Advertisement

ಬಿರು ಬಿಸಿಲನ್ನೂ ಲೆಕ್ಕಿಸಿದೆ ಮೋದಿ ನೋಡೋಕೆ ಬಂದ್ರು

01:00 PM Apr 10, 2019 | Naveen |

ಚಿತ್ರದುರ್ಗ: ನಗರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಗೆ ವಿವಿಧೆಡೆಗಳಿಂದ ಜನ ಸಾಗರ ಹರಿದುಬಂದಿತ್ತು. ಮಧ್ಯಾಹ್ನ 2:30ಕ್ಕೆ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಕಂಡ ಕೂಡಲೇ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೋದಿ ಮೋದಿ ಎಂದು ಜೈಕಾರ ಹಾಕಿದರು.

Advertisement

ನರೇಂದ್ರ ಮೋದಿ ವೇದಿಕೆಗೆ ಆಗಮಿಸಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌ ಸೇರಿದಂತೆ ಮತ್ತಿತರರ ಕೈಕುಲುಕಿದರು. ನಂತರ ಸಮಾವೇಶದಲ್ಲಿ ಭಾಗವಹಿಸಿದ್ದವರತ್ತ ಕೈಬೀಸಿ ಅಭಿನಂದನೆ ಸ್ವೀಕರಿಸಿದರು.
ವಿಜಯ ಸಂಕಲ್ಪ ರ್ಯಾಲಿಗೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದಲ್ಲಿ ಭಾರೀ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ನಡೆದ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದ 200 ಮೀಟರ್‌ ಸುತ್ತಮುತ್ತ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ಭದ್ರತೆಗಾಗಿ 1500 ಪೊಲೀಸರು, 100 ಪಿಎಸ್‌ಐ,
ಸಿಪಿಐ, ಡಿವೈಎಸ್ಪಿ, 8 ಹೆಚ್ಚುವರಿ ಎಸ್ಪಿಗಳು, ಇಬ್ಬರು ಎಸ್ಪಿಗಳು, 20 ಮಂದಿ ಇರುವ 9 ಕೆಎಸ್‌ಆರ್‌ಪಿ ತುಕಡಿಗಳು, 9 ಎಎಸ್‌ಸಿ ತಂಡಗಳು, 1 ಬಿಡಿಡಿಎಸ್‌ ತಂಡ, 40 ಸದಸ್ಯರ ಬಿಎಸ್‌ಎಫ್‌ ಟೀಂ, 400 ಹೋಂ ಗಾರ್ಡ್ಸ್‌ಗಳನ್ನು ನಿಯೋಜಿಸಲಾಗಿತ್ತು.

ಮೂರು ಜಿಲ್ಲೆಗಳ ಲೋಕಸಭಾ ವ್ಯಾಪ್ತಿಯ ಕಾರ್ಯಕರ್ತರು, ಅಭಿಮಾನಿಗಳ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಈ ಎಲ್ಲ ಕಾರ್ಯಕರ್ತರಿಗೆ ಕುಡಿಯುವ ನೀರು, ಆಸನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ರ್ಯಾಲಿಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ 24 ಕಡೆ ಸೆಕ್ಟರ್‌ಗಳನ್ನು ತೆರೆಯಲಾಗಿತ್ತು. ವಿಭಾಗೀಯ ಸಹ ಪ್ರಭಾರಿ ಜಿ.ಎಂ. ಸುರೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್‌, ರತ್ನಮ್ಮ, ವಕ್ತಾರ ನಾಗರಾಜ್‌ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌, ಸೇರಿದಂತೆ ಚುನಾಯಿತ ಪ್ರತಿನಿಧಿ ಗಳಿಗೆ ಹಾಗೂ ಮೂರು ಜಿಲ್ಲೆಗಳ
ಬಿಜೆಪಿ ಪದಾಧಿಕಾರಿಗಳು, ಇತರೆ ಗಣ್ಯರಿಗೆ ವೇದಿಕೆ ಸಮೀಪದಲ್ಲೇ ಮತ್ತೂಂದು ವೇದಿಕೆ ನಿರ್ಮಿಸಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಕಾಣಿಕೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಹೆಗ್ಗುರುತುಗಳುಳ್ಳ ವಿಶೇಷ ವಸ್ತುಗಳನ್ನು ಕೊಡುಗೆಯಾಗಿ ನೀಡಿ ಸನ್ಮಾನಿಸಲಾಯಿತು. ಜಿಲ್ಲೆಯ ಪಾರಂಪರಿಕ ಬೆಳೆಗಳಾದ ಸೇವಂತಿಗೆ, ಚೆಂಡು ಹೂವು, ಮೆಣಸು, ಬದನೆ ಮತ್ತಿತರ ಸಸಿಗಳನ್ನಿಟ್ಟಿದ್ದ ಆರು ಟ್ರೇಗಳಿಗೆ ಹನಿ ಹನಿಯಾಗಿ ನೀರುಣಿಸುವ ಮೂಲಕ ಮೋದಿ ರ್ಯಾಲಿಗೆ ಚಾಲನೆ ನೀಡಿದರು.

Advertisement

ಜಿಲ್ಲೆಯ ಸಾಂಸ್ಕೃತಿಕ ವೀರರ ಪರಿಚಯ ಮಾಡುವ ಉದ್ದೇಶದಿಂದ ಬುಡಕಟ್ಟು ಹಿನ್ನೆಲೆಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಒಂದೂವರೆ ಅಡಿ ಎತ್ತರದ ರಥ, ಹಟ್ಟಿ ತಿಪ್ಪೇಶನ ಪ್ರತಿಮೆಯನ್ನು ವಿಶೇಷವಾಗಿ ತಯಾರಿಸಲಾಗಿತ್ತು. ಅದನ್ನು ಮೋದಿಯವರಿಗೆ ಕೊಡುಗೆಯಾಗಿ ನೀಡಲಾಯಿತು. ಚಳ್ಳಕೆರೆ ತಾಲೂಕಿನ ಕಂಬಳಿ
ನೇಕಾರರಿಂದ ಬಿಳಿ ಕಂಬಳಿಯನ್ನು ಕೈಯಿಂದ ತಯಾರಿಸಲಾಗಿತ್ತು. ಆ ಕಂಬಳಿ ಮೇಲ್ಭಾಗದಲ್ಲಿ ಬಿಜೆಪಿ ಚಿನ್ಹೆಯಾದ ಕಮಲದ ಹೂವನ್ನು ಚಿತ್ರಿಸಲಾಗಿತ್ತು. ಆ ಕಂಬಳಿಯನ್ನು ಮೋದಿಯವರಿಗೆ ಹೊದೆಸಲಾಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ ದೋಸೆಗೆ ವಿಶೇಷ ಸ್ಥಾನವಿದೆ. ಅಂತಹ ದೋಸೆಯನ್ನು ಮೋದಿ ಅವರಿಗೆ ಪರಿಚಯಿಸಲು ನಗರದ ಉಪಾಧ್ಯಾಯ ಹೋಟೆಲ್‌ನವರು ವಿಶೇಷವಾಗಿ ತಯಾರಿಸಿದ ದೋಸೆಯನ್ನು ವೇದಿಕೆ ಹಿಂಭಾಗದ ಕೊಠಡಿಯಲ್ಲಿ ಮೋದಿಗೆ ನೀಡಲಾಯಿತು. ಜೊತೆಗೆ ಎರಡು ರೀತಿಯ ಸಿಹಿತಿನಿಸುಗಳನ್ನು ಮೋದಿ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next