Advertisement

ನಿರ್ಭೀತಿಯಿಂದ ಮತ ಚಲಾಯಿಸಿ: ಸತ್ಯಭಾಮ

03:37 PM Apr 11, 2019 | Naveen |

ಚಿತ್ರದುರ್ಗ: ವಿಕಲಚೇತನರು ಮತದಾನದಿಂದ ವಂಚಿತರಾಗದೆ ಮತ ಚಲಾಯಿಸಬೇಕು. ಈ ಮೂಲಕ ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಜಿಪಂ ಸಿಇಒ ಸಿ. ಸತ್ಯಭಾಮ ಕರೆ ನೀಡಿದರು.

Advertisement

ನಗರದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಆವರಣದಲ್ಲಿ ಜಿಲ್ಲಾ
ಸ್ವೀಪ್‌ ಸಮಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಮಾಡಲು ಬರುವ ವಿಕಲಚೇತನರಿಗೆ ಮತಗಟ್ಟೆಗಳಲ್ಲಿ ಅಗತ್ಯ
ಸೌಲಭ್ಯ ಕಲ್ಪಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಮತದಾನದ ಕುರಿತು ತರಬೇತಿ ನೀಡಲಾಗುತ್ತಿದೆ. ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ದಿಂದ ತರಬೇತಿ ಮತ್ತಿತರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಾತನಾಡಿ, ವಿಕಲಚೇತನರಿಗೆ ಒದಗಿಸಿರುವ ಸೌಲಭ್ಯ ಬಳಸಕೊಂಡು ಮತ ಚಲಾವಣೆ ಮಾಡಬೇಕು. ನಿಮ್ಮ ಸ್ನೇಹಿತರಿಗೂ ಮತ ಚಲಾಯಿಸುವಂತೆ ಪ್ರೋತ್ಸಾಹ
ನೀಡಬೇಕು. ಉದಾಸೀನ ತೋರದೆ ಮತದಾನ ಮಾಡಿ ಹಕ್ಕು ಚಲಾಯಿಸಬೇಕು.
ವಿಕಲಚೇತನರಿಗಾಗಿ ಮತದಾನ ಮಾಡಲು ಮತಗಟ್ಟೆಗಳಲ್ಲಿ ರ್‍ಯಾಂಪ್‌, ರೇಲಿಂಗ್ಸ್‌, ಗಾಲಿ ಕುರ್ಚಿ, ವಾಹನ ವ್ಯವಸ್ಥೆ, ಮಂದ ದೃಷ್ಟಿ ಹೊಂದಿದವರಿಗೆ ಭೂತಗನ್ನಡಿ, ದೃಷ್ಠಿ  ದೋಷ ಇರುವವರಿಗೆ ಬ್ರೈಲ್‌ ಲಿಪಿಯಲ್ಲಿ ಚುನಾವಣಾ ಮಾರ್ಗದರ್ಶಿ ಕೈಪಿಡಿ ನೀಡಲಾಗುವುದು, ಮತಗಟ್ಟೆಗಳಲ್ಲಿ ಬ್ರೈಲ್‌
ಬ್ಯಾಲೆಟ್‌ ಪೇಪರ್‌ ಇಡಲಾಗುವುದು. ಅದರ ಸಹಾಯದಿಂದ ಅಭ್ಯರ್ಥಿಯ ಕ್ರಮಸಂಖ್ಯೆ ತಿಳಿದು ಮತದಾನ ಮಾಡಬಹುದು. ಸುಗಮ ಮತದಾನಕ್ಕೆ ವಿಶೇಷ ಸಿಬ್ಬಂದಿಗಳ ನೆರವು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್‌ ಅ ಧಿಕಾರಿ
ಮಂಜುನಾಥ್‌ ಎಸ್‌. ನಾಡರ್‌, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ. ಶಂಕರಪ್ಪ, ಸ್ವೀಪ್‌ ಸಮಿತಿಯ ಬಷೀರ್‌, ಕಿವುಡ ಹಾಗೂ ಮೂಕರ ಸಂಘದ ಅಧ್ಯಕ್ಷ ಡಿ. ಅವಿನಾಶ್‌, ಶ್ವೇತಾ, ಸುರಕ್ಷಾ, ರವಿಕುಮಾರ್‌ ಇದ್ದರು.

Advertisement

ಪ್ರತಿಯೊಬ್ಬ ವಿಕಲಚೇತನರು ಏ. 18 ರಂದು ನಡೆಯಲಿರುವ ಮತದಾನ ಹಬ್ಬದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಇತರರಿಗೆ ಮಾದರಿಯಾಗಬೇಕು. ಒಂದು ಮತ ಒಬ್ಬ ಅಭ್ಯರ್ಥಿಯ ಗೆಲುವು-ಸೋಲನ್ನು ನಿರ್ಧರಿಸುತ್ತದೆ ಎಂಬುದನ್ನು ಅರಿತು ಮತದಾನ ಮಾಡಬೇಕು.
ಸಿ. ಸತ್ಯಭಾಮ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next