಯೊಬ್ಬರೂ ಮನೆಗಳಲ್ಲಿ ಈ ಪದ್ಧತಿ ಅಳವಡಿಸಿಕೊಂಡಾಗ ನೀರಿನ ಸಮಸ್ಯೆಗೆ ಸ್ವಲ್ಪಮಟ್ಟಿಗಾದರೂ ಪರಿಹಾರ ಕಂಡುಕೊಳ್ಳಬಹುದು. ಹೊಸದಾಗಿ ಮನೆ ಕಟ್ಟುವವರು ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಇದಕ್ಕೆ ಬೇಕಾದ ಸಾಲ ಸೌಲಭ್ಯ ನೀಡಲು ಬ್ಯಾಂಕುಗಳು ಮುಂದೆ ಬಂದಿವೆ. ಹೀಗಾಗಿ ಇದರ ಪ್ರಯೋಜನ ಪಡೆದುಕೊಂಡು ಅಮೂಲ್ಯವಾದ ನೀರನ್ನು ಉಳಿಸಿ ಮಿತವಾಗಿ ಬಳಸಬೇಕಿದೆ ಎಂದು ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ನೈಸರ್ಗಿಕವಾಗಿ ಸಿಗುವ ಸಂಪತ್ತು ನೀರು. ಅದನ್ನು ಪ್ರತಿಯೊಬ್ಬರು ಮಿತವಾಗಿ ಬಳಸಬೇಕಿದೆ. ಮರ-ಗಿಡಗಳನ್ನು ಕಡಿದು ಪ್ರಕೃತಿಯನ್ನು ನಾಶ ಮಾಡುತ್ತಿರುವ ಕಾರಣ ಸಕಾಲಕ್ಕೆ ಮಳೆಯಿಲ್ಲದೆ ಸಕಲ ಜೀವರಾಶಿಗಳು ತತ್ತರಿಸಿವೆ. ಆದ್ದರಿಂದ ಎಲ್ಲರೂ ನೀರನ್ನು ವ್ಯರ್ಥವಾಗಿ ಬಳಸದೆ ಸಂರಕ್ಷಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರು, ವಿದ್ಯಾರ್ಥಿಗಳು ಜಲಶಕ್ತಿ ಅಭಿಯಾನದಲ್ಲಿ ಸಹಿ ಮಾಡುವ ಮೂಲಕ ಜಲ ಸಂರಕ್ಷಣೆ ಕುರಿತು ಸಂಕಲ್ಪ ಮಾಡಿದರು. ಇಂಜಿನಿಯರ್ ಕಿರಣ್‌ಕುಮಾರ್, ಕಂದಾಯಾಧಿಕಾರಿ ನಾಸಿರ್, ಹೆಲ್ತ್ ಇನ್ಸ್‌ಪೆಕ್ಟರ್‌ಗಳಾದ ಸರಳಾ, ಬಾಬು ರೆಡ್ಡಿ, ಪರಿಸರ ಇಂಜಿನಿಯರ್ ಜಾಫರ್, ನಗರಸಭೆ ಸಿಬ್ಬಂದಿಗಳಾದ ರೇಣುಕಾ, ರಹಮತ್‌ವುನ್ನಿಸಾ ಮತ್ತಿತರರು ಇದ್ದರು.